T20 World Cup- ಸ್ಕಾಟ್ಲೆಂಡ್​ನ್ನು 39 ಬಾಲ್​ನಲ್ಲಿ ಚೆಂಡಾಡಿದ ಭಾರತ; ನೆಟ್ ರನ್ ರೇಟ್ ಏಕ್​ದಂ ಏರಿಕೆ

India beat Scotland and NZ beat Namibia- ಸ್ಕಾಟ್ಲೆಂಡ್ ತಂಡದ 86 ರನ್ ಸವಾಲನ್ನು ಭಾರತ ಕೇವಲ 39 ಬಾಲ್​ನಲ್ಲಿ ಕೆಚ್ಚಿ ಬಿಸಾಡಿದೆ. ಭಾರತದ ರನ್ ರೇಟ್ ಗಣನೀಯವಾಗಿ ವೃದ್ಧಿಸಿದೆ. ಸೆಮಿಫೈನಲ್ ತಲುಪುವ ಲೆಕ್ಕಾಚಾರ ಹೇಗೆ?

ಭಾರತ ಕ್ರಿಕೆಟ್ ಆಟಗಾರರು

ಭಾರತ ಕ್ರಿಕೆಟ್ ಆಟಗಾರರು

 • Share this:
  ದುಬೈ, ನ. 5: ಸತತ ಎರಡು ಸೋಲಿನಿಂದ ಜರ್ಝರಿತಗೊಂಡಿದ್ದ ಟೀಮ್ ಇಂಡಿಯಾ (India Cricket Team) ಈಗ ರಣಚಂಡಿ ಅವತಾರಕ್ಕೆ ಬಂದಿದೆ. ಅಫ್ಘಾನಿಸ್ತಾನ್ (Afghanistan Cricket Team) ವಿರುದ್ಧ 66 ರನ್​ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ್ದ ಭಾರತ ಇದೀಗ ಸ್ಕಾಟ್ಲೆಂಡ್ (Scotland Cricket Team) ತಂಡವನ್ನು 8 ವಿಕೆಟ್​ಗಳಿಂದ ಸದೆಬಡಿದಿದೆ. ಕೆಎಲ್ ರಾಹುಲ್ (K L Rahul) 18 ಎಸೆತದಲ್ಲಿ ಅರ್ಧಶತಕ ಗಳಿಸಿದ ಪರಿಣಾಮ ಭಾರತ 81 ರನ್ ಬಾಕಿ ಇರುವಂತೆ ದಿಗ್ವಿಜಯ ಸಾಧಿಸಿತು. ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಅಂತರದ ಗೆಲುವು ಭಾರತಕ್ಕೆ ದಕ್ಕಿತು. ಇದರೊಂದಿಗೆ ಭಾರತದ ಸೆಮಿಫೈನಲ್ ಸಾಧ್ಯತೆ ಇನ್ನಷ್ಟು ಹಿಗ್ಗಿದೆ.

  ಇಂದು ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ 85 ರನ್ ಸಾಧಾರಣ ಮೊತ್ತಕ್ಕೆ ಪ್ರತಿಯಾಗಿ ಭಾರತ ಸಾಧ್ಯವಾದಷ್ಟು ವೇಗದಲ್ಲಿ ಪಂದ್ಯ ಗೆಲ್ಲುವತ್ತ ಗಮನ ಕೊಟ್ಟಿತು. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕೇವಲ 5 ಓವರ್​ನಲ್ಲಿ 70 ರನ್ ಸೇರಿಸಿದರು. ರಾಹುಲ್ 19 ಬಾಲ್​ನಲ್ಲಿ 50 ರನ್ ಗಳಿಸಿದರೆ, ರೋಹಿತ್ 16 ಎಸೆತದಲ್ಲಿ 30 ರನ್ ಚಚ್ಚಿದರು. 6.3 ಓವರ್​​ನಲ್ಲಿ ಭಾರತ ಗುರಿ ಮುಟ್ಟಿತು.

  ಇದಕ್ಕೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಎಲ್ಲಿಯೂ ಉತ್ತಮ ಜೊತೆಯಾಟ ಬರಲಿಲ್ಲ. ಆರಂಭಿಕ ಆಟಗಾರ ಜಾರ್ಜ್ ಮುನ್ಸೀ ಅವರೊಬ್ಬರು ಮಾತ್ರ ನಿರ್ಭೀತಿಯಿಂದ ಬ್ಯಾಟ್ ಮಾಡಿದ್ದು. ಭಾರತದ ಯಾವ ಬೌಲರ್​ಗೂ ಅವರು ಹೆದರಲಿಲ್ಲ. ಅವರು ಕ್ರೀಸ್​ನಲ್ಲಿರುವವರೆಗೂ ಸ್ಕಾಟ್ಲೆಂಡ್ ತಂಡ ಉತ್ತಮ ಮೊತ್ತ ಕಲೆಹಾಕುವ ನಿರೀಕ್ಷೆ ಇತ್ತು. ಮೂಸೀ ಬಿಟ್ಟರೆ ಉತ್ತಮ ಬ್ಯಾಟಿಂಗ್ ಮಾಡಿದ್ದು ಮೈಕೇಲ್ ಲೀಸ್ಕ್ ಮಾತ್ರವೇ.

  ಭಾರತದ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಕಿತ್ತರು. ಬೂಮ್ರಾ 2 ವಿಕೆಟ್ ಪಡೆದರೆ ಅಶ್ವಿನ್​ಗೆ ಒಂದು ಮಾತ್ರ ಯಶಸ್ಸು ಸಿಕ್ಕಿತು. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಉತ್ತಮವಾಗಿ ಬೌಲ್ ಮಾಡಿದರೂ ವಿಕೆಟ್ ಲಭಿಸಲಿಲ್ಲ.

  ಇದನ್ನೂ ಓದಿ: R Ashwin- ಆರ್ ಅಶ್ವಿನ್ ಯಶಸ್ಸಿನ ಗುಟ್ಟೇನು? ಟಿ20 ಬೌಲರ್ ಆಗಿ ರೂಪುಗೊಂಡ ಕಥೆ ರೋಚಕ

  ಭಾರತ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯಿತು. ನೆಟ್ ರನ್ ರೇಟ್ 1.619ಕ್ಕೆ ಹಿಗ್ಗಿತು. ಭಾರತದ ರನ್ ರೇಟ್ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದಕ್ಕಿಂತ ಉತ್ತಮವಾಗಿದೆ.

  ನಮೀಬಿಯಾ ವಿರುದ್ಧ ನ್ಯೂಜಿಲೆಂಡ್​ಗೆ ಜಯ:

  ಇದಕ್ಕೂ ಮುನ್ನ ಇಂದು ಮಧ್ಯಾಹ್ನ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ನಿರೀಕ್ಷಿತ ಗೆಲುವು ಸಾಧಿಸಿತು. ಕಿವೀಸ್ ತಂಡ 52 ರನ್​ಗಳ ಅಂತರದ ಜಯಕ್ಕೆ ತೃಪ್ತಿಪಡಬೇಕಾಯಿತು. ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ನಮೀಬಿಯಾ ಉತ್ತಮವಾಗಿಯೇ ಆಡಿತಾದರೂ ಕೊನೆಗೆ 111 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಮೊದಲ ವಿಕೆಟ್​ಗೆ ಉತ್ತಮ ಜೊತೆಯಾಟ ಬಂದಾಗ ನಮೀಬಿಯಾ ಗೆಲುವಿನ ಸಮೀಪವಾದರೂ ಹೋಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಕಿವೀಸ್ ಪಡೆಯ ಶಿಸ್ತುಬದ್ಧ ಬೌಲಿಂಗ್ ನಮೀಬಿಯನ್ನರನ್ನ ಕಟ್ಟಿಹಾಕಿತು.

  ನ್ಯೂಜಿಲೆಂಡ್ ಈ ಗೆಲುವಿನೊಂದಿಗೆ ಒಟ್ಟಾರೆ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅದರ ನೆಟ್ ರನ್ ರೇಟ್ 1.277ಕ್ಕೆ ಏರಿದೆ.

  ಇದನ್ನೂ ಓದಿ: Pak Deepavali- ಹಿಂದೂ ಕ್ರಿಕೆಟಿಗನ ಜೊತೆ ದೀಪಾವಳಿ ಹಬ್ಬ ಆಚರಿಸಿದ ಪಾಕಿಸ್ತಾನೀ ತಂಡ

  ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ಪಂದ್ಯ ನಿರ್ಣಾಯಕ:

  ಭಾನುವಾರ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಇದ್ದು ಅದು ಬಹುತೇಕ ನಿರ್ಣಾಯಕ ಆಗಬಹುದು. ಅಬುಧಾಬಿಯಲ್ಲಿ ನಡೆಯಲಿರುವ ಆ ಪಂದ್ಯವನ್ನ ನ್ಯೂಜಿಲೆಂಡ್ ಗೆದ್ದರೆ ಸೆಮಿಫೈನಲ್ ಸ್ಥಾನಕ್ಕೆ ನೇರ ಪ್ರವೇಶ ಪಡೆಯುತ್ತದೆ. ಅಫ್ಘಾನಿಸ್ತಾನವೇನಾದರೂ ಗೆದ್ದರೆ ಆಗ ಭಾರತಕ್ಕೆ ಸೆಮಿಫೈನಲ್ ಅವಕಾಶ ಜೀವಂತವಾಗುಳಿಯುತ್ತದೆ.

  ಅಂಥ ಸ್ಥಿತಿ ಬಂದಲ್ಲಿ ಸೋಮವಾರ ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯ ನಿರ್ಣಾಯಕ ಎನಿಸಲಿದೆ. ಸ್ಕಾಟ್ಲೆಂಡ್ ವಿರುದ್ಧ ಗೆದ್ದಂತೆ ನಮೀಬಿಯಾ ವಿರುದ್ಧ ಭಾರತ ದೊಡ್ಡ ಅಂತರದಿಂದ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತವಾಗುತ್ತದೆ.
  Published by:Vijayasarthy SN
  First published: