ಡಿ. 17ಕ್ಕೆ ನಿಗದಿಯಾಗಿದ್ದ ಭಾರತ-ಸೌತ್ ಆಫ್ರಿಕಾ ಕ್ರಿಕೆಟ್ ಸರಣಿ ಮುಂದೂಡಿಕೆ ಸಾಧ್ಯತೆ

ಸೌತ್ ಆಫ್ರಿಕಾದಲ್ಲಿ ಕೋವಿಡ್ ರೂಪಾಂತರಿ ಒಮೈಕ್ರಾನ್ ವೈರಸ್ ಆರ್ಭಟಿಸುತ್ತಿರುವುದರಿಂದ ದಕ್ಷಿಣ ಆಫ್ರಿಕಾಗೆ ಟೆಸ್ಟ್ ತಂಡ ಕಳುಹಿಸುವುದರ ಸಂಬಂಧ ಬಿಸಿಸಿಐ ಕಾದುನೋಡಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

 • Share this:
  ನವದೆಹಲಿ, ಡಿ. 02: ದಕ್ಷಿಣ ಆಫ್ರಿಕಾದಲ್ಲಿ ಹೊಸ ತಳಿಯ ಕೋವಿಡ್ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಎಎನ್​ಐ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ, ಡಿಸೆಂಬರ್ 17ಕ್ಕೆ ಆರಂಭವಾಗಬೇಕಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ಒಂದು ವಾರ ಮುಂದೂಡಿಕೆ ಆಗಿದೆ. ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಕೋವಿಡ್ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಆಟಗಾರರ ಸುರಕ್ಷಿತ ದೃಷ್ಟಿಯಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ವರದಿಗಳೂ ಇವೆ. ಆದರೆ, ಬಿಸಿಸಿಐನಿಂದಾಗಲೀ ಸೌಥ್ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದಾಗಲೀ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

  ಮೂಲ ವೇಳಾಪಟ್ಟಿ ಪ್ರಕಾರ ಡಿ. 17ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಕ್ರಿಕೆಟ್ ಪ್ರವಾಸ ಆರಂಭವಾಗಲಿದೆ. ಇದರಲ್ಲಿ ಜೋಹಾನ್ಸ್​ಬರ್ಗ್, ಸೆಂಚೂರಿಯನ್, ಪಾರ್ಲ್ ಮತ್ತು ಕೇಪ್ ಟೌನ್​ನಲ್ಲಿ ಮೂರು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಹಾಗೂ ನಾಲ್ಕು ಟಿ20 ಪಂದ್ಯಗಳು ನಡೆಯುವುದೆಂದು ನಿಗದಿಯಾಗಿದೆ. ಒಂದು ವಾರ ಮುಂದೂಡಿಕೆ ಆದರೆ ಡಿ. 24ರಂದು ಸರಣಿ ಆರಂಭವಾಗುತ್ತದೆ. ದಕ್ಷಿಣ ಆಫ್ರಿಕಾಗೆ ತಂಡವನ್ನು ಕಳುಹಿಸುವ ಮುನ್ನ ಕೇಂದ್ರ ಸರ್ಕಾರದ ಜೊತೆ ಬಿಸಿಸಿಐ ಸಮಾಲೋಚನೆ ನಡೆಸಬೇಕೆಂದು ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದರು. ಹೀಗಾಗಿ, ಟೀಮ್ ಇಂಡಿಯಾದ ಸೌತ್ ಆಫ್ರಿಕಾ ಪ್ರವಾಸದ ಬಗ್ಗೆ ಸಂದೇಹಗಳು ಉಳಿದಿವೆ.

  ನ್ಯೂಜಿಲೆಂಡ್ ವಿರುದ್ಧ ಕಾನಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಬಿಸಿಸಿಐನ ಆಯ್ಕೆ ಸಮಿತಿಯ ಸಭೆ ನಡೆಯಬೇಕಿತ್ತು. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದ ಆಟಗಾರರು ದಕ್ಷಿಣ ಆಫ್ರಿಕಾಗೆ ಕ್ರಿಕೆಟ್ ಪ್ರವಾಸ ಹೋಗುವ ಮುನ್ನ 8 ದಿನ ಕ್ವಾರಂಟೈನ್​ಗೆ ಒಳಪಡಬೇಕಿತ್ತು. ಆ ಬಗ್ಗೆ ಆಟಗಾರರಿಗೆ ಬಿಸಿಸಿಐನಿಂದ ಯಾವುದೇ ಸೂಚನೆಯೂ ಹೋಗಿಲ್ಲ. ಹೀಗಾಗಿ, ಸದ್ಯ ಪರಿಸ್ಥಿತಿ ಅನಿಶ್ಚಿತವಾಗಿದೆ.

  ಇದನ್ನೂ ಓದಿ: IPL Auction- ಮುಂದಿನ ವರ್ಷದಿಂದ ಐಪಿಎಲ್ ಆಟಗಾರರ ಹರಾಜು ಇರೋಲ್ಲವಾ? ಇಲ್ಲಿದೆ ಮಾಹಿತಿ

  ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿಕೆ: 

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊನ್ನೆ ಮಂಗಳವಾರ ನೀಡಿದ ಮಾಹಿತಿ ಪ್ರಕಾರ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಕ್ರಿಕೆಟ್ ಪ್ರವಾಸ ನಿಗದಿಯಂತೆ ನಡೆಯುತ್ತದೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಪರಿಸ್ಥಿತಿಯನ್ನ ಬಿಸಿಸಿಐ ಅವಲೋಕಿಸುತ್ತಿದೆ ಎಂದಿದ್ಧಾರೆ.

  “ಕ್ರಿಕೆಟ್ ಪ್ರವಾಸ ಸದ್ಯ ನಿಗದಿಯಾದಂತೆ ನಡೆಯುತ್ತದೆ. ನಿರ್ಧಾರ ಬದಲಾವಣೆಗೆ ಇನ್ನೂ ನಮಗೆ ಸಮಯ ಇದೆ. ಡಿಸೆಂಬರ್ 17ಕ್ಕೆ ಮೊದಲ ಟೆಸ್ಟ್ ಪಂದ್ಯ ನಿಗದಿಯಾಗಿದೆ. ಅದರ ಬಗ್ಗೆ ವಿಮರ್ಶೆ ಮಾಡುತ್ತಿದ್ದೇವೆ. ಆಟಗಾರರ ಭದ್ರತೆ ಮತ್ತು ಆರೋಗ್ಯ ಬಹಳ ಮುಖ್ಯ. ಈ ಸಂಬಂಧ ಏನು ಕ್ರಮ ಕೈಗೊಳ್ಳಬಹುದು ಯೋಚಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡೋಣ” ಎಂದು ಸೌರವ್ ಗಂಗೂಲಿ ಅವರು ಹೇಳಿದ್ದಾರೆ.

  ಇದನ್ನೂ ಓದಿ: Pro Kabaddi- ಡ್ಯಾಶ್, ಬ್ಲಾಕ್… ಕಬಡ್ಡಿಯ 5 ರಕ್ಷಣಾ ತಂತ್ರಗಳು ಬಲು ರೋಚಕ

  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡ: 

  ಭಾರತ ಎ ತಂಡ ಈಗಾಗಲೇ ಸೌತ್ ಆಫ್ರಿಕಾ ಪ್ರವಾಸದಲ್ಲಿದೆ. ಅಲ್ಲಿ ಮೂರು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆಯುತ್ತಿವೆ. ಈಗಾಗಲೇ ಒಂದು ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈಗ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೂರನೇ ಅನಧಿಕೃತ ಟೆಸ್ಟ್ ಪಂದ್ಯ ಡಿಸೆಂಬರ್ 6ಕ್ಕೆ ಆರಂಭವಾಗುತ್ತದೆ.

  ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡದ ನಾಯಕತ್ವ ಪ್ರಿಯಾಂಕ್ ಪಾಂಚಾಲ್ ಅವರಿಗೆ ನೀಡಲಾಗಿದೆ. ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ಗಗನ ಹನುಮ ವಿಹಾರಿ, ಬಾಬಾ ಅಪರಾಜಿತ್, ಉಪೇಂದ್ರ ಯಾದವ್, ಕೃಷ್ಣಪ್ಪ ಗೌತಮ್, ರಾಹುಲ್ ಚಾಹರ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ಆರ್ಜನ್ ನಾಗ್ವಸ್ವಾಲ್ಲ ಅವರು ಟೀಮ್ ಇಂಡಿಯಾದಲ್ಲಿದ್ದಾರೆ.
  Published by:Vijayasarthy SN
  First published: