India vs Sri Lanka ODI: ಶ್ರೀಲಂಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು, ಮುಳುಗುತ್ತಿದ್ದ ದೋಣಿಯನ್ನು ದಡ ಸೇರಿಸಿದ ಚಾಹರ್

(India Marks Historic Win Against Sri Lanka): ದೀಪಕ್​ ಚಾಹರ್​ 82 ಬಾಲ್​ಗಳಲ್ಲಿ 69 ರನ್​ ಗಳಿಸಿ ನಾಟೌಟ್​ ಆಗಿ ಒಂದೆಡೆ ಉಳಿದರೆ, ಭುವನೇಶ್ವರ್​ ಕುಮಾರ್​ 28 ಬಾಲ್​ಗಳಲ್ಲಿ 19 ರನ್​ ಗಳಿಸಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶ್ರೀಲಂಕಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಭಾರತ

ಶ್ರೀಲಂಕಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಭಾರತ

  • Share this:
ಕೊಲಂಬೋ: ಶ್ರೀಲಂಕಾ ವಿರುದ್ಧ ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಪ್ರಯಾಸದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-0 ಯಿಂದ ಮುನ್ನಡೆ ಸಾಧಿಸಿದೆ. ಇನ್ನೇನು ಸೋಲು ಖಚಿತ ಎಂಬಂತಿದ್ದ ಪಂದ್ಯವನ್ನು ವೇಗಿ ದೀಪಕ್​ ಚಾಹರ್​ ಗೆಲ್ಲಿಸಿ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದಾರೆ. ಶತಕದ ಗಡಿ ದಾಟುವ ಒಳಗೆ ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ತತ್ತರಿಸಿದ್ದ ಭಾರತ, 49 ಓವರ್​ನ ಮೊದಲ ಬಾಲ್​ನಲ್ಲಿ ಗೆಲುವು ಕಂಡಿದೆ. ಮುಂಚೂಣಿ ದಾಂಡಿಗರು ಲಂಕಾ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡವಿದರೂ ಬಾಲಂಗೋಚಿಗಳಾದ ದೀಪಕ್​ ಚಾಹರ್​ ಮತ್ತು ಭುವನೇಶ್ವರ್​ ಕುಮಾರ್​ ಜೋಡಿ ಏಳನೇ ವಿಕೆಟ್​ಗೆ ಅತ್ಯುತ್ತಮ ಜತೆಯಾಟವಾಡಿ ಮುಳುಗುತ್ತಿದ್ದ ಹಡಗನ್ನು ದಡ ತಲುಪಿಸಿದರು.

ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ಕೆಮಾಡಿಕೊಂಡಿತು. ಮೊದಲು ಬ್ಯಾಟಿಂಗ್​ ಆರಂಭಿಸಿದ ಶ್ರೀಲಂಕಾ ತಂಡ 50 ಓವರ್​ಗಳಲ್ಲಿ 275 ರನ್​ ಕಲೆಹಾಕಿ ಸಾಧಾರಣ ಟಾರ್ಗೆಟ್​ ನೀಡಿತು. ಮೊದಲ ಪಂದ್ಯ ಗೆದ್ದ ಸಂತಸದಲ್ಲಿದ್ದ ಇನ್​ ಫಾರ್ಮ್​ ಭಾರತ ತಂಡ ಈ ಮೊತ್ತವನ್ನು ಬೇಗ ಕಲೆಹಾಕುವ ನಿರೀಕ್ಷೆಯಲ್ಲಿ ಇನ್ನಿಂಗ್ಸ್​ ಆರಂಭಿಸಿತಾದರೂ, ಆರಂಭಿಕ ಜೋಡಿ ನಾಯಕ ಶಿಖರ್​ ಧವನ್​ (29) ಮತ್ತು ಪೃಥ್ವಿ ಶಾ (13) ಬಾರಿಸಿ ಪೆವಿಲಿಯನ್​ ಹಾದಿ ಹಿಡಿದರು. ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ಇಶಾನ್​ ಕಿಶನ್​ ಕೂಡ ಕೇವಲ ಒಂದು ರನ್​ಗೆ ಪೆವಿಲಿಯನ್​ ದಾರಿ ಹಿಡಿದರು. ಈ ವೇಳೆ ಜತೆಯಾದ ಕರ್ನಾಟಕ ಮೂಲದ ಆಟಗಾರ ಮನೀಶ್​ ಪಾಂಡೆ ಮತ್ತು ಸೂರ್ಯಕುಮಾರ್​ ಯಾದವ್​ ಉತ್ತಮ ಜತೆಯಾಟವಾಡಿ ಕೇವಲ 31 ಬಾಲ್​ಗಳಲ್ಲಿ 50 ರನ್​ ಕಲೆ ಹಾಕಿದರು. ಆದರೆ ಉತ್ತಮ ಫಾರ್ಮ್​ನಲ್ಲಿ ಕಂಡುಬಂದ ಮನೀಶ್​ ಪಾಂಡೆ ಇಲ್ಲದ ರನ್​ ಕದಿಯಲು ಹೋಗಿ ರನ್​ ಔಟ್​ ಆದರು.

ನಂತರ ಬಂದ ಹಾರ್ದಿಕ್​ ಪಾಂಡ್ಯ ಖಾತೆ ತೆರೆಯದೇ ವಾಪಸಾದರು. ಒಂದೆಡೆ ಸೂರ್ಯಕುಮಾರ್​ ಯಾದವ್​ ಉತ್ತಮ ಪ್ರದರ್ಶನ ನೀಡಿ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಆಲ್​ರೌಂಡರ್​ ಕ್ರುನಾಲ್​ ಪಾಂಡ್ಯ, ಯಾದವ್​ ಜತೆಗೂಡಿ ಉತ್ತಮ ಮೊತ್ತ ಕಲೆಹಾಕುತ್ತಿದ್ದರಾದರೂ 35 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಸೂರ್ಯಕುಮಾರ್​ ಯಾದವ್​ ಕೂಡ ಅರ್ಧಶತಕದ ಬೆನ್ನಲ್ಲೇ 53 ರನ್​ಗಳಿಸಿ ಔಟಾದರು.

ಇಲ್ಲಿಗೆ ಭಾರತ ತಂಡದ ಸೋಲು ಬಹುತೇಕ ಖಚಿತ ಎನ್ನುವಂತಾಗಿತ್ತು. ಈ ಸಂದರ್ಭದಲ್ಲಿ ಜತೆಯಾದ ದೀಪಕ್​ ಚಾಹರ್​ ಮತ್ತು ಭುವನೇಶ್ವರ್​ ಕುಮಾರ್​ ಏಳನೇ ವಿಕೆಟ್​ಗೆ ದಾಖಲೆಯ ಜತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿದರು. ದೀಪಕ್​ ಚಾಹರ್​ 82 ಬಾಲ್​ಗಳಲ್ಲಿ 69 ರನ್​ ಗಳಿಸಿ ನಾಟೌಟ್​ ಆಗಿ ಒಂದೆಡೆ ಉಳಿದರೆ, ಭುವನೇಶ್ವರ್​ ಕುಮಾರ್​ 28 ಬಾಲ್​ಗಳಲ್ಲಿ 19 ರನ್​ ಗಳಿಸಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.



ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಶಿಖರ್​ ಧವನ್​ ನಾಯಕತ್ವದಲ್ಲಿ ಭಾರತದ ಒಂದು ತಂಡ ಶ್ರೀಲಂಕಾದಲ್ಲಿ ಏಕದಿನ ಸರಣಿ ಆಡುತ್ತಿದೆ. ಇನ್ನೊಂದೆಡೆ ಇಂಗ್ಲೆಂಡ್​ ಸರಣಿಗೆ ಮತ್ತೊಂದು ತಂಡ ರವಿಶಾಸ್ತ್ರಿ ಮತ್ತು ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಇಂಗ್ಲೆಂಡ್​ನಲ್ಲಿ ಕೌಂಟಿ ತಂಡದ ಜೊತೆ ಪ್ರಾಕ್ಟಿಸ್​ ಮ್ಯಾಚ್​ ಆಡುತ್ತಿದೆ. ಶ್ರೀಲಂಕಾ ವಿರುದ್ಧ ಐತಿಹಾಸಿಕ ವಿಜಯದ ಬೆನ್ನಲ್ಲೇ ಸ್ಕಿಪ್ಪರ್​ ವಿರಾಟ್​ ಕೊಹ್ಲಿ ಟ್ವೀಟ್​ ಮೂಲಕ ತಂಡಕ್ಕೆ ಶುಭಾಶಯ ಕೋರಿದ್ದಾರೆ. ದೀಪಕ್​ ಚಾಹರ್​ ಮತ್ತು ಸೂರ್ಯಕುಮಾರ್​ ಯಾದವ್​ ಅವರ ಉತ್ತಮ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

Just silently sits in a corner to sip some water post his batting heroics 👌🏻🔝👍🏻 



ದೀಪಕ್​ ಚಾಹರ್​ ಅವರ ಅಮೋಘ ಪ್ರದರ್ಶನವನ್ನು ಬಿಸಿಸಿಐ ಕೂಡ ಶ್ಲಾಘಿಸಿ ಟ್ವೀಟ್​ ಮಾಡಿದ್ದು, ಕ್ರಿಕೆಟ್​ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಗೆಲುವಿನ ಬಗ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸಂಕ್ಷಿಪ್ತ ಸ್ಕೋರ್​​:

ಶ್ರೀಲಂಕಾ: ಅವಿಶ್ಕಾ ಫರ್ನಾಂಡೋ: 50
ಚರಿತ್​ ಅಸಲಂಕಾ: 65
ಚಮಿಕಾ ಕರುಣರತ್ನೆ: 44

ಭಾರತ: ದೀಪಕ್​ ಚಾಹರ್​: 69
ಸೂರ್ಯಕುಮಾರ್​ ಯಾದವ್​: 53
ಮನೀಶ್​ ಪಾಂಡೆ: 37
Published by:Sharath Sharma Kalagaru
First published: