ಪಿಚ್ ರೋಲರ್ ಕದ್ದ ಆರೋಪ: ಕೆರಳಿ ಕೆಂಡವಾದ ಟೀಮ್ ಇಂಡಿಯಾ ಕ್ರಿಕೆಟಿಗ ಪರ್ವೆಜ್ ರಸೂಲ್

ಜಿಲ್ಲಾ ಉಪಸಂಸ್ಥೆಗಳಿಗೆ ವಿತರಿಸಲಾಗಿದ್ದ ರೋಡ್ ರೋಲರ್​ಗಳನ್ನ ವಾಪಸ್ ಮಾಡುವಂತೆ ಕೇಳಿ ಬರೆದಿದ್ದ ಇಮೇಲ್​ನಲ್ಲಿ ಕ್ರಿಕೆಟಿಗ ಪರ್ವೇಜ್ ರಸೂಲ್ ಅವರ ವಿಳಾಸವನ್ನೂ ಸೇರಿಸಲಾಗಿದೆ. ತಾನು ಕದ್ದಿಲ್ಲ ಎಂದು ಉತ್ತರಿಸಿ ರಸೂಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪರ್ವೇಜ್ ರಸೂಲ್

ಪರ್ವೇಜ್ ರಸೂಲ್

 • News18
 • Last Updated :
 • Share this:
  ನವದೆಹಲಿ, ಆ. 20: ಭಾರತ ತಂಡದಲ್ಲಿ ಆಡಿದ ಜಮ್ಮು ಕಾಶ್ಮೀರದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿರುವ ವೇಗದ ಬೌಲರ್ ಪರ್ವೇಜ್ ರಸೂಲ್ ವಿಚಿತ್ರ ಆರೋಪ ಎದುರಿಸುತ್ತಿದ್ದಾರೆ. ಪಿಚ್ ರೋಲರ್ ತೆಗೆದುಕೊಂಡು ವಾಪಸ್ ಮಾಡಿಲ್ಲ. ಅದನ್ನ ಹಿಂದಿರುಗಿಸದಿದ್ದರೆ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾದೀತು ಎಂದು ಪರ್ವೇಜ್ ರಸೂಲ್ ಅವರಿಗೆ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ ಇಮೇಲ್ ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಿದೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕ್ರಿಕೆಟಿಗ, ತಾನು ರೋಡ್ ರೋಲರ್ ಕದ್ದಿಲ್ಲ. ತಾನೊಬ್ಬ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರನಾಗಿದ್ದು ಈ ರೀತಿ ನಡೆಸಿಕೊಳ್ಳುವುದು ಸರಿಯಾ ಎಂದು ಪ್ರಶ್ನಿಸಿದ್ದಾರೆ.

  ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಸೇರಿದ ರೋಡ್ ರೋಲರ್ ಮೊದಲಾದ ಯಂತ್ರೋಪಕರಣಗಳನ್ನ ಜಿಲ್ಲಾ ಸಂಸ್ಥೆಗಳಿಗೆ ಯಾವುದೇ ವೋಚರ್ ಇಲ್ಲದೇ ಹಂಚಿಕೆ ಮಾಡಲಾಗಿತ್ತು. ಆದರೆ, ಈ ಯಂತ್ರೋಪಕರಣಗಳನ್ನ ಮರಳಿಸಲಾಗಿಲ್ಲ. ಆದರೆ, ಬಹುತೇಕ ಜಿಲ್ಲಾ ಸಂಸ್ಥೆಗಳಿಗೆ ಮೇಲ್ ವಿಳಾಸವೇ ಇಲ್ಲ. ಹೀಗಾಗಿ, ಜೆಕೆಸಿಎಯಲ್ಲಿ ನೊಂದಾಯಿಸಿದ ಜಿಲ್ಲಾ ಪ್ರತಿನಿಧಿಗಳ ಹೆಸರಿಗೆ ಮೇಲ್ ಕಳುಹಿಸಲಾಗಿದೆ. ಪರ್ವೇಜ್ ರಸೂಲ್ ಅವರ ಹೆಸರೂ ನೊಂದಾಯಿತವಾದ್ದರಿಂದ ಅವರಿಗೂ ಇಮೇಲ್ ಕಳುಹಿಸಲಾಗಿತ್ತು. ಈ ವಿಚಾರವನ್ನು ಅವರು ಸುಮ್ಮನೆ ದೊಡ್ಡದು ಮಾಡುತ್ತಿದ್ಧಾರೆ ಎಂದು ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧಿಕಾರಿ ಅನಿಲ್ ಗುಪ್ತಾ ಹೇಳುತ್ತಾರೆ.

  ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯನ್ನ ಬಿಸಿಸಿಐ ನಿರ್ವಹಿಸಬೇಕು ಎಂದು ಆ ರಾಜ್ಯದ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅದರ ಮೇರೆಗೆ ಇದೇ ಜೂನ್ ತಿಂಗಳಲ್ಲಿ ಉಪ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯಲ್ಲಿ ಅನಿಲ್ ಗುಪ್ತಾ, ಸುನೀಲ್ ಸೇಠಿ ಮತ್ತು ಮಿಥುನ್ ಮನ್ಹಾಸ್ ಇದ್ದಾರೆ. ಅನಿಲ್ ಗುಪ್ತಾ ಮತ್ತು ಸುನೀಲ್ ಸೇಠಿ ಅವರಿಬ್ಬರೂ ಬಿಜೆಪಿ ವಕ್ತಾರರಾಗಿದ್ದಾರೆ. ಮಿಥುನ್ ಮನ್ಹಾಸ್ ಕ್ರಿಕೆಟ್ ಆಟಗಾರರಾಗಿದ್ದಾರೆ. ಹಾಗೆಯೇ, ಕಣಿವೆ ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿ ವಿಚಾರ ಗಮನಿಸಲು ಮಜೀದ್ ದರ್ ಅವರನ್ನ ನೇಮಿಸಲಾಗಿದ್ದು ಅವರು ಈ ಉಪ-ಸಮಿತಿ ಅಡಿಯಲ್ಲಿ ಬರುತ್ತಾರೆ.

  ಇದನ್ನೂ ಓದಿ: Ranji Trophy- ನ. 16ರಂದು ಆರಂಭವಾಗಬೇಕಿದ್ದ ರಣಜಿ ಟ್ರೋಫಿ ಜ. 5ಕ್ಕೆ ಮುಂದೂಡಿಕೆ

  ಇನ್ನು, ರೋಡ್ ರೋಲರ್ ಕಳುವಿನ ವಿಚಾರಕ್ಕೆ ಬಂದರೆ ಅನಿಲ್ ಗುಪ್ತಾ ಅವರು ತಾವು ಪರ್ವೇಜ್ ರಸೂಲ್ ಮೇಲೆ ನೇರವಾಗಿ ಆರೋಪ ಮಾಡಿಲ್ಲ ಎನ್ನುತ್ತಾರೆ. ಪರ್ವೇಜ್ ರಸೂಲ್ ಅನಂತನಾಗ್ ಜಿಲ್ಲೆಯ ಬಿಜ್​ಬಿಹಾರ ಊರಿನವರಾಗಿದ್ದಾರೆ. ಅದೇ ಊರಿನ ಮೊಹಮ್ಮದ್ ಶಫಿ ಅವರಿಗೆ ಜಮ್ಮು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಮೊದಲು ನೋಟೀಸ್ ನೀಡಿತ್ತು. ನಂತರ ಸಂಸ್ಥೆಯ ದಾಖಲೆಗಳಲ್ಲಿ ರಸೂಲ್ ಹೆಸರು ಇದ್ದರಿಂದ ಎರಡನೇ ನೋಟೀಸ್​ನಲ್ಲಿ ಅವರ ಹೆಸರನ್ನ ಸೇರಿಸಲಾಯಿತು. ಆಡಿಟ್ ರಿಪೋರ್ಟ್ ಸಿದ್ಧಪಡಿಸಬೇಕಿದ್ದರಿಂದ ಲೆಡ್ಜರ್ ಬುಕ್ ಮೇಂಟೇನ್ ಮಾಡುವ ಅಗತ್ಯ ಇತ್ತು. ಹಲವು ವರ್ಷಗಳಿಂದ ಯಾವುದೇ ದಾಖಲೆ ಪುಸ್ತಕಗಳನ್ನ ಇಲ್ಲಿ ಇಟ್ಟುಕೊಳ್ಳಲಾಗಿಲ್ಲ. ಕೋರ್ಟ್ ಆದೇಶದ ಬಳಿಕ ನಾವು ಈ ಬಗ್ಗೆ ಗಮನ ವಹಿಸಿದಾಗ ಈ ಯಂತ್ರೋಪಕರಣಗಳು ನಾಪತ್ತೆಯಾಗಿರುವುದು ಕಂಡುಬಂದಿತು. ಹೀಗಾಗಿ, ಇಮೇಲ್ ಕಳುಹಿಸಿದ್ದೇವೆ ಎಂದು ಅನಿಲ್ ಗುಪ್ತಾ ಹೇಳಿದ್ಧಾರೆ.

  ರಸೂಲ್ ಖಾರದ ಪ್ರತಿಕ್ರಿಯೆ:

  ಜುಲೈ 26ರಂದು ಪರ್ವೇಜ್ ರಸೂಲ್ ಈ ಇಮೇಲ್​ಗೆ ಉತ್ತರ ನೀಡುತ್ತಾ ಹೀಗೆ ಬರೆದಿದ್ದಾರೆ: “ನಾನು ಈ ದೇಶವನ್ನು ಪ್ರತಿನಿಧಿಸಿದ ಮೊದಲ ಜಮ್ಮು-ಕಾಶ್ಮೀರ ಕ್ರಿಕೆಟ್ ಆಟಗಾರ. ಐಪಿಎಲ್, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ಭಾರತ ಎ, ಬೋರ್ಡ್ ಪ್ರೆಸಿಡೆಂಟ್ ಇಲವೆನ್, ಇರಾನಿ ಟ್ರೋಫಿಯಲ್ಲಿ ಆಡಿದ್ದೇನೆ. ಕಳೆದ 6 ವರ್ಷದಲ್ಲಿ ಜಮ್ಮು-ಕಾಶ್ಮೀರ ರಣಜಿ ತಂಡದ ನಾಯಕನಾಗಿದ್ದೇನೆ. ಬಿಸಿಸಿಐನಿಂದ ಎರಡು ಬಾರಿ ಅತ್ಯುತ್ತಮ ಆಲ್​ರೌಂಡರ್ ಪ್ರಶಸ್ತಿಯ ಗೌರವ ಪಡೆದಿದ್ದೇನೆ. ಇವತ್ತು ನಾವು ಜೆಕೆಸಿಎಯಿಂದ ರೋಲರ್ ಪಡೆದಿದ್ದೇನೆ ಎಂದು ಹೇಳಿ ಪತ್ರ ಪಡೆದಿದ್ದೇನೆ. ಇದು ನಿಜಕ್ಕೂ ದುರದೃಷ್ಟಕರ. ನಾನು ರೋಲರ್ ಆಗಲೀ ಯಾವುದೇ ಯಂತ್ರೋಪಕರಣವನ್ನಾಗಲೀ ಕಾಶ್ಮೀರ ಕ್ರಿಕೆಟ್ ಸಂಸ್ಥೆಯಿಂದ ಪಡೆದಿಲ್ಲ. ನಾನು ಕ್ರಿಕೆಟ್ ಆಡುತ್ತಿರುವ ಒಬ್ಬ ಆಟಗಾರ. ಜಮ್ಮು ಕಾಶ್ಮೀರ ಕ್ರಿಕೆಟ್​ಗೆ ಜೀವನ ಅರ್ಪಿಸಿದ ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟಿಗನನ್ನು ಕೇಳುವ ರೀತಿಯಾ ಇದು ಎಂದು ಕೇಳಬಯಸುತ್ತೇನೆ. ಎಲ್ಲಾ ಜಿಲ್ಲೆಗಳಲ್ಲೂ ನಿಮ್ಮ ಅಂಗ ಸಂಸ್ಥೆಗಳಿವೆ. ನನ್ನನ್ನು ಕೇಳುವ ಬದಲು ಈ ಸಂಸ್ಥೆಗಳನ್ನೇ ನೀವು ನೇರವಾಗಿ ಕೇಳಬಹುದಿತ್ತು” ಎಂದು ಪರ್ವೇಜ್ ರಸೂಲ್ ಉತ್ತರಿಸಿದ್ದಾರೆ.
  Published by:Vijayasarthy SN
  First published: