ಕೇಪ್ಟೌನ್, ಜ. 12: ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯ 2ನೇ ದಿನದಾಟದ ಬಳಿಕವೂ ಕೌತುಕದ ಸ್ಥಿತಿಯಲ್ಲಿದೆ. ಯಾವ ತಂಡವೂ ಹೆಚ್ಚು ಮೇಲುಗೈ ಸಾಧಿಸಿಲ್ಲ. ಮೊದಲ ದಿನದಂತೆ ಎರಡನೇ ದಿನವೂ 11 ವಿಕೆಟ್ಗಳು ಬಿದ್ದು ರೋಚಕತೆ ಸೃಷ್ಟಿಸಿದೆ. ಮೊದಲ ದಿನ ಸೌತ್ ಆಫ್ರಿಕಾ ತುಸು ಮೇಲುಗೈ ಸಾಧಿಸಿದರೆ ಎರಡನೇ ದಿನದ ಬಳಿಕ ಭಾರತಕ್ಕೆ ಸ್ವಲ್ಪ ಮೇಲುಗೈ ಸ್ಥಿತಿಯಲ್ಲಿದೆ. ಸೌತ್ ಆಫ್ರಿಕಾವನ್ನು ಮೊದಲ ಇನ್ನಿಂಗ್ಸಲ್ಲಿ 210 ರನ್ಗೆ ಆಲೌಟ್ ಮಾಡಿ 13 ರನ್ ಮುನ್ನಡೆ ಪಡೆದ ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ ದಿನಾಂತ್ಯದ ವೇಳೆ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ. ಈ ಮೂಲಕ ಒಟ್ಟಾರೆ 70 ರನ್ ಪಡೆದುಕೊಂಡಿದೆ.
ನಿನ್ನೆ ಮೊದಲ ದಿನ ವಿರಾಟ್ ಕೊಹ್ಲಿ ಅರ್ಧಶತಕ ಮತ್ತು ಕಗಿಸೋ ರಬಡ ಅವರ ಮಾರಕ ಬೌಲಿಂಗ್ ಹೈಲೈಟ್ ಆಗಿತ್ತು. ಇಂದು ಎರಡನೇ ದಿನ ಸೌತ್ ಆಫ್ರಿಕಾದ ಬ್ಯಾಟರ್ ಕೀಗನ್ ಪೀಟರ್ಸನ್ ಅವರ ಅರ್ಧಶತಕ ಹಾಗೂ ಭಾರತದ ಜಸ್ಪ್ರೀತ್ ಬುಮ್ರಾ ಅವರ 5 ವಿಕೆಟ್ ಸಾಧನೆ ಗಮನ ಸೆಳೆಯಿತು.
ನಿನ್ನೆ ಮೊದಲ ದಿನಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದ್ದ ಸೌತ್ ಆಫ್ರಿಕಾ ಇಂದು ಬೇಗನೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ವಾನ್ ಡರ್ ಡುಸೆನ್, ಕೀಗನ್ ಪೀಟರ್ಸನ್ ಮತ್ತು ಟೆಂಬಾ ಬವುಮಾ ಅವರು ಉತ್ತಮ ಬ್ಯಾಟಿಂಗ್ ಮಾಡಿದ ಕಾರಣ ಸೌತ್ ಆಫ್ರಿಕಾ ಸ್ಕೋರು ಸ್ವಲ್ಪ ಉದ್ದ ಬೆಳೆಯಿತು. ಕೆ ಪೀಟರ್ಸನ್ ಅಮೋಘ ಆಟ ಆಡಿದರು. ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಡಿ ದಾಟಿದ್ದ ಸೌತ್ ಆಫ್ರಿಕಾದ ಮೊತ್ತ 250 ರನ್ ಗಡಿದಾಟುವ ಕುರುಹು ತೋರಿತ್ತು. ಆದರೆ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರ ನಿರಂತರ ವೇಗದ ದಾಳಿಗಳು ಸೌತ್ ಆಫ್ರಿಕಾ ಬ್ಯಾಟುಗಾರರನ್ನ ಸೆಟ್ಲ್ ಆಗಲು ಬಿಡಲಿಲ್ಲ. ಅಂತಿಮವಾಗಿ ಹರಿಣಗಳ ಪಡೆಯ ಮೊದಲ ಇನ್ನಿಂಗ್ಸ್ ಆಟ 210 ರನ್ಗೆ ಅಂತ್ಯಗೊಂಡಿತು.
ಇದನ್ನೂ ಓದಿ: IND vs SA: ಪೂಜಾರ ಕೈಚೆಲ್ಲಿದ ಕ್ಯಾಚ್; ಹೆಲ್ಮೆಟ್ಗೆ ಬಡಿದ ಚೆಂಡು; ಭಾರತಕ್ಕೆ ಬಿತ್ತು ದಂಡ
13 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತನ್ನ ಇಬ್ಬರು ಆರಂಭಿಕ ಬ್ಯಾಟುಗಾರರಾದ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಇನ್ನಿಂಗ್ಸಲ್ಲೂ ಬೇಗನೇ ಔಟಾಗಿದ್ದ ಈ ಇಬ್ಬರು ಇನ್ಫಾರ್ಮ್ ಬ್ಯಾಟುಗಾರರು ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮೊದಲ ಇನ್ನಿಂಗ್ಸಲ್ಲಿ ಭಾರತದ ಇನ್ನಿಂಗ್ಸ್ಗೆ ಪುಷ್ಟಿ ನೀಡಿದ್ದ ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಭಾರತದ ಇನ್ನಿಂಗ್ಸ್ ಇನ್ನಷ್ಟು ಕುಸಿಯದಂತೆ ಕಾಪಾಡಿದ್ದಾರೆ. ನಾಳೆ ಮೂರನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್ ಎಷ್ಟು ದೂರ ಸಾಗುತ್ತದೆ ಕಾದುನೋಡಬೇಕು.
ಫಲಿತಾಂಶ ನಿಶ್ಚಿತ ಇರುವ ಈ ಪಂದ್ಯದಲ್ಲಿ ಯಾರು ಬೇಕಾದರೂ ಗೆಲ್ಲಬಹುದು ಎನ್ನುವಂಥ ಸ್ಥಿತಿ ಇದೆ. ಭಾರತ ಈ ಪಂದ್ಯ ಗೆದ್ದರೆ ಸೌತ್ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಹೊಸ ಇತಿಹಾಸ ನಿರ್ಮಿಸಿದ ದಾಖಲೆ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ: IPL 2022: ನಾಯಕರಿಲ್ಲದ ತಂಡಗಳು; ನಾಯಕರಾಗಬಲ್ಲ ಆಟಗಾರರು, ಇಲ್ಲಿದೆ ಡೀಟೇಲ್ಸ್
ಸ್ಕೋರು ವಿವರ:
ಭಾರತ ಮೊದಲ ಇನ್ನಿಂಗ್ಸ್ 77.3 ಓವರ್ 223/10
ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 76.3 ಓವರ್ 210/10
(ಕೀಗನ್ ಪೀಟರ್ಸನ್ 72, ಟೆಂಬ ಬವುಮ 28, ಕೇಶವ್ ಮಹಾರಾಜ್ 25, ರಸೀ ವಾನ್ ಡರ್ ಡುಸೆನ್ 21, ಕಗಿಸೊ ರಬಡ 15 ರನ್ – ಜಸ್ಪ್ರೀತ್ ಬುಮ್ರಾ 42/5, ಮೊಹಮ್ಮದ್ ಶಮಿ 39/2, ಉಮೇಶ್ ಯಾದವ್ 64/2)
ಭಾರತ ಎರಡನೇ ಇನ್ನಿಂಗ್ಸ್ 17 ಓವರ್ 57/2
(ವಿರಾಟ್ ಕೊಹ್ಲಿ ಅಜೇಯ 14 ರನ್)
ಭಾರತಕ್ಕೆ ಒಟ್ಟಾರೆ 70 ರನ್ ಮುನ್ನಡೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ