news18-kannada Updated:January 19, 2021, 6:10 PM IST
Team India
ಭಾರತ-ಆಸ್ಟ್ರೇಲಿಯಾ ನಡುವಣ ಅಂತಿಮ ಟೆಸ್ಟ್ ಪಂದ್ಯದ ಐತಿಹಾಸಿಕ ಗೆಲುವು ನಾನಾ ಕಾರಣಗಳಿಂದ ಮಹತ್ವದ್ದು ಎನಿಸಿಕೊಂಡಿದೆ. ಏಕೆಂದರೆ ಪ್ರಮುಖ ಆಟಗಾರರ ಅನುಪಸ್ಥಿತಿ ನಡುವೆ, ಬಲಿಷ್ಠ ಆಸ್ಟ್ರೇಲಿಯಾವನ್ನು ತವರಿನಲ್ಲಿ ಮಣಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ಅನೇಕರು ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡ್ರಾನಲ್ಲಿ ಅಥವಾ ಆಸ್ಟ್ರೇಲಿಯಾ ವಿಜಯದೊಂದಿಗೆ ಅಂತ್ಯವಾಗಲಿದೆ ಎಂದು ಷರಾ ಬರೆದಿದ್ದರು.
ಆದರೆ ಎಲ್ಲರ ಲೆಕ್ಕಾಚಾರಗಳನ್ನು ಟೀಮ್ ಇಂಡಿಯಾ ಯುವ ತರುಣರ ಪಡೆ ಸುಳ್ಳಾಗಿಸಿದೆ. ಅದರಲ್ಲೂ ಎದುರಾಳಿಗಳಿಗೆ ಗೆಲುವು ಮರೀಚಿಕೆಯಾಗಿದ್ದ ಗಬ್ಬಾ ಮೈದಾನದಲ್ಲೇ ಟೀಮ್ ಇಂಡಿಯಾ ಸೋಲುಣಿಸಿದೆ. ಇದರೊಂದಿಗೆ ಕಳೆದ 32 ವರ್ಷಗಳಿಂದ ಬ್ರಿಸ್ಬೇನ್ ಮೈದಾನದಲ್ಲಿದ್ದ ಆಸ್ಟ್ರೇಲಿಯಾ ಗೆಲುವಿನ ನಾಗಾಲೋಟಕ್ಕೆ ಭಾರತ ತಂಡ ಅಂತ್ಯವಾಡಿದೆ.
ಹೌದು, ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆಯಿದೆ ಎಂದು ಈ ಮೊದಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡಿತ್ತು. ಇದರ ನಡುವೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 369 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ 336 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅಲ್ಪ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಮೇಲುಗೈ ಸಾಧಿಸಿತ್ತು.
2ನೇ ಇನಿಂಗ್ಸ್ನಲ್ಲೂ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿತ್ತು. ಆದರೆ ನಾಲ್ಕನೇ ದಿನ ಆಸೀಸ್ ಬ್ಯಾಟ್ಸ್ಮನ್ಗಳ ಪಾಲಿಗೆ ಕಂಟಕವಾದ ಮೊಹಮ್ಮದ್ ಸಿರಾಜ್ 5 ವಿಕೆಟ್ ಉರುಳಿಸಿ ಆಸ್ಟ್ರೇಲಿಯಾ ತಂಡವನ್ನು 294 ರನ್ಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ 328 ರನ್ಗಳ ಗುರಿ ಪಡೆದ ಭಾರತಕ್ಕೆ ಕೊನೆಯ ಗೆಲ್ಲಲು 325 ರನ್ಗಳ ಅವಶ್ಯಕತೆಯಿತ್ತು. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಮನಮೋಹಕ 91 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅವರ ಬಿರುಸಿನ 89 ರನ್ಗಳ ಸಹಾಯದಿಂದ ಟೀಮ್ ಇಂಡಿಯಾ 3 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಇತಿಹಾಸ ಬರೆಯಿತು.
ಈ ಭರ್ಜರಿ ಗೆಲುವಿನೊಂದಿಗೆ ಗಬ್ಬಾ ಮೈದಾನದಲ್ಲಿ ಸೋಲಿಲ್ಲದ ಸರದಾರನಾಗಿ ಮರೆಯುತ್ತಿದ್ದ ಆಸ್ಟ್ರೇಲಿಯಾ 32 ವರ್ಷಗಳ ಬಳಿಕ ಸೋಲಿನ ರುಚಿ ತೋರಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.
ಹೌದು, ಆಸ್ಟ್ರೇಲಿಯಾ ತಂಡವು ಬ್ರಿಸ್ಬೇನ್ ಗಬ್ಬಾ ಮೈದಾನ ಆಸೀಸ್ ಪಾಲಿಗೆ ಅದೃಷ್ಟದ ಅಂಗಳ. ಅಂದರೆ 1988ರಿಂದ ಈ ಪಿಚ್ ನಲ್ಲಿ ಕಾಂಗರೂ ಪಡೆ ಸೋತೇ ಇಲ್ಲ. 1988 ರಲ್ಲಿ ಪ್ರಬಲ ವೆಸ್ಟ್ ಇಂಡೀಸ್ ವಿರುದ್ಧದ ಸೋತ ಬಳಿಕ ಆಸ್ಟ್ರೇಲಿಯಾ ಈ ಮೈದಾನದಲ್ಲಿ 31 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ 24 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಅಷ್ಟೇ ಅಲ್ಲದೆ ಗೆಲ್ಲಲು ಅಸಾಧ್ಯವಾಗಿದ್ದ 7 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ 32 ವರ್ಷಗಳ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾದ ಹುಟ್ಟಡಗಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
Published by:
zahir
First published:
January 19, 2021, 6:10 PM IST