ಶಮಿ ಹ್ಯಾಟ್ರಿಕ್ ಧಮಾಕ; ಕ್ರಿಕೆಟ್ ಶಿಶುಗಳ ಎದುರು ಭಾರತಕ್ಕೆ ರೋಚಕ ಜಯ

India vs Afghanistan:11 ರನ್​ಗಳ ರೋಚಕ ಜಯದೊಂದಿಗೆ ಭಾರತ 9 ಅಂಕಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಇತ್ತ ಅಫ್ಘಾನಿಸ್ತಾ ತಂಡ ಸತತ 6ನೇ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿದ್ದಿದ್ದು ಕೊನೆಯ ಸ್ಥಾನದಲ್ಲಿದೆ.

Vinay Bhat | news18
Updated:June 24, 2019, 11:48 AM IST
ಶಮಿ ಹ್ಯಾಟ್ರಿಕ್ ಧಮಾಕ; ಕ್ರಿಕೆಟ್ ಶಿಶುಗಳ ಎದುರು ಭಾರತಕ್ಕೆ ರೋಚಕ ಜಯ
ಮೊಹಮ್ಮದ್ ಶಮಿ
  • News18
  • Last Updated: June 24, 2019, 11:48 AM IST
  • Share this:
ಬೆಂಗಳೂರು (ಜೂ. 22): ಸೌತಾಂಪ್ಟನ್​​ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್​ ವರೆಗೂ ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದ ಪಂದ್ಯದಲ್ಲಿ ಭಾರತ ಅಂತೂ 11 ರನ್​ಗಳ ಜಯ ಸಾಧಿಸಿತು.

ಕೊನೆಯ ಓವರ್​​ನಲ್ಲಿ ಜಯ ಯಾರಿಗೆ ಎಂದು ನಿರ್ಧಾರವಾಗಲಿದ್ದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು.

ಭಾರತ ನೀಡಿದ್ದ 225 ರನ್​ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಅಫ್ಘಾನ್ನರು ಗೆಲುವಿಗಾಗಿ ಎಲ್ಲಿಲ್ಲದ ಹೋರಾಟ ನಡೆಸಿದರು.

ಆರಂಭದಲ್ಲೇ ಹಜ್ರತುಲ್ಲ ಜಜಾಯ್ ಕೇವಲ 10 ರನ್​ ಗಳಿಸಿ ಶಮಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. 2ನೇ ವಿಕೆಟ್​ಗೆ ಜೊತೆಯಾದ ರೆಹ್ಮತ್ ಶಾ ಹಾಗೂ ಗುಲ್ಬದಿನ್ ನೈಬ್ 44 ರನ್​ಗಳ ಜೊತೆಯಾಟ ಆಡಿರಷ್ಟೆ. ಚೆನ್ನಾಗಿಯೆ ಆಡುತ್ತಿದ್ದ ನಾಯಕ ಗುಲ್ಬದಿನ್ 27 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ ಬುಮ್ರಾ ಮ್ಯಾಜಿಕ್ ಬಾಲ್​ಗೆ ರೆಹ್ಮತ್ ಶಾ(36) ಹಾಗೂ ಹಶ್ಮತುಲ್ಲ(21) ಕೂಡ ಪೆವಿಲಿಯನ್ ಹಾದಿ ಹಿಡಿದರು.

ಈ ಸಂದರ್ಭ ನಬಿ ಜೊತೆಗೂಡಿ ನಜನಿಬುಲ್ಲ ಜರ್ದನ್(21) ಕೊಂಚ ರನ್ ಕಲೆಹಾಕಿ ಔಟ್ ಆದರು. ರಶೀದ್ ಖಾನ್ 14 ರನ್ ಬಾರಿಸಿದರು. ಹೀಗೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ, ಕ್ರೀಸ್ ಕಚ್ಚಿ ಅದ್ಭುತ ಆಟ ಪ್ರದರ್ಶಿಸಿದ ನಬಿ ಬುಮ್ರಾ ಬೌಲಿಂಗ್​ನಲ್ಲೇ ಸಿಕ್ಸ್​ ಸಿಡಿಸಿ ತಂಡದ ಗೆಲುವನ್ನು ಮತ್ತಷ್ಟು ಹತ್ತಿರ ಮಾಡಿದರು.

ಪರಿಣಾಮ ಕೊನೆಯ ಓವರ್​​ನಲ್ಲಿ ಅಫ್ಘಾನ್​​ಗೆ ಗೆಲ್ಲಲು 16 ರನ್​ಗಳ ಅವಶ್ಯಕತೆಯಿತ್ತು. ಶಮಿ ಓವರ್​ನ ಮೊದಲ ಎಸೆತದಲ್ಲೇ ನಬಿ ಚೆಂಡನ್ನು ಬೌಂಡರಿಗೆ ಅಟ್ಟಿದರು. 2ನೇ ಎಸೆತ ಡಾಟ್ ಬಾಲ್ ಆಯಿತು. ಮೂರನೇ ಎಸೆತದಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೋಗಿ ಎಡವಿದ ನಬಿ ಅವರು ಹಾರ್ದಿಕ್​ ಹಿಡಿದ ಕ್ಯಾಚ್​ಗೆ ಬಲಿಯಾಗ ಬೇಕಾಯಿತು. ಈ ಮೂಲಕ ಪಂದ್ಯ ಭಾರತದತ್ತ ವಾಲಿತು. 4ನೇ ಎಸೆತದಲ್ಲಿ ಅಫ್ತಾಬ್ ಅಲಮ್ ಬೌಲ್ಡ್​ ಆದರೆ, 5ನೇ ಎಸೆತದಲ್ಲಿ ಮುಜೀದ್​ ಕೂಡ ಬೌಲ್ಡ್​ ಆದರು.

ಈ ಮೂಲಕ ಅಫ್ಘಾನಿಸ್ತಾನ 49.5 ಓವರ್​ಗೆ 213 ರನ್​ಗೆ ಆಲೌಟ್​ ಆಗಿ ಸೋಲೊಪ್ಪಿಗೊಂಡಿತು. ಕೊನೆಯ ಓವರ್​ನಲ್ಲಿ ಶಮಿ ತನ್ನ 3,4 ಹಾಗೂ 5ನೇ ಎಸೆತದಲ್ಲಿ ಮೂರು ವಿಕೆಟ್ ಕಿತ್ತು ವಿಶ್ವಕಪ್​ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಕೊನೆಯ ವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ ನಬಿ 55 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 52 ರನ್​ಗೆ ಔಟ್ ಆದರು.ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದರೆ, ಬುಮ್ರಾ, ಚಹಾಲ್ ಹಾಗೂ ಹಾರ್ದಿಕ್ ತಲಾ 2 ವಿಕೆಟ್ ಪಡೆದರು. ಅತ್ಯುತ್ತಮ ದಾಳಿ ಸಂಘಟಿಸಿದ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

11 ರನ್​ಗಳ ರೋಚಕ ಜಯದೊಂದಿಗೆ ಭಾರತ 9 ಅಂಕಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಇತ್ತ ಅಫ್ಘಾನಿಸ್ತಾ ತಂಡ ಸತತ 6ನೇ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿದ್ದಿದ್ದು ಕೊನೆಯ ಸ್ಥಾನದಲ್ಲಿದೆ.

 ಇದಕ್ಕೂ ಮುನ್ನ ಟಾಸ್ ಗೆದ್ದ ಟೀಂ ಇಂಡಿಯಾ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಮುಜೀದ್ ಸ್ಪಿನ್ ಮೋಡಿಗೆ ರೋಹಿತ್ ಶರ್ಮಾ ಕೇವಲ 1 ರನ್​ಗೆ ಬೌಲ್ಡ್​ ಆಗಿದರು.

ಈ ಸಂದರ್ಭ ಕೆ ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಶ್ರಮಿಸಿದರು. ಆದರೆ ರಾಹುಲ್ 30 ರನ್​ ಗಳಿಸಿರುವಾಗ ಎಡವಿ ನಬಿ ಬೌಲಿಂಗ್​ನಲ್ಲಿ ನಿರ್ಗಮಿಸಿದರು.

ಬಳಿಕ ವಿಜಯ್ ಶಂಕರ್ ಜೊತೆಯಾದ ಕೊಹ್ಲಿ ಉತ್ತಮ ಆಟ ಪ್ರದರ್ಶಿಸಿದರು. 47 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ ಈ ಜೋಡಿಯ ಖಾತೆಯಿಂದ 58 ರನ್​ಗಳ ಕಾಣಿಕೆಯಷ್ಟೆ ಮೂಡಿಬಂತು. ಶಂಕರ್ 29 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರು.

ಶಂಕರ್ ಬೆನ್ನಲ್ಲೆ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಕೊಹ್ಲಿ 63 ಎಸೆತಗಳಲ್ಲಿ 67 ರನ್ ಬಾರಿಸಿ ರೆಹ್ಮತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರದಲ್ಲಿ ಎಂ ಎಸ್ ಧೋನಿ ಜೊತೆಯಾದ ಕೇದರ್ ಜಾಧವ್ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರು. ಅದರಂತೆ ನಿಧಾನಗತಿಯಲ್ಲಿ ಜೊತೆಯಾಟ ಆಡಿದ ಈ ಜೋಡಿ 57 ರನ್​ಗಳ ಕಾಣಿಕೆ ನೀಡಿತು. ಎಂ ಎಸ್ ಧೋನಿ 52 ಎಸೆತಗಳಲ್ಲಿ ಕೇವಲ 28 ರನ್​ಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಇದು ತಂಡದ ರನ್​​ಗತಿಯಲ್ಲಿ ಮತ್ತಷ್ಟು ಕುಸಿತ ಕಂಡಿತು.

ಕೊನೆಯಲ್ಲಿ ಕೇದರ್ ಜಾಧವ್ ಒಂದಿಷ್ಟು ರನ್ ಕಲೆಹಾಕಿದ ಪರಿಣಾಮ ಭಾರತ 50 ಓವರ್​ಗೆ 8 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಜಾಧವ್ 68 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿ ಅಜೇಯ 52 ರನ್ ಬಾರಿಸಿದರು.

ಅಫ್ಘಾನಿಸ್ತಾನ ಪರ ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ತಲಾ 2 ವಿಕೆಟ್ ಕಿತ್ತರೆ, ಮುಜೀದ್, ರಶೀದ್ ಖಾನ್, ಅಫ್ತಾಬ್ ಅಲಾಮ್ ಹಾಗೂ ರೆಹ್ಮತ್ ಶಾ ತಲಾ 1 ವಿಕೆಟ್ ಪಡೆದರು.

 
First published: June 22, 2019, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading