T20 World Cup- ಮೈಕೇಲ್ ವಾನ್ ಹೇಳಿದ ಭವಿಷ್ಯ ನಿಜವಾಗುತ್ತಾ? ವಿಶ್ವಕಪ್​ನಿಂದ ಹೊರಬೀಳುತ್ತಾ ಭಾರತ?

Michael Vaughan- ಭಾರತ ಇದೇ ಧೋರಣೆ ಮುಂದುವರಿಸಿದಲ್ಲಿ ಟಿ20 ವಿಶ್ವಕಪ್​ನಿಂದ ಹೊರಬೀಳಬಹುದು ಎಂದು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೇಲ್ ವಾನ್ ಭವಿಷ್ಯ ನುಡಿದಿದ್ದಾರೆ.

ಮೈಕೇಲ್ ವಾನ್

ಮೈಕೇಲ್ ವಾನ್

  • Share this:
    ದುಬೈ: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರೂ ಮಂಡಿಯೂರಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಅಲ್ಪ ಮೊತ್ತ ಗಳಿಸಿದಾಗಲೇ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೇಲ್ ವಾನ್ ಅವರು ಭವಿಷ್ಯದ ನುಡಿಗಳನ್ನ ಹೇಳಿದ್ದಾರೆ. ಭಾರತ ತಂಡದ ಧೋರಣೆ ಹೀಗೇ ಮುಂದುವರಿದರೆ ಟಿ20 ವಿಶ್ವಕಪ್​ನಿಂದ ಹೊರಬೀಳಬಹುದು ಎಂದು ಎಚ್ಚರಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ಕೆಲ ಮಹತ್ವದ ಬದಲಾವಣೆಗಳನ್ನ ಮಾಡಿಕೊಂಡಿತು. ಆದರೆ, ಅದರ ಪ್ರಯೋಗ ಬಹುತೇಕ ವಿಫಲಗೊಂಡಿತು. ಬ್ಯಾಟಿಂಗ್ ಆರ್ಡರ್ ಬುಡಮೇಲು ಮಾಡಿದ್ದು ಭಾರತಕ್ಕೆ ಯಡವಟ್ಟಾದಂತಿತ್ತು. ಭಾರತದ ನಿಯಮಿತ ಓಪನರ್ ರೋಹಿತ್ ಶರ್ಮಾ ಅವರನ್ನ ಫಸ್ಟ್ ಡೌನ್ ಕಳುಹಿಸಲಾಯಿತು. ಸೂರ್ಯಕುಮಾರ್ ಯಾದವ್ ಬದಲು ಸ್ಥಾನ ಪಡೆದ ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಿದರು. ರವೀಂದ್ರ ಜಡೇಜಾ ಹೊರತುಪಡಿಸಿ ಭಾರತದ ಉಳಿದ ಬ್ಯಾಟರ್ಸ್ ಬಹುತೇಕ ವಿಫಲರಾದರು.

    ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ಭಾರಿಸಿ ಭಾರತ ತಂಡಕ್ಕೆ ಗೌರವಯುತ ಸ್ಕೋರ್ ಸಿಗುವಂತೆ ಮಾಡಿದ್ದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ವಿಫಲರಾದರು.

    “ಭಾರತ ಟಿ20 ವಿಶ್ವಕಪ್​ನಿಂದ ಹೊರಬೀಳುತ್ತಿದೆ. ಇಷ್ಟೆಲ್ಲಾ ಪ್ರತಿಭಾನ್ವಿತರು ಇದ್ದರೂ ಭಾರತದ ಧೋರಣೆ ಇದೂವರೆಗೂ ತಪ್ಪಾಗಿದೆ” ಎಂದು ಮೈಕೇಲ್ ವಾನ್ ಟ್ವೀಟ್ ಮಾಡಿದ್ದಾರೆ.


    ಭಾರತ ವಿಫಲವಾಗಿದ್ದು ಎಲ್ಲಿ?

    ಭಾರತ ತಂಡ ಈ ವಿಶ್ವಕಪ್​ಗೆ ಮುನ್ನ ಭರ್ಜರಿ ತಯಾರಿಯೇನೋ ಮಾಡಿತ್ತು. ವಿಶ್ವಕಪ್ ನಡೆಯುತ್ತಿರುವ ಯುಎಇಯಲ್ಲೇ ಐಪಿಎಲ್ ಪಂದ್ಯಗಳನ್ನ ಆಯೋಜಿಸಿ ಆಟಗಾರರು ಇಲ್ಲಿನ ಪಿಚ್ ಮತ್ತು ವಾತಾವರಣಕ್ಕೆ ಸರಿಹೊಂದಿಕೊಳ್ಳಲು ಅವಕಾಶ ಕೊಡಲಾಗಿತ್ತು. ವಿಶ್ವಕಪ್​ನ ಎರಡು ಅಭ್ಯಾಸ ಪಂದ್ಯಗಳಲ್ಲೂ ಭಾರತ ಅಮೋಘ ಪ್ರದರ್ಶನ ತೋರಿ ಗೆಲುವು ಪಡೆದಿತ್ತು. ಆದರೆ, ವಿಶ್ವಕಪ್​ನಲ್ಲಿನ ಎರಡು ಪಂದ್ಯಗಳಲ್ಲಿ ಭಾರತ ಹೀನಾಯ ಸೋಲುಗಳನ್ನ ಕಂಡಿತು.

    ಇದನ್ನೂ ಓದಿ: IND vs NZ- ನ್ಯೂಜಿಲೆಂಡ್ ವಿರುದ್ಧವೂ ಭಾರತಕ್ಕೆ ಹೀನಾಯ ಸೋಲು; ಅಫ್ಘನ್ನರಿಗೆ ಮತ್ತೊಂದು ಜಯ

    ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಫಲಿತಾಂಶದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಿದೆಯಾದರೂ ಭಾರತದ ತಂತ್ರಗಳು ಮತ್ತು ಪ್ರಯೋಗಗಳು ಕೈಕೊಟ್ಟವು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಅಫ್ರಿದಿಯ ಎರಡು ಅದ್ಭುತ ಬಾಲ್​ಗಳು ಭಾರತಕ್ಕೆ ಘಾಸಿ ಕೊಟ್ಟರೆ, ನ್ಯೂಜಿಲೆಂಡ್ ವಿರುದ್ಧ ಭಾರತ ಹಲವು ಯಡವಟ್ಟುಗಳನ್ನ ಮಾಡಿ ಸೋಲುಂಡಿತು.

    ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್​ಗಳಿಂದ ಸೋತಿತು. ಭಾರತದ 110 ರನ್​ಗೆ ಪ್ರತಿಯಾಗಿ ನ್ಯೂಜಿಲೆಂಡ್ ಇನ್ನೂ 5.3 ಓವರ್ ಬಾಕಿ ಇರುವಂತೆಯೇ ಗುರಿ ಮುಟ್ಟಿತು.

    ಸೆಮಿಫೈನಲ್ ರೇಸ್ ಹೇಗೆ?

    ಈ ಸೋಲಿನೊಂದಿಗೆ ಭಾರತದ ಸೆಮಿಫೈನಲ್ ಸಾಧ್ಯತೆ ಸಾಕಷ್ಟು ಕ್ಷೀಣಿಸಿದೆ. ಸತತ ಎರಡು ಪಂದ್ಯ ಸೋತಿರುವ ಭಾರತ ಈಗ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನ ಗೆಲ್ಲುವುದು ಅನಿವಾರ್ಯವಾಗಿದೆ. ಒಂದು ವೇಳೆ ಗೆದ್ದರೂ ಸೆಮಿಫೈನಲ್ ಪ್ರವೇಶ ಖಚಿತ ಎಂದು ಹೇಳಲು ಅಸಾಧ್ಯ. ಬೇರೆ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಹಣೆಬರಹ ನಿರ್ಧಾರವಾಗುತ್ತದೆ.

    ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಸತತ ಮೂರು ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ನಮೀಬಿಯಾ ತಲಾ 2 ಅಂಕಗಳೊಂದಿಗೆ 3 ಮತ್ತು 4ನೇ ಸ್ಥಾನದಲ್ಲಿವೆ. ಕೊನೆಯ ಎರಡು ಸ್ಥಾನಗಳನ್ನ ಭಾರತ ಮತ್ತು ಸ್ಕಾಟ್ಲೆಂಡ್ ಆಕ್ರಮಿಸಿಕೊಂಡಿವೆ. ಪಾಕಿಸ್ತಾನಕ್ಕೆ ಒಂದು ಸೆಮಿಫೈನಲ್ ಸ್ಥಾನ ಖಚಿತವೆಂದಿಟ್ಟುಕೊಂಡರೆ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ಪೈಪೋಟಿ ಏರ್ಪಡಬಹುದು. ಅಫ್ಘಾನಿಸ್ತಾನ ವಿರುದ್ಧ ಭಾರತವೇನಾದರೂ ಗೆದ್ದರೆ ಭಾರತವೂ ರೇಸ್​ಗೆ ಸೇರಿಕೊಳ್ಳುತ್ತದೆ.
    Published by:Vijayasarthy SN
    First published: