IND vs SA: ಪೂಜಾರ ಕೈಚೆಲ್ಲಿದ ಕ್ಯಾಚ್; ಹೆಲ್ಮೆಟ್ಗೆ ಬಡಿದ ಚೆಂಡು; ಭಾರತಕ್ಕೆ ಬಿತ್ತು ದಂಡ
Pujara Catch Drop: ಒಳ್ಳೆಯ ಫಾರ್ಮ್ನಲ್ಲಿದ್ದ ಟೆಂಬಾ ಬವುಮಾ 17 ರನ್ ಗಳಿಸಿದ್ದಾಗ ಚೇತೇಶ್ವರ್ ಪೂಜಾರ ಸ್ಲಿಪ್ನಲ್ಲಿ ಕ್ಯಾಚ್ ಕೈಚೆಲ್ಲಿದರು. ಅಷ್ಟೇ ಅಲ್ಲ ಡ್ರಾಪ್ ಆದ ಚೆಂಡು ಫೀಲ್ಡ್ನಲ್ಲಿ ಇರಿಸಿದ್ದ ಹೆಲ್ಮೆಟ್ಗೆ ತಾಗಿದ್ದರಿಂದ ನಿಯಮ ಉಲ್ಲಂಘನೆಯಾಗಿ ಭಾರತಕ್ಕೆ 5 ರನ್ ಪೆನಾಲ್ಟಿ ಕೂಡ ಕೊಡಲಾಯಿತು.
ಕೇಪ್ಟೌನ್, ಜ. 12: ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯವೂ ತುರುಸಿನ ಪೈಪೋಟಿ ಕಾಣುತ್ತಿದೆ. ಮೊದಲ ದಿನ ವಿರಾಟ್ ಕೊಹ್ಲಿ ಮತ್ತು ಸೌತ್ ಆಫ್ರಿಕಾ ಬೌಲರ್ಸ್ ವಿಜೃಂಬಿಸಿದರೆ, ಇಂದು ಎರಡನೇ ದಿನ ಕೀಗನ್ ಪೀಟರ್ಸನ್ ಮತ್ತು ಭಾರತದ ಬೌಲರ್ಸ್ ವಿಜೃಂಬಿಸಿದ್ದಾರೆ. ಎರಡನೇ ದಿನ ನಡೆದ ಆಟದ ಹೈಲೈಟ್ನಲ್ಲಿ ಚೇತೇಶ್ವರ್ ಪೂಜಾರ ಕೈಚೆಲ್ಲಿದ ಕ್ಯಾಚ್ ಕೂಡ ಒಂದು. ಅದಕ್ಕೆ ಕಾರಣವೂ ಇದೆ.
ಚೇತೇಶ್ವರ್ ಪೂಜಾರ ಡ್ರಾಪ್ ಮಾಡಿದ ಕ್ಯಾಚ್ ಟೆಂಬ ಬವುಮ ಅವರದ್ದಾಗಿತ್ತು. ಇದರ ಜೊತೆಗೆ ಭಾರತಕ್ಕೆ 5 ರನ್ ಪೆನಾಲ್ಟಿ ಕೂಡ ಹಾಕಲಾಗಿತ್ತು. ಅಂದರೆ ಭಾರತ ಕ್ಯಾಚ್ ಡ್ರಾಪ್ ಮಾಡಿದ್ದರ ಜೊತೆಗೆ ಸೌತ್ ಆಫ್ರಿಕಾಗೆ ಫ್ರೀ ಆಗಿ 5 ರನ್ ಕೊಡಬೇಕಾಯಿತು. ಅದಕ್ಕೆ ಕಾರಣ ಇದು….
ಅದು 50ನೇ ಓವರ್. ಶಾರ್ದೂಲ್ ಠಾಕೂರ್ ಎಸೆತದಲ್ಲಿ ಟೆಂಬ ಬವುಮ ಆಫ್ಸೈಡ್ ಆಚೆ ಹೋಗುತ್ತಿದ್ದ ಚೆಂಡನ್ನ ಕಟ್ ಮಾಡಲು ಯತ್ನಿಸಿದರು. ಆಗ ಬಾಲ್ ಎಡ್ಜ್ ಆಗಿ ಕೀಪರ್ ಮತ್ತು ಮೊದಲ ಸ್ಲಿಪ್ ಮಧ್ಯಕ್ಕೆ ಹೋಯಿತು. ವಿಕೆಟ್ ಕೀಪರ್ ರಿಷಭ್ ಪಂತ್ ಜಿಗಿದು ಹಿಡಿಯಲು ಯತ್ನಿಸದರೂ ಅದು ಅವರ ಕೈಗೆಟುಕದಷ್ಟು ದೂರ ಹೋಗಿತ್ತು. ಮೊದಲ ಸ್ಲಿಪ್ನಲ್ಲದ್ದ ಚೇತೇಶ್ವರ್ ಪೂಜಾರ ಎಡಭಾಗದಲ್ಲಿ ಮುಂದಕ್ಕೆ ಬಗ್ಗಿ ಎರಡೂ ಕೈಯಿಂದ ಚೆಂಡು ಹಿಡಿಯಲು ಯತ್ನಿಸಿದರು. ಆದರೆ, ಬಾಲ್ ಅವರ ಕೈಗೆ ತಾಗಿ ಚಿಮ್ಮಿಹೋಯಿತು. ನಿಧಾನವಾಗಿಯೇ ಚಿಮ್ಮಿ ಹೋದರೂ ಚೆಂಡು ವಿಕೆಟ್ ಕೀಪರ್ ಹಿಂದೆ ಇದ್ದ ಹೆಲ್ಮೆಟ್ಗೆ ತಾಗಿತು.
ಐಸಿಸಿ ನಿಯಮದ ಪ್ರಕಾರ ಫೀಲ್ಡರ್ ಮೈದಾನದಲ್ಲಿ ಇರಿಸಿದ್ದ ಹೆಲ್ಮೆಟ್ ಅಥವಾ ವಸ್ತುವಿಗೆ ಚೆಂಡು ತಾಗಿದರೆ 5 ರನ್ ದಂಡ ಹಾಕಲಾಗುತ್ತದೆ. ಭಾರತಕ್ಕೆ ಕ್ಯಾಚೂ ಹೋಯಿತು, ರನ್ ಕೂಡ ಹೋಯಿತು.
ಪೂಜಾರ ಡ್ರಾಪ್ ಮಾಡಿದ್ದು ಟೆಂಬಾ ಬವುಮಾ ಅವರ ಕ್ಯಾಚನ್ನು. ಬವುಮಾ ಭರ್ಜರಿ ಫಾರ್ಮ್ನಲ್ಲಿದ್ದ ಬ್ಯಾಟರ್. ಅವರು ಮತ್ತು ಕೀಗನ್ ಪೀಟರ್ಸನ್ ಇಬ್ಬರೂ ಒಳ್ಳೆಯ ಜೊತೆಯಾಟದಲ್ಲಿ ನಿರತರಾಗಿದ್ದರು. ಭಾರತಕ್ಕೆ ಈ ಜೊತೆಯಾಟ ಮುರಿಯುವುದು ಅಗತ್ಯಗತ್ಯವಾಗಿತ್ತು. ಆಗಿನ್ನೂ ಬವುಮಾ 17 ರನ್ ಗಳಿಸಿದ್ದರು. ಅದೃಷ್ಟಕ್ಕೆ ಅವರ ವಿಕೆಟ್ ಕೈಚೆಲ್ಲಿದ್ದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಲಿಲ್ಲ. ಬವುಮಾ 28 ರನ್ ಗಳಿಸಿ ಔಟಾದರು.
ಸೌತ್ ಆಫ್ರಿಕಾದ ಮೊದಲ ಇನ್ನಿಂಗ್ಸ್ ಅಂತಿಮವಾಗಿ 210 ರನ್ಗೆ ಅಂತ್ಯವಾಯಿತು. ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರು. ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ಗೆ ಒಂದು ವಿಕೆಟ್ ದಕ್ಕಿತು. ಭಾರತಕ್ಕೆ 13 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪ್ರಾಪ್ತಿಯಾಯಿತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ