ಭಾರತದ ಕಿವೀಸ್ ಪ್ರವಾಸ ಮುಂದೂಡಿಕೆ; ಮುಂದಿನ ವರ್ಷಾಂತ್ಯದವರೆಗೂ ಕಾಲಿಡಲ್ಲ ಟೀಮ್ ಇಂಡಿಯಾ
India vs New Zealand ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವೇಳಾಪಟ್ಟಿ ಸಂಪೂರ್ಣ ತುಂಬಿಹೋಗಿದ್ದು, ಈ ಹಿನ್ನೆಲೆಯಲ್ಲಿ ಮೊದಲೇ ನಿಗದಿಯಾಗಿದ್ದ ಭಾರತದ ಪ್ರವಾಸವನ್ನು ಮುಂದಿನ ವರ್ಷಾಂತ್ಯಕ್ಕೆ ಮುಂದೂಡಲಾಗಿದೆ. ಆದರೆ, ಭಾರತಕ್ಕೆ ನ್ಯೂಜಿಲೆಂಡ್ ಪ್ರವಾಸ ಯಥಾಪ್ರಕಾರ ನಡೆಯಲಿದೆ.
ನವದೆಹಲಿ, ಸೆ. 16: ಕೋವಿಡ್ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಐದನೇ ಪಂದ್ಯವನ್ನು ಭಾರತ ಮುಂದೂಡಿದ ಬೆನ್ನಲ್ಲೇ ಈಗ ನ್ಯೂಜಿಲೆಂಡ್ ಕ್ರಿಕೆಟ್ ಪ್ರವಾಸವನ್ನೂ ಮುಂದೂಡಿದೆ. ಇದಕ್ಕೆ ಪರೋಕ್ಷವಾಗಿ ಕೋವಿಡ್ ಕಾರಣವಾಗಿದೆ. ಈ ವರ್ಷ ನಡೆಯಬೇಕಿದ್ದ ಭಾರತದ ನ್ಯೂಜಿಲೆಂಡ್ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಿಕೆ ಮಾಡಲಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಕೂಡ ವೇಳಾಪಟ್ಟಿಯ ಒತ್ತಡದಲ್ಲಿದೆ. ಹಲವು ಸರಣಿಗಳು ನಡೆಯಬೇಕಿದೆ. ಹೀಗಾಗಿ, ಭಾರತ ತನ್ನ ಕ್ರಿಕೆಟ್ ಪ್ರವಾಸ ರದ್ದು ಮಾಡಿರುವುದಕ್ಕೆ ನ್ಯೂಜಿಲೆಂಡ್ ಚಕಾರ ಎತ್ತಿಲ್ಲ. 2023ರ ಏಕದಿನ ಕ್ರಿಕೆಟ್ ಸೂಪರ್ ಲೀಗ್ ಚಾಂಪಿಯನ್ಶಿಪ್ನ ಅಡಿಯಲ್ಲಿ ಭಾರತ ತಂಡ ಮುಂದಿನ ವರ್ಷ ನ್ಯೂಜಿಲೆಂಡ್ನಲ್ಲಿ ಮೂರು ಏಕದಿನ ಪಂದ್ಯಗಳನ್ನ ಆಡಲಿದೆ. ಇದು ಮುಂದಿನ ವರ್ಷಾಂತ್ಯದಲ್ಲಿ ನಿಗದಿಯಾಗಿರುವ ಪಂದ್ಯಗಳಾಗಿವೆ. ಅಂದರೆ, ಅಲ್ಲಿಯವರೆಗೂ ಕಿವೀಸ್ ನಾಡಿಗೆ ಭಾರತ ಹೋಗುವುದಿಲ್ಲ.
ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಕೂಡ ಭಾರತ ತಂಡ ಈ ವರ್ಷ ನಿಗದಿಯಾದಂತೆ ಕ್ರಿಕೆಟ್ ಪ್ರವಾಸ ಬರುತ್ತಿಲ್ಲ. 2022ರ ಅಂತ್ಯದಲ್ಲಿ ಪಂದ್ಯಗಳನ್ನ ಇಲ್ಲಿ ಆಡಲಿದೆ ಎಂದು ಸ್ಪಷ್ಟಪಡಿಸಿದೆ. 2022 ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆ ವಿಶ್ವಕಪ್ ಮುಗಿದ ಬಳಿಕ ಭಾರತ ತಂಡ ನ್ಯೂಜಿಲೆಂಡ್ ನೆಲಕ್ಕೆ ಪ್ರವಾಸ ಹೋಗಲಿದೆ.
2022ರ ಟಿ20 ವಿಶ್ವಕಪ್ ಆಯೋಜನೆಗೆ ಕಾರಣ?
ಈಗ 2021 ಟಿ20 ವಿಶ್ವಕಪ್ ನಡೆಯುತ್ತಿದೆ. ದಿಢೀರನೇ ಮುಂದಿನ ವರ್ಷವೂ ಟಿ20 ವರ್ಲ್ಡ್ ಕಪ್ ಆಯೋಜಿಸಲು ಕಾರಣವೇನು ಎಂಬ ಅನುಮಾನ ಮೂಡಬಹುದು. ಪ್ರತೀ ಎರಡು ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ನಡೆಯುತ್ತದೆ. ವಾಸ್ತವವಾಗಿ 2018ರ ಬಳಿಕ 2020ರ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕತೆಯ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಈಗ ಅದನ್ನ 2022ಕ್ಕೆ ನಡೆಸಲಾಗುತ್ತಿದೆ. 2021ರ ವಿಶ್ವಕಪ್ ಭಾರತದಲ್ಲಿ ನಡೆಯಲು ನಿಗದಿಯಾಗಿತ್ತು. ಅದನ್ನ ಭಾರತದ ಬದಲು ಯುಎಇಯಲ್ಲಿ ನಡೆಸಲಾಗುತ್ತಿದೆ.
ನ್ಯೂಜಿಲೆಂಡ್ ತಂಡಕ್ಕೆ ಈ ವರ್ಷ ಬಹಳ ಬ್ಯುಸಿ ಸ್ಕೆಡ್ಯೂಲ್ ಇದೆ. ಸದ್ಯ ಪಾಕಿಸ್ತಾನದ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ನಂತರ ಟಿ20 ವಿಶ್ವಕಪ್ ಮುಗಿಸಿ ಭಾರತಕ್ಕೆ ಕಾಲಿಡುತ್ತಾರೆ. ಇಲ್ಲಿಂದ ಅವರು ತವರಿಗೆ ತೆರಳಿದರೆ ಅಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ತಂಡಗಳ ಪ್ರವಾಸ ನಿಗದಿಯಾಗಿದೆ. ತವರಿನಲ್ಲಿರುವ ಕೋವಿಡ್ ನಿಯಮಗಳ ಮಧ್ಯೆ ಕ್ರಿಕೆಟ್ ವೇಳಾಪಟ್ಟಿಯ ಒತ್ತಡಕ್ಕೆ ನ್ಯೂಜಿಲೆಂಡ್ ಕ್ರಿಕೆಟಿಗರು ಸಿಲುಕಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಕಿವೀಸ್ ವೇಳಾಪಟ್ಟಿ:
ಟಿ20 ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನ ತಂಡಗಳ ಜೊತೆ ಎರಡನೇ ಗುಂಪಿನಲ್ಲಿ ನ್ಯೂಜಿಲೆಂಡ್ ಕೂಡ ಇದೆ. ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 26ರಂದು ನ್ಯೂಜಿಲೆಂಡ್ ಮೊದಲ ಪಂದ್ಯವಾಡಲಿದೆ. ಅಕ್ಟೋಬರ್ 31ರಂದು ಭಾರತಕ್ಕೆ ಕಿವೀಸ್ ಸವಾಲು ಹಾಕಲಿದೆ. ನವೆಂಬರ್ 7ರಂದು ಅಫ್ಘಾನಿಸ್ತಾನ ವಿರುದ್ಧ ಪಂದ್ಯ ಆಡಲಿದೆ. ಇದಕ್ಕೂ ಮುನ್ನ ನವೆಂಬರ್ 3 ಮತ್ತು ನವೆಂಬರ್ 5ರಂದು ಗ್ರೂಪ್ ಹಂತದಿಂದ ಸೂಪರ್-12 ಕ್ವಾಲಿಫೈ ಆಗುವ ತಂಡಗಳಿಗೆ ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ