Inzamam-ul-Haq- ಭಾರತಕ್ಕೆ ಗೆಲುವಿನ ಚಾನ್ಸ್ ಹೆಚ್ಚು ಎಂದ ಮಾಜಿ ಪಾಕ್ ಕ್ರಿಕೆಟಿಗ ಇಂಜಮಮ್

T20 World Cup 2021- ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವಿಶ್ವಕಪ್ ಫೈನಲ್​ಗೆ ಮುಂಚಿನ ಫೈನಲ್ ಆಗಿದೆ ಎಂದು ಹೇಳಿರುವ ಇಂಜಮಮ್ ಉಲ್ ಹಕ್, ಈ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶ ಭಾರತಕ್ಕೆ ಹೆಚ್ಚಿದೆ ಎಂದಿದ್ದಾರೆ.

ಇಂಜಮಮ್ ಉಲ್ ಹಕ್

ಇಂಜಮಮ್ ಉಲ್ ಹಕ್

 • Share this:
  ದುಬೈ, ಅ. 24: ಟಿ20 ವಿಶ್ವಕಪ್ ಅನ್ನು ಗೆಲ್ಲಲು ಭಾರತಕ್ಕೇ ಹೆಚ್ಚು ಚಾನ್ಸ್ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಮ್ ಉಲ್ ಹಕ್ ಅಭಿಪ್ರಾಯಪಟ್ಟಿದ್ಧಾರೆ. ಪಿಚ್​ನ ಪರಿಸ್ಥಿತಿ ಹಾಗೂ ಭಾರತ ತಂಡದ ಆಟಗಾರರಿಗೆ ಟಿ20 ಕ್ರಿಕೆಟ್​ನಲ್ಲಿ ಇರುವ ಅನುಭವ ನೋಡಿದರೆ ಬೇರೆಲ್ಲಾ ತಂಡಗಳಿಂತ ಭಾರತಕ್ಕೆ ವರ್ಲ್ಡ್ ಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಇಂಜಮಮ್ ಹೇಳಿದ್ದಾರೆ. “ಯಾವುದೇ ಟೂರ್ನಿ ಇರಲಿ ಇದೇ ತಂಡ ಗೆಲ್ಲುತ್ತದೆ ಎಂದು ಪಕ್ಕಾ ಹೇಳಲು ಅಸಾಧ್ಯ. ಒಂದು ತಂಡಕ್ಕೆ ಗೆಲ್ಲುವ ಅವಕಾಶ ಎಷ್ಟು ಎಂದು ಅಂದಾಜು ಮಾಡಲು ಮಾತ್ರ ಸಾಧ್ಯ. ಇಲ್ಲಿನ ವಾತಾವರಣ, ಪಿಚ್ ಪರಿಸ್ಥಿತಿಯನ್ನ ಗಮನಿಸಿದರೆ ಈ ಟೂರ್ನಿಯನ್ನ ಗೆಲ್ಲಲು ಭಾರತಕ್ಕೆ ಹೆಚ್ಚಿನ ಅವಕಾಶ ಇದೆ ಎಂಬುದು ನನ್ನ ಭಾವನೆ. ಮೇಲಾಗಿ ಭಾರತ ತಂಡದಲ್ಲಿ ಅನುಭವಿ ಟಿ20 ಆಟಗಾರರಿದ್ಧಾರೆ” ಎಂದು ಮಾಜಿ ಪಾಕ್ ಆಟಗಾರ ಹೇಳಿದ್ಧಾರೆ.

  ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ:

  ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ವಿಶ್ವಕಪ್ ಫೈನಲ್​ಗೆ ಮುನ್ನ ನಡೆಯುವ ಫೈನಲ್ ಎಂದು ಇಂಜಮಮ್ ಅಭಿಪ್ರಾಯಪಟ್ಟಿದ್ದಾರೆ. “ಸೂಪರ್ 12 ಹಂತದಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ಫೈನಲ್​ಗೆ ಮುಂಚಿನ ಫೈನಲ್ ಆಗಿದೆ. ಬೇರಾವ ಪಂದ್ಯಕ್ಕೂ ಇಷ್ಟು ಹೈಪ್ ಸಿಗುವುದಿಲ್ಲಲ. 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನ ಪಂದ್ಯವಾಗಿತ್ತು. ಎರಡೂ ತಂಡಗಳ ಆಟಗಾರರಿಗೆ ಅದು ಫೈನಲ್ ಮ್ಯಾಚ್ ಎಂಬಂತೆ ಭಾಸವಾಗಿತ್ತು. ಈ ಪಂದ್ಯ ಗೆದ್ದ ತಂಡದ ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ತಂಡದ ಮೇಲಿನ ಶೇ. 50ರಷ್ಟು ಒತ್ತಡ ನಿವಾರಣೆ ಆಗುತ್ತದೆ” ಎಂದು ಇಂಜಮಮ್ ತಿಳಿಸಿದ್ಧಾರೆ.

  “ಆಸ್ಟ್ರೇಲಿಯಾ ವಿರುದ್ಧದ ವಾರ್ಮಪ್ ಮ್ಯಾಚ್​ನಲ್ಲಿ ಭಾರತ ಬಹಳ ನಿರಾಯಾಸವಾಗಿ ಗೆಲುವು ಸಾಧಿಸಿತು. ಇಂಥ ಪಿಚ್​ಗಳಲ್ಲಿ ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಟಿ20 ತಂಡವನ್ನ ಹೊಂದಿದೆ. ಈ ಪಿಚ್​ನಲ್ಲಿ ವಿರಾಟ್ ಕೊಹ್ಲಿಯ ಅಗತ್ಯತೆ ಇಲ್ಲದೆಯೇ ತಂಡ 155 ರನ್ ಚೇಸ್ ಮಾಡಬಲ್ಲಷ್ಟು ಸಮರ್ಥವಾಗಿದೆ” ಎಂದರು.

  ಇಂದು ಭಾರತ-ಪಾಕ್ ಪಂದ್ಯ:

  ಇಂದು ದುಬೈನಲ್ಲಿ ಸಂಜೆ 7:30ಕ್ಕೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ಆರಂಭವಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನ ವಾಹಿನಿಗಳಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ, ಡಿಜಿಟಲ್​ನಲ್ಲಿ ಹಾಟ್​ಸ್ಟಾರ್​ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

  ಟಿ20 ಆಗಲಿ, ಏಕದಿನ ಕ್ರಿಕೆಟ್ ಆಗಲಿ ಯಾವುದೇ ವಿಶ್ವಕಪ್​ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿಲ್ಲ. ಈ ಬಾರಿ ಬಾಬರ್ ಅಜಂ ನೇತೃತ್ವದಲ್ಲಿ ಪಾಕಿಸ್ತಾನ ತಂಡ ಪ್ರಬಲವಾಗಿ ಕಾಣುತ್ತಿದೆ. ಅದರ ಬೌಲಿಂಗ್ ಪಡೆ ಬಹಳ ಸಮರ್ಥವಾಗಿದೆ. ಇವತ್ತಿನ ಪಂದ್ಯದಲ್ಲಿ ಯಾವ ಫಲಿತಾಂಶವಾದರೂ ಅನಿರೀಕ್ಷಿತವಲ್ಲ.
  Published by:Vijayasarthy SN
  First published: