IND vs NZ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಬೃಹತ್ ಗೆಲುವು; ಟೆಸ್ಟ್ ಸರಣಿ ವಶಕ್ಕೆ

India beat New Zealand by 372 Runs- ಮುಂಬೈನಲ್ಲಿ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯವನ್ನ ಭಾರತ ಸುಲಭವಾಗಿ ಗೆದ್ದಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ 1-0ಯಿಂದ ಭಾರತದ ಕೈವಶವಾಗಿದೆ.

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

  • Share this:
    ಮುಂಬೈ, ಡಿ. 5: ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ನಿರೀಕ್ಷೆಯಂತೆ ಬೃಹತ್ ಗೆಲುವು ಸಾಧಿಸಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ 372 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಟೆಸ್ಟ್ ಸರಣಿಯನ್ನೂ ವಶಪಡಿಕೊಂಡಿತು. ಇಂದು ನಡೆದ ನಾಲ್ಕನೇ ದಿನದಾಟದ ಮೊದಲ ಸೆಷನ್ ಆರಂಭಗೊಂಡ ಕೆಲವೇ ಓವರ್​ಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 167 ರನ್​ಗೆ ಆಲೌಟ್ ಮಾಡಿತು. ಇಂದು 27 ರನ್ ಸೇರಿಸುವಷ್ಟರಲ್ಲಿ ನ್ಯೂಜಿಲೆಂಡ್ ತಂಡದ ಉಳಿದ 6 ವಿಕೆಟ್​ಗಳು ಪತನಗೊಂಡವು. ಆರ್ ಅಶ್ವಿನ್ ಮತ್ತು ಜಯಂತ್ ಯಾದವ್ ಇಬ್ಬರೂ ತಲಾ 4 ವಿಕೆಟ್ ಪಡೆದರು.

    ಗೆಲ್ಲಲು 540 ರನ್​ಗಳ ಬೃಹತ್ ಗುರಿಯನ್ನ ನ್ಯೂಜಿಲೆಂಡ್ ಚೇಸ್ ಮಾಡುವ ಯಾವ ನಿರೀಕ್ಷೆಯೂ ಇರಲಿಲ್ಲ. ಎಷ್ಟು ಹೊತ್ತು ಕಿವೀಸ್ ಬ್ಯಾಟುಗಾರರು ಆಡಿ ಭಾರತದ ಗೆಲುವನ್ನು ಎಷ್ಟು ವಿಳಂಬಗೊಳಿಸಬಹುದು ಎಂಬುದಷ್ಟೇ ಉಳಿದಿದ್ದ ಕುತೂಹಲ. ಪಂದ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದೇ ಅಚ್ಚರಿ ಎನಿಸಿತ್ತು.

    ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಕೆವಲ 62 ರನ್​ಗೆ ಆಲೌಟ್ ಆದಾಗ ಭಾರತ ಫಾಲೋ ಆನ್ ಏರಿದ್ದರೆ ಪಂದ್ಯ ಎರಡು ಅಥವಾ ಮೂರನೇ ದಿನದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆ ಇತ್ತು. ಆದರೆ ವಿರಾಟ್ ಕೊಹ್ಲಿ ಫಾಲೋ ಆನ್ ಹೇರದೇ ಎರಡನೇ ಇನ್ನಿಂಗ್ಸ್ ಬ್ಯಾಟ್ ಮಾಡುವ ಅಚ್ಚರಿ ನಿರ್ಧಾರ ಮಾಡಿದರು. ತಂಡದ ಬ್ಯಾಟುಗಾರರಿಗೆ ಇನ್ನಷ್ಟು ಬ್ಯಾಟಿಂಗ್ ಅಭ್ಯಾಸ ಒದಗಿಸುವ ಯೋಚನೆ ಅವರದ್ದಾಗಿದ್ದಿರಬಹುದು.

    ಬಸವಳಿದಿದ್ದ ನ್ಯೂಜಿಲೆಂಡ್ ತಂಡದ ಬೌಲರ್​ಗಳನ್ನ ಮಯಂಕ್ ಅಗರ್ವಾಲ್ ಮೊದಲಾದ ಬ್ಯಾಟುಗಾರರು ಸುಲಭವಾಗಿ ಎದುರಿಸಿದರು. ಭಾರತದ ಮೊದಲ ಇನ್ನಿಂಗ್ಸಲ್ಲಿ 10 ವಿಕೆಟ್ ಕಬಳಿಸಿದ್ದ ನ್ಯೂಜಿಲೆಂಡ್​ನ ಎಜಾಜ್ ಪಟೇಲ್ ಎರಡನೇ ಇನ್ನಿಂಗ್ಸಲ್ಲಿ 4 ವಿಕೆಟ್​ಗೆ ತೃಪ್ತಿಪಡಬೇಕಾಯಿತು. ರಚಿನ್ ರವೀಂದ್ರ ಅವರಿಗೆ ಕಿವೀಸ್ ಕ್ಯಾಪ್ಟನ್ ಹೆಚ್ಚು ಬೌಲಿಂಗ್ ಅವಕಾಶ ಕೊಟ್ಟರು. ಪರಿಣಾಮವಾಗಿ ಅವರು 3 ವಿಕೆಟ್ ಪಡೆಯಲು ಸಫಲರಾದರು.

    ನ್ಯೂಜಿಲೆಂಡ್ ತಂಡ ಹೀನಾಯವಾಗಿ ಸೋತರೂ ಎಜಾಜ್ ಪಟೇಲ್ 10 ವಿಕೆಟ್ ಪಡೆದ ಐತಿಹಾಸಿ ಸಾಧನೆಯೊಂದೇ ಸ್ಮರಣೀಯವಾಗಿ ಉಳಿದುಕೊಂಡಿದ್ದು.

    ಇದನ್ನೂ ಓದಿ: R Ashwin- ಮುಂಬೈ ಟೆಸ್ಟ್​ನಲ್ಲಿ ಆರ್ ಅಶ್ವಿನ್ ಬರೆದ ದಾಖಲೆಗಳಿವು

    ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್​ನಲ್ಲಿ ಹೈಲೈಟ್ ಆಗಿದ್ದು ಮಯಂಕ್ ಅಗರ್ವಾಲ್ ಮತ್ತು ಅಕ್ಷರ್ ಪಟೇಲ್. ಮಯಂಕ್ ಅವರು ಶತಕ ಮತ್ತು ಅರ್ಧಶತಕ ಗಳಿಸಿದರೆ, ಅಕ್ಷರ್ ಪಟೇಲ್ 52 ಮತ್ತು ಅಜೇ 41 ರನ್ ಗಳಿಸಿದರು. ಇವರಿಬ್ಬರು ಬಿಟ್ಟರೆ ಶುಬ್ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.

    ನ್ಯೂಜಿಲೆಂಡ್​ನ ಎಜಾಜ್ ಪಟೇಲ್ ಎರಡೂ ಇನ್ನಿಂಗ್ಸ್ ಸೇರಿ 14 ವಿಕೆಟ್ ಪಡೆದು ಟಾಪ್ ಬೌಲರ್ ಎನಿಸಿದರು. ಭಾರತದ ಆರ್ ಅಶ್ವಿನ್ ಒಟ್ಟಾರೆ 8 ವಿಕೆಟ್ ಪಡೆದರೆ ಜಯಂತ್ ಯಾದವ್ 5, ಮೊಹಮ್ಮದ್ ಸಿರಾಜ್ 3 ಮತ್ತು ಅಕ್ಷರ್ ಪಟೇಲ್ 3 ವಿಕೆಟ್ ಪಡೆದರು. ಕೆಲ ತಿಂಗಳ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಭಾರತ ಈಗ ಸೇಡು ತೀರಿಸಿಕೊಂಡಂತಾಗಿದೆ.

    ಸ್ಕೋರು ವಿವರ:

    ಭಾರತ ಮೊದಲ ಇನ್ನಿಂಗ್ಸ್ 109.5 ಓವರ್ 325/10

    ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 28.1 ಓವರ್ 62/10

    ಭಾರತ ಎರಡನೇ ಇನ್ನಿಂಗ್ಸ್ 70 ಓವರ್ 276/7 (ಡಿಕ್ಲೇರ್)

    ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 56.3 ಓವರ್ 167/10
    (ಡರಿಲ್ ಮಿಚೆಲ್ 60, ಹೆನ್ರಿ ನಿಕೋಲ್ಸ್ 44, ರಚಿನ್ ರವೀಂದ್ರ 18 ರನ್- ಆರ್ ಅಶ್ವಿನ್ 34/4, ಜಯಂತ್ ಯಾದವ್ 49/4)
    Published by:Vijayasarthy SN
    First published: