ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಮತ್ತೆ ಶುರುವಾಗಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಪಾಕ್ನ ಡೈಲಿ ಜಂಗ್ ಎಂಬ ಪತ್ರಿಕೆ. ಗಡಿ ವಿವಾದ, ಭಯೋತ್ಪಾದನೆಗೆ ಪ್ರಚೋದನೆ ಹಿನ್ನೆಲೆಯಲ್ಲಿ ಭಾರತ ಪಾಕ್ ವಿರುದ್ಧದ ದ್ವಿಪಕ್ಷೀಯ ಸರಣಿ ನಡೆದು ಹಲವು ವರ್ಷಗಳು ಕಳೆದಿವೆ. ಇದಾಗ್ಯೂ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿತ್ತು. ಇದೀಗ ಉಭಯ ದೇಶಗಳ ನಡುವೆ ಕ್ರಿಕೆಟ್ ಸರಣಿ ಪುನರಾರಂಭಿಸುವ ಬಗ್ಗೆ ಚರ್ಚೆಗಳು ಶುರುವಾಗಲಿದೆ ಎಂದು ಪಾಕಿಸ್ತಾನದ ಉರ್ದು ಪತ್ರಿಕೆ ಡೈಲಿ ಜಂಗ್ ವರದಿ ಮಾಡಿದೆ.
ಈ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಶೀಘ್ರದಲ್ಲೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆರಂಭವಾಗಲಿದೆ. ವರ್ಷದ ಕೊನೆಯಲ್ಲಿ ಮೂರು ಪಂದ್ಯಗಳ ಟಿ20 ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಪಾಕ್ನಲ್ಲಿ ಈ ಸುದ್ದಿ ಮಹತ್ವ ಪಡೆದುಕೊಂಡಿದೆ.
ಮುಂಬರುವ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಕ್ ಆಟಗಾರರಿಗೆ ಮತ್ತು ಇನ್ನಿತರರಿಗೆ ವೀಸಾ ಕೊಡುವ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಭಾರತ ಹಾಗೂ ಪಾಕ್ ನಡುವೆ ದ್ವಿಪಕ್ಷೀಯ ಸರಣಿ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಏಷ್ಯಾದ ಎರಡು ಬಲಿಷ್ಠ ತಂಡಗಳು ಕೊನೆಯ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆಯೋಜಿಸಿದ್ದ 2019 ರ ವಿಶ್ವಕಪ್ನಲ್ಲಿ ಮುಖಾಮುಖಿಯಾಗಿತ್ತು. ಇದಕ್ಕೂ ಮುನ್ನ 2012-2013ರಲ್ಲಿ ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಇದೀಗ ಟಿ20 ವಿಶ್ವಕಪ್ನೊಂದಿಗೆ ಭಾರತ-ಪಾಕ್ ನಡುವಣ ದ್ವಿಪಕ್ಷೀಯ ಸರಣಿ ಪುನರಾರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ