• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಒಂದೇ ಪಂದ್ಯದಲ್ಲಿ 628 ರನ್​, 11 ವಿಕೆಟ್: ಇಂತಹದೊಂದು ದಾಖಲೆ ಬರೆದಿದ್ದು 13 ವರ್ಷದ ಕ್ರಿಕೆಟಿಗ..!

ಒಂದೇ ಪಂದ್ಯದಲ್ಲಿ 628 ರನ್​, 11 ವಿಕೆಟ್: ಇಂತಹದೊಂದು ದಾಖಲೆ ಬರೆದಿದ್ದು 13 ವರ್ಷದ ಕ್ರಿಕೆಟಿಗ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2016 ರಲ್ಲಿ ಕೇವಲ 15 ವರ್ಷದ ಪ್ರಣವ್ ಧನವಾಡೆ ಶಾಲಾ ಕ್ರಿಕೆಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 1009 ರನ್ ಬಾರಿಸಿದ್ದನು. ಕೇವಲ 323 ಎಸೆತಗಳನ್ನು ಎದುರಿಸಿದ ಪ್ರಣವ್ 59 ಸಿಕ್ಸರ್ ಮತ್ತು 127 ಬೌಂಡರಿಗಳೊಂದಿಗೆ ಹೊಸ ವಿಶ್ವ ದಾಖಲೆ ಬರೆದಿದ್ದರು.

  • Share this:

ಸಾಮಾನ್ಯವಾಗಿ ಕ್ರಿಕೆಟ್​ ಅಂಗಳದ ದ್ವಿಶತಕ..ತ್ರಿಶತಕ ಮತ್ತು ವಿಶ್ವ ದಾಖಲೆಯ 400 ರನ್​ಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಆದರೆ 120 ವರ್ಷಗಳ ಹಿಂದೆಯೇ ಬ್ಯಾಟ್ಸ್​ಮನ್​ವೊಬ್ಬ ಇನಿಂಗ್ಸ್​ವೊಂದರಲ್ಲಿ 600 ರನ್​ ಬಾರಿಸಿದ್ದರು. ಅದು ಕೂಡ 13ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಹೌದು, ಇಂಗ್ಲಿಷ್ ಕ್ರಿಕೆಟಿಗ ಎಇಜೆ ಕಾಲಿನ್ಸ್ 120 ವರ್ಷಗಳ ಹಿಂದೆ ಇಂತಹದೊಂದು ಸಾಧನೆ ಮಾಡಿದ್ದರು. ಅದರಲ್ಲೂ ಇದೇ ಕಾಲಿನ್ಸ್ ಭಾರತದಲ್ಲಿ ಹುಟ್ಟಿ ಬೆಳೆದವರು ಎಂಬುದು ಮತ್ತೊಂದು ವಿಶೇಷ.


ಕಾಲಿನ್ಸ್ 1885 ರ ಆಗಸ್ಟ್ 18 ರಂದು ಹಜಾರಿಬಾಗ್​ನಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ಕ್ರಿಕೆಟ್ ಗೀಳು ಹೊಂದಿದ್ದ ಕಾಲಿನ್ಸ್, ಕ್ಲರ್ಕ್ ಹೌಸ್ ಜೂನಿಯರ್ ತಂಡದ ಪರ ಆಡುವ ಅವಕಾಶ ಪಡೆದಿದ್ದರು. ಅಲ್ಲದೆ ಇದೇ ತಂಡದ ಪರ ಕಾಲಿನ್ಸ್ ಅಜೇಯ 628 ರನ್ ಬಾರಿಸಿದ್ದು ವಿಶ್ವ ದಾಖಲೆಯಾಗಿತ್ತು.


ಅಂದು ಕಾಲಿನ್ಸ್ ಅವರ ಡಬಲ್ ತ್ರಿಶತಕದ ನೆರವಿನಿಂದ ಕ್ಲರ್ಕ್ ಹೌಸ್ ಜೂನಿಯರ್ ತಂಡವು 836 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಚೇಸ್ ಮಾಡಿದ್ದ ನಾರ್ತ್ ಟೌನ್ ಜೂನಿಯರ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 61 ರನ್​ಗೆ ಆಲೌಟ್ ಆಯಿತು. ಇದರೊಂದಿಗೆ ಕ್ಲರ್ಕ್ ಹೌಸ್ ತಂಡವು ಇನ್ನಿಂಗ್ಸ್ ಮತ್ತು 688 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.


ಈ ಪಂದ್ಯದ ಮತ್ತೊಂದು ವಿಶೇಷವೆಂದರೆ ಮೊದಲ ಇನಿಂಗ್ಸ್​ನಲ್ಲಿ ಕಾಲಿನ್ಸ್ 7 ವಿಕೆಟ್‌ಗಳನ್ನು ಉರುಳಿಸಿದ್ದರು. ಅಲ್ಲದೆ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದು ಒಟ್ಟು 11 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿದ್ದರು. ಅಂದರೆ 11 ವಿಕೆಟ್+628 ರನ್​ಗಳೊಂದಿಗೆ ಇಡೀ ಪಂದ್ಯವನ್ನು ಎಇಜೆ ಕಾಲಿನ್ಸ್ ಒಬ್ಬರೇ ನಿಯಂತ್ರಿಸಿದ್ದರು.


ಕ್ರಿಕೆಟ್​ನೊಂದಿಗೆ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾಲಿನ್ಸ್ ಕ್ಯಾಪ್ಟನ್ ಹುದ್ದೆಯನ್ನೂ ಪಡೆದಿದ್ದರು. 29 ವರ್ಷದವರಾಗಿದ್ದ ಕಾಲಿನ್ಸ್ 1914 ರಲ್ಲಿ ನಡೆದ ಮೊದಲ ವಿಶ್ವ ಮಹಾಯುದ್ಧದಲ್ಲಿ ಹುತಾತ್ಮರಾಗಿದ್ದರು. ಆದರೆ ಕ್ರಿಕೆಟ್ ಮೈದಾನದಲ್ಲಿ ಅವರು ನಿರ್ಮಿಸಿದ ದಾಖಲೆ ಇಂದಿಗೂ ಅವರನ್ನು ನೆನಪಿಸುತ್ತಿರುವುದು ವಿಶೇಷ.


ಅಂದಹಾಗೆ ಈ ದಾಖಲೆಯನ್ನು 2016 ರಲ್ಲಿ ಭಾರತೀಯ ಕ್ರಿಕೆಟಿಗನೇ ಮುರಿದಿರುವುದು ಮತ್ತೊಂದು ವಿಶೇಷ. ಹೌದು, 2016 ರಲ್ಲಿ ಕೇವಲ 15 ವರ್ಷದ ಪ್ರಣವ್ ಧನವಾಡೆ ಶಾಲಾ ಕ್ರಿಕೆಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 1009 ರನ್ ಬಾರಿಸಿದ್ದನು. ಕೇವಲ 323 ಎಸೆತಗಳನ್ನು ಎದುರಿಸಿದ ಪ್ರಣವ್ 59 ಸಿಕ್ಸರ್ ಮತ್ತು 127 ಬೌಂಡರಿಗಳೊಂದಿಗೆ ಹೊಸ ವಿಶ್ವ ದಾಖಲೆ ಬರೆದಿದ್ದರು. ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲೂ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ 1009 ರನ್ ಬಾರಿಸಿದ ಪ್ರಣವ್ ಧನವಾಡೆ ಹೆಸರಿನಲ್ಲಿದೆ. ಆದರೆ ಈ ದಾಖಲೆಯ ಬಳಿಕ ಪ್ರಣವ್ ಧನವಾಡೆ ಮತ್ಯಾವತ್ತೂ ಕ್ರಿಕೆಟ್ ಅಂಗಳದಲ್ಲಿ ಸುದ್ದಿಯಾಗಿಲ್ಲ ಎಂಬುದೇ ದುರಂತ.

First published: