Road Safety World Series 2021 Final : ಯುವಿ, ಯೂಸೂಫ್ ಸಿಡಿಲಬ್ಬರ: ಚಾಂಪಿಯನ್ ಪಟ್ಟಕ್ಕೇರಿದ ಇಂಡಿಯಾ ಲೆಜೆಂಡ್ಸ್

Road Safety World Series 2021 Final Highlights: ಬ್ಯಾಟಿಂಗ್ ಮತ್ತು ಬೌಲಿಂಗ್​ ಮೂಲಕ ಮಿಂಚಿದ ಯೂಸುಫ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ, ಶ್ರೀಲಂಕಾ ಲೆಜೆಂಡ್ಸ್ ನಾಯಕ ತಿಲಕರತ್ನೆ ದಿಲ್ಶಾನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

india legends

india legends

 • Share this:
  ರಾಯ್‌ಪುರ್‌ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ಇಂಡಿಯಾ ಲೆಜೆಂಡ್ಸ್​ ತಂಡ 14 ರನ್​ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ಉತ್ತಮ ಆರಂಭ ಪಡೆದಿರಲಿಲ್ಲ. ಪಂದ್ಯದ ಮೂರನೇ ಓವರ್​ನಲ್ಲಿ ಸೆಹ್ವಾಗ್ (10) ಮುನ್ನುಗ್ಗಿ ಹೊಡೆಯಲು ಬಂದು ಹೆರಾತ್ ಎಸೆತಕ್ಕೆ ಕ್ಲೀನ್ ಬ್ಲೌಲ್ಡ್ ಆದರು. ಇದರ ಬೆನ್ನಲ್ಲೇ ಎಸ್.ಬದ್ರಿನಾಥ್ (7) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಸಚಿನ್ ಹಾಗೂ ಯುವರಾಜ್ ಸಿಂಗ್ 10 ಓವರ್​ ಮುಕ್ತಾಯದ ವೇಳೆ ತಂಡದ ಮೊತ್ತವನ್ನು 70ರ ಗಡಿದಾಟಿಸಿದರು. ಇದೇ ವೇಳೆ ಮೆಹರೂಫ್ ಎಸೆತದಲ್ಲಿ ಸಚಿನ್ (30) ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

  ಆ ಬಳಿಕ ಜೊತೆಗೂಡಿದ ಯುವಿ-ಯೂಸುಫ್ ಪಠಾಣ್ ಜೋಡಿ ಅಕ್ಷರಶಃ ಅಬ್ಬರಿಸಲಾರಂಭಿಸಿದರು. ಲಂಕಾ ಬೌಲರುಗಳ ಬೆಂಡೆತ್ತಿದ ಈ ಜೋಡಿ ತಂಡದ ರನ್​ಗತಿಯನ್ನು ಹೆಚ್ಚಿಸಿದರು. 4 ಸಿಕ್ಸರ್ 4 ಬೌಂಡರಿಗಳೊಂದಿಗೆ ಯುವರಾಜ್ ಸಿಂಗ್ 41 ಎಸೆತಗಳಲ್ಲಿ 60 ರನ್​ ಬಾರಿಸಿದರೆ, ಯೂಸುಫ್ ಪಠಾಣ್ 36 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 62 ರನ್ ಚಚ್ಚಿದರು. ಪರಿಣಾಮ ಇಂಡಿಯಾ ಲೆಜೆಂಡ್ಸ್​ ಮೊತ್ತ ನಿಗದಿತ 20 ಓವರ್​ ಮುಕ್ತಾಯಕ್ಕೆ 4 ವಿಕೆಟ್ ನಷ್ಟದೊಂದಿಗೆ 181 ಕ್ಕೆ ಬಂದು ನಿಂತಿತು.

  ಇಂಡಿಯಾ ಲೆಜೆಂಡ್ಸ್ ನೀಡಿದ 182 ರನ್ ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳನ್ನಷ್ಟೇ ಕಲೆಹಾಕಲು ಶಕ್ತರಾದರು. ಲಂಕಾ ಪರ ಸನತ್ ಜಯಸೂರ್ಯ 43 ರನ್ ಗಳಿಸಿದರೆ, ಚಿಂತಕ ಜಯಸಿಂಘೆ 40 ಬಾರಿಸಿದರು. ಅಂತಿಮವಾಗಿ ಇಂಡಿಯಾ ಲೆಜೆಂಡ್ಸ್​ ಸಾಂಘಿಕ ದಾಳಿಗೆ ಶರಣಾದ ಶ್ರೀಲಂಕಾ ಲೆಜೆಂಡ್ಸ್​ ತಂಡ 14 ರನ್​ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಪರ ಯೂಸುಫ್, ಇರ್ಫಾನ್ ತಲಾ 2 ವಿಕೆಟ್ ಪಡೆದರೆ, ಗೋನಿ, ಮುನಾಫ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.  ಬ್ಯಾಟಿಂಗ್ ಮತ್ತು ಬೌಲಿಂಗ್​ ಮೂಲಕ ಮಿಂಚಿದ ಯೂಸುಫ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ, ಶ್ರೀಲಂಕಾ ಲೆಜೆಂಡ್ಸ್ ನಾಯಕ ತಿಲಕರತ್ನೆ ದಿಲ್ಶಾನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
  Published by:zahir
  First published: