IND vs SA: ರಿಷಭ್ ಪಂತ್ ದಾಖಲೆಗಳು; ಟೀಮ್ ಇಂಡಿಯಾದ ಕ್ಯಾಚ್ ಬಲಿ ದಾಖಲೆಗಳು

India vs South Africa Test Series: ಭಾರತ ತಂಡ ಈ ಪಂದ್ಯದಲ್ಲಿ ಕ್ಯಾಚ್ ಔಟ್ ಆಗಿಯೇ ಎಲ್ಲಾ 20 ವಿಕೆಟ್ ಕಳೆದುಕೊಂಡಿದೆ. ಟೆಸ್ಟ್ ಇತಿಹಾಸದಲ್ಲಿ ತಂಡವೊಂದು ಇದೇ ಮೊದಲ ಬಾರಿಗೆ ಈ ರೀತಿ ವಿಕೆಟ್ ಕಳೆದುಕೊಂಡಿರುವುದು.

ಕೇಪ್​ಟೌನ್​ನ ನ್ಯೂಲೆಂಡ್ಸ್ ಸ್ಟೇಡಿಯಂ

ಕೇಪ್​ಟೌನ್​ನ ನ್ಯೂಲೆಂಡ್ಸ್ ಸ್ಟೇಡಿಯಂ

  • Share this:
    ಕೇಪ್​ಟೌನ್, ಜ. 14: ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿ ಬ್ಯಾಟುಗಾರರಿಗಿಂತ ಬೌಲರ್​ಗಳಿಗೆ ಖುಷಿ ಕೊಟ್ಟಿದೆ. ಭಾರತ ಮತ್ತು ಸೌತ್ ಆಫ್ರಿಕಾ ಎರಡೂ ತಂಡಗಳ ಬ್ಯಾಟುಗಾರರು ರನ್ ಗಳಿಸಲು ಬಹಳಷ್ಟು ಪರದಾಡಿದ್ದಾರೆ. ಅದಕ್ಕೆ ಕಾರಣ ವೇಗದ ಬೌಲಿಂಗ್​ಗೆ ಸ್ವರ್ಗ ಎನಿಸಿರುವ ವಿಕೆಟ್​ಗಳು. ಸರಣಿಯ ಮೂರೂ ಪಂದ್ಯಗಳು ನಿಕಟ ಪೈಪೋಟಿ ಕಂಡಿವೆ. ಎರಡೂ ತಂಡಗಳ ಬೌಲರ್ಸ್ ವಿಜೃಂಬಿಸಿದ್ದಾರೆ. ಸೌತ್ ಆಫ್ರಿಕಾದ ನಾಯಕ ಡೀನ್ ಎಲ್ಗರ್, ಟೆಂಬ ಬವುಮಾ ಮತ್ತು ಕೀಗನ್ ಪೀಟರ್ಸನ್ ಈ ಮೂವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಎರಡೂ ತಂಡಗಳ ನಡುವಿನ ಏಕೈಕ ವ್ಯತ್ಯಾಸ ಎನ್ನಲಡ್ಡಿ ಇಲ್ಲ.

    ಕೇಪ್​ಟೌನ್​ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆಲ ಕುತೂಹಲಕಾರಿ ಸಂಗತಿ, ದಾಖಲೆಗಳು ಬಂದಿವೆ. ಇಡೀ ಸರಣಿಯಲ್ಲೂ ಹಲವು ದಾಖಲೆಗಳು, ಮೈಲಿಗಲ್ಲುಗಳಿವೆ. ಕೆಲ ಪ್ರಮುಖ ಸಂಗತಿಗಳತ್ತ ಒಂದು ನೋಟ….

    ಎಲ್ಲಾ ಬ್ಯಾಟರ್ಸ್ ಕ್ಯಾಚಿತ್ತು ಔಟ್:

    ಕೇಪ್​ಟೌನ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡೂ ಇನ್ನಿಂಗ್ಸಲ್ಲಿ ಆಲೌಟ್ ಆಗಿದೆ. ಬರೀ ಆಲೌಟ್ ಆಗಿದ್ದರೆ ವಿಶೇಷತೆ ಇರುತ್ತಿರಲಿಲ್ಲ. ಭಾರತ ಈ ಪಂದ್ಯದಲ್ಲಿ ಕಳೆದುಕೊಂಡ ಎಲ್ಲಾ 20 ವಿಕೆಟ್​ಗಳು ಕ್ಯಾಚಿತ್ತು ಔಟಾಗಿದ್ದವೇ ಆಗಿವೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಒಂದು ಪಂದ್ಯದಲ್ಲಿ ಎರಡೂ ಇನ್ನಿಂಗ್ಸಲ್ಲಿ ಕ್ಯಾಚಿತ್ತು ಎಲ್ಲಾ ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲು. ಈ ಹಿಂದೆ ಕೆಲ ತಂಡಗಳು ಒಂದು ಪಂದ್ಯದಲ್ಲಿ 19 ವಿಕೆಟ್​ಗಳನ್ನ ಕ್ಯಾಚಿತ್ತು ಔಟಾಗಿ ಕಳೆದುಕೊಂಡಿದ್ದ ನಿದರ್ಶನಗಳುಂಟು ಅಷ್ಟೇ.

    ಸರಣಿಯಲ್ಲಿ 55 ಬಾರಿ ಕ್ಯಾಚ್​ಗೆ ಬಲಿ:

    ಮೂರನೇ ಪಂದ್ಯ ಮಾತ್ರವಲ್ಲ, ಇಡೀ ಸರಣಿಯಲ್ಲೂ ಭಾರತೀಯರು ಕ್ಯಾಚಿತ್ತು ಔಟಾಗಿದ್ದೇ ಹೆಚ್ಚು. ಮೂರೂ ಪಂದ್ಯಗಳಲ್ಲಿ ಭಾರತದ ಎರಡೂ ಇನ್ನಿಂಗ್ಸ್ ಆಲೌಟ್ ಆಗಿದೆ. ಅಂದರೆ 60 ವಿಕೆಟ್​ಗಳನ್ನ ಕಳೆದುಕೊಂಡಿದೆ. ಇದರಲ್ಲಿ 55 ವಿಕೆಟ್​ಗಳು ಕ್ಯಾಚಿತ್ತು ಔಟಾಗಿರುವಂಥವೇ. ಇದೂ ಕೂಡ ವಿಶ್ವದಾಖಲೆಯೇ.

    ಇದನ್ನೂ ಓದಿ: Mayank Agarwal: ಮಯಂಕ್ ಬ್ಯಾಟಿಂಗ್​ನಲ್ಲಿ ತಾಂತ್ರಿಕ ದೋಷ; ವಿದೇಶದ ಪಿಚ್​ಗಳಲ್ಲಿ ಕಷ್ಟ: ಅಜಿತ್ ಅಗರ್ಕರ್

    ಭಾರತದಿಂದ 2 ಶತಕ; ಸೌತ್ ಆಫ್ರಿಕಾ ಶೂನ್ಯ:

    ಈಗ ನಡೆಯುತ್ತಿರುವುದೂ ಸೇರಿ ಈ ಸರಣಿಯ ಮೂರು ಪಂದ್ಯಗಳಲ್ಲಿ ಈವರೆಗೂ ಎರಡು ಶತಕ ಮಾತ್ರ ಬಂದಿವೆ. ಎರಡೂ ಕೂಡ ಭಾರತೀಯರೇ ಗಳಿಸಿರುವುದು. ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಈ ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ಅವರು ಶತಕ ಗಳಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಸೌತ್ ಆಫ್ರಿಕಾದ ಆಟ ಇನ್ನೂ ಮುಗಿದಿಲ್ಲ. ಕೀಗನ್ ಪೀಟರ್ಸನ್ ಅವರಿಗೆ ಶತಕ ಗಳಿಸುವ ಅವಕಾಶ ಇನ್ನೂ ಇದೆ.

    ರಿಷಭ್ ಪಂತ್ ದಾಖಲೆಗಳು:

    * ರಿಷಭ್ ಪಂತ್ ನಿನ್ನೆ ತಮ್ಮ ನಾಲ್ಕನೇ ಟೆಸ್ಟ್ ಶತಕ ದಾಖಲಿಸಿದರು. ಇದು ವಿದೇಶದ ಪಿಚ್​ನಲ್ಲಿ ಗಳಿಸಿದ ಮೂರನೇ ಶತಕವಾಗಿದೆ. ವಿದೇಶದ ನೆಲದಲ್ಲಿ ಭಾರತದ ವಿಕೆಟ್ ಕೀಪರ್ ಗಳಿಸಿದ ಅತಿ ಹೆಚ್ಚು ಶತಕ ಎಂಬ ದಾಖಲೆ ಅವರದ್ದಾಗಿದೆ.

    * ರಿಷಭ್ ಪಂತ್ ಅವರು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಅಫ್ರಿಕಾ ನೆಲದಲ್ಲಿ ಟೆಸ್ಟ್ ಶತಕ ಗಳಿಸಿದ್ದಾರೆ. ಪಂತ್ ಬಿಟ್ಟರೆ ಈ ಮೂರು ದೇಶಗಳಲ್ಲಿ ಶತಕ ಗಳಿಸಿದ ಇಬ್ಬರೇ ಇಬ್ಬರು ವಿಕೆಟ್ ಕೀಪರ್​ಗಳೆಂದರೆ ಆಸ್ಟ್ರೇಲಿಯಾದ ಅಡಮ್ ಗಿಲ್​ಕ್ರಿಸ್ಟ್ ಮತ್ತು ಇಂಗ್ಲೆಂಡ್​ನ ಜಾನಿ ಬೇರ್​ಸ್ಟೋ.

    ಇದನ್ನೂ ಓದಿ: Virat Fans: ಟ್ವೀಟಿಗರಿಗೆ 8 ಲಕ್ಷ ರೂ. ಕೊಡಬೇಕಂತೆ ಈ ಕೊಹ್ಲಿ ಅಭಿಮಾನಿ..! ಯಾಕೆ ಗೊತ್ತಾ..?

    * ಭಾರತದ ಎರಡನೇ ಇನ್ನಿಂಗ್ಸ್ 198 ರನ್​ಗೆ ಅಂತ್ಯವಾಯಿತು. ಇದರಲ್ಲಿ ರಿಷಭ್ ಪಂತ್ ಅಜೇಯ 100 ರನ್ ಗಳಿಸಿದರು. ಭಾರತ ತಂಡ 200ಕ್ಕಿಂತ ಕಡಿಮೆ ರನ್ ಗಳಿಸಿದ ಇನ್ನಿಂಗ್ಸ್​ನಲ್ಲಿ ಆಟಗಾರನೊಬ್ಬ ಶತಕ ಗಳಿಸಿದ್ದು ಇದೇ ಮೊದಲು. ಬೇರೆ ಬೇರೆ ತಂಡಗಳಲ್ಲಿ 12 ಮಂದಿ ಆಟಗಾರರು ಈ ಸಾಧನೆ ಮಾಡಿದ್ಧಾರೆ.

    * ಭಾರತದ 198 ರನ್ ಮೊತ್ತದಲ್ಲಿ ರಿಷಭ್ ಪಂತ್ ಅವರ ಕೊಡುಗೆಯೇ 100 ರನ್ ಇದೆ. ಅದೂ ಅವರು ನಂಬರ್ 6ನೇ ಸ್ಥಾನದಲ್ಲಿ ಬಂದು ಇಷ್ಟು ರನ್ ಗಳಿಸಿದ್ದಾರೆ. ತಂಡದ ಶೇ. 58.82ರಷ್ಟು ರನ್​ಗಳನ್ನ ಪಂತ್ ಅವರು ಗಳಿಸಿದ್ದಾರೆ. ಪ್ರತಿಶತ ಲೆಕ್ಕಾಚಾರದಲ್ಲಿ ಪಂತ್ ಅವರಿಗಿಂತ ಹೆಚ್ಚು ರನ್ ಪಾಲು ಗಳಿಸಿರುವ ಭಾರತೀಯ ಕ್ರಿಕೆಟಿಗ ಎಂದರೆ ಕಪಿಲ್ ದೇವ್. 1992ರಲ್ಲಿ ಇದೇ ಸೌತ್ ಆಫ್ರಿಕಾ ವಿರುದ್ಧ ಕಪಿಲ್ ದೇವ್ 129 ರನ್ ಗಳಿಸಿದ್ದರು. ಆಗ ಭಾರತದ ಮೊತ್ತದಲ್ಲಿ ಕಪಿಲ್ ಪಾಲು ಶೇ. 62.32ರಷ್ಟು ಇತ್ತು.
    Published by:Vijayasarthy SN
    First published: