India vs Eng 2nd Test – ಚೆನ್ನೈನಲ್ಲಿ ಭಾರತ-ಇಂಗ್ಲೆಂಡ್ 2ನೇ ಕ್ರಿಕೆಟ್ ಟೆಸ್ಟ್ ಆರಂಭ; ಅಕ್ಷರ್ ಪಟೇಲ್ ಪದಾರ್ಪಣೆ

ಮೊದಲ ಟೆಸ್ಟ್ ಪಂದ್ಯ ನಡೆದಿದ್ದ ಚೇಪಾಕ್ ಸ್ಟೇಡಿಯಂನಲ್ಲೇ ಭಾರತ-ಇಂಗ್ಲೆಂಡ್ ಎರಡನೇ ಪಂದ್ಯ ನಡೆಯುತ್ತಿದೆ. ಜಸ್​ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ನದೀಮ್ ಬದಲು ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಆಡುತ್ತಿದ್ಧಾರೆ.

ಟೀಮ್ ಇಂಡಿಯಾ ಆಟಗಾರರು

ಟೀಮ್ ಇಂಡಿಯಾ ಆಟಗಾರರು

 • Share this:
  ಚೆನ್ನೈ(ಫೆ. 13): ಇಲ್ಲಿಯ ಚೇಪಾಕ್​ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳು ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಚೆನ್ನೈನಲ್ಲೇ ನಡೆದಿದ್ದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 227 ರನ್​ಗಳಿಂದ ಭಾರತವನ್ನ ಸದೆಬಡಿದಿತ್ತು. ಈ ಸೋಲಿನ ಸೇಡನ್ನ ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾಗೆ ಸಿಕ್ಕಿದೆ. ಈ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್​ರೌಂಡರ್ ಅಕ್ಷರ್ ಪಟೇಲ್ ಅವರು ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅವಿರತವಾಗಿ ಬೌಲಿಂಗ್ ಮಾಡಿದ್ದ ಜಸ್​ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶಹಬಾಜ್ ನದೀಮ್ ಮತ್ತು ವಾಷಿಂಗ್ಟನ್ ಸುಂದರ್ ಸುಂದರ್ ಅವರನ್ನೂ ಈ ಎರಡನೇ ಪಂದ್ಯಕ್ಕೆ ಕೈಬಿಡಲಾಗಿದೆ.

  ಅಕ್ಷರ್ ಪಟೇಲ್ ಪದಾರ್ಪಣೆ ಜೊತೆಗೆ ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಅವರಿಗೂ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿದೆ. ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಶೂನ್ಯ ಸಂಪಾದನೆ ಮಾಡಿದರೂ ಬಳಿಕ ತಂಡ ಚೇತರಿಸಿಕೊಂಡಿದೆ. ಫಾರ್ಮ್​ನಲ್ಲಿಲ್ಲದ ರೋಹಿತ್ ಶರ್ಮಾ ರನ್ ಬೇಟೆ ನಡೆಸಿರುವುದು ಭಾರತಕ್ಕೆ ಶುಭ ಸುದ್ದಿ. ಭಾರತದ ನೆಲದಲ್ಲಿ ರನ್ ಬರ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ ಮೇಲೂ ಎಲ್ಲರ ಕಣ್ಣಿದೆ. ಸ್ಪಿನ್ ಟ್ರ್ಯಾಕ್​ನಲ್ಲಿ ರಹಾನೆ ರನ್ ಗಳಿಸಲು ಪರದಾಡುವುದು ಇನ್ನೊಂದು ಆತಂಕದ ಸಂಗತಿ.

  ಇದನ್ನೂ ಓದಿ: IPL 2021 auction: ಐಪಿಎಲ್​ ಹರಾಜು ಪಟ್ಟಿಯಲ್ಲಿರುವ 292 ಆಟಗಾರರ ಹೆಸರು ಇಲ್ಲಿದೆ

  ಅತ್ತ, ಇಂಗ್ಲೆಂಡ್ ತಂಡದ ಸ್ಪಿನ್ನರ್ ಜ್ಯಾಕ್ ಲೀಚ್ ಮೇಲೆ ಕಣ್ಣಿಡಬಹುದು. ಕಳೆದ ಬಾರಿಯ ಪಂದ್ಯದಲ್ಲಿ ಲೀಚ್ ಅವರ ಸ್ಪಿನ್ ಮೋಡಿ ಸಖತ್ತಾಗಿತ್ತು. ಅವರ ಕೈಯಿಂದ ಕೆಲ ಅದ್ಭುತ ಎಸೆತಗಳು ಬಂದು ಭಾರತದ ಪ್ರಬಲ ಬ್ಯಾಟುಗಾರರನ್ನ ಬೇಸ್ತು ಬೀಳಿಸಿದ್ದವು. ಈ ಪಂದ್ಯದಲ್ಲೂ ಲೀಚ್ ಅವರ ಬೌಲಿಂಗ್ ನಿರ್ಣಾಯಕ ಎನಿಸಿದರೆ ಅಚ್ಚರಿ ಇಲ್ಲ.

  ನಾಲ್ಕು ಪಂದ್ಯಗಳ ಈ ಕ್ರಿಕೆಟ್ ಸರಣಿಯನ್ನು ಜೀವಂತವಾಗಿರಿಸಬೇಕಾದರೆ ಭಾರತ ಈ ಪಂದ್ಯ ಗೆಲ್ಲುವುದು ಬಹಳ ಮುಖ್ಯ. ಅಷ್ಟೇ ಅಲ್ಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮುಂದಿನ ಹಂತಕ್ಕೇರಲು ಭಾರತಕ್ಕೆ ಈ ಪಂದ್ಯ ಗೆಲ್ಲುವು ಅನಿವಾರ್ಯವಾಗಿದೆ. ಈ ಸರಣಿಯನ್ನು ಭಾರತ 2-1 ರಿಂದ ಗೆಲ್ಲಲೇ ಬೇಕಿದೆ.

  ಇದೇ ವೇಳೆ, ವಿರಾಟ್ ಕೊಹ್ಲಿ ಅವರ ನಾಯಕತ್ವದ ಮೇಲೂ ದಾಳಿಗಳಾಗುತ್ತಿವೆ. ನಾಯಕರಾಗಿ ಸತತ ಸೋಲುಗಳನ್ನ ಕಾಣುತ್ತಿರುವ ಕೊಹ್ಲಿ ಮೇಲೆ ಒತ್ತಡ ಹೆಚ್ಚುತ್ತಿದೆ. ಇನ್ನು ಈ ಎರಡನೇ ಪಂದ್ಯವನ್ನ ಸ್ಟೇಡಿಯಂನಲ್ಲಿ ಕೂತು ವೀಕ್ಷಿಸುವ ಅವಕಾಶ ಸಿಕ್ಕಿರುವುದು ಮತ್ತೊಂದು ವಿಶೇಷ. ಶೇ. 50ರಷ್ಟು ಆಸನಗಳನ್ನ ಭರ್ತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮೊದಲ ಪಂದ್ಯ ಇದೇ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತಾದರೂ ಅದು ಬೇರೆ ಪಿಚ್ ಆಗಿತ್ತು. ಮೊದಲೆರಡು ದಿನದ ಬಳಿಕ ಆ ಪಿಚ್ ಭಾರೀ ಟರ್ನರ್ ಎನಿಸಿತ್ತು. ಆ ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲುವಿನ ದಟ್ಟ ಅವಕಾಶವಿತ್ತು. ಈಗ ನಡೆಯುತ್ತಿರುವುದು ಬೇರೆ ಪಿಚ್​ನಲ್ಲಿ. ಹೀಗಾಗಿ, ಈ ಪಂದ್ಯ ಕುತೂಹಲ ಉಳಿಸಿಕೊಂಡಿದೆ.

  ಇದನ್ನೂ ಓದಿ: Team India: ಟೀಮ್​ ಇಂಡಿಯಾದ ಹೊಸ ಫಿಟ್​ನೆಸ್ ಟೆಸ್ಟ್​ ಪಾಸಾಗಲು 6 ಆಟಗಾರರು ವಿಫಲ..!

  ತಂಡಗಳು:

  ಭಾರತ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್

  ಇಂಗ್ಲೆಂಡ್ ತಂಡ: ಜೋ ರೂಟ್, ರೋರಿ ಬರ್ನ್ಸ್, ಡಾಮ್ ಸಿಬ್ಲೀ, ಡ್ಯಾನ್ ಲಾರೆನ್ಸ್, ಬೆನ್ ಸ್ಟೋಕ್ಸ್, ಓಲೀ ಪೋಪ್, ಬೆನ್ ಫೋಕ್ಸ್, ಮೊಯೀನ್ ಅಲಿ, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಓಲಿ ಸ್ಟೋನ್.
  Published by:Vijayasarthy SN
  First published: