Ind Vs SL – ಭುವಿ, ಎಸ್​ಕೆ ಭರ್ಜರಿ ಆಟ; ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಶುಭಾರಂಭ

ಮೊದಲ ಟಿ20 ಪಂದ್ಯದಲ್ಲಿ ಗೆಲ್ಲಲು ಭಾರತ ಒಡ್ಡಿದ 165 ರನ್​ಗಳ ಸಾಧಾರಣ ಸವಾಲಿಗೆ ಪ್ರತಿಯಾಗಿ ಶ್ರೀಲಂಕಾ ಇನ್ನಿಂಗ್ಸ್ 126 ರನ್​ಗೆ ಅಂತ್ಯಗೊಂಡಿತು. ಭುವನೇಶ್ವರ್ ಕುಮಾರ್ 4 ವಿಕೆಟ್ ಗಳಿಸಿ ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು.

ಭಾರತದ ಕ್ರಿಕೆಟಿಗರು

ಭಾರತದ ಕ್ರಿಕೆಟಿಗರು

  • Share this:
ಕೊಲಂಬೋ: ಲಂಕನ್ನರ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ತಂಡ ನಿನ್ನೆ ಆರಂಭಗೊಂಡ ಟಿ20 ಸರಣಿಯಲ್ಲೂ ಶುಭಾರಂಭ ಮಾಡಿದೆ. ಕೊಲಂಬೋದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ 38 ರನ್ನುಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಬ್ಯಾಟಿಂಗ್​ಗೆ ನೆರವಾಗುತ್ತಿದ್ದ ಈ ಪಿಚ್​ನಲ್ಲಿ ಭಾರತ 164 ರನ್​​ಗಳನ್ನಷ್ಟೇ ಗಳಿಸಿದ ಭಾರತ ಆ ಸಾಧಾರಣ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಗೆಲ್ಲಲು 165 ರನ್ ಗುರಿ ಪಡೆದ ಲಂಕನ್ನರು ಗೆಲ್ಲುವ ನಿರೀಕ್ಷೆ ದಟ್ಟವಾಗಿತ್ತಾದರೂ ಭಾರತದ ಬೌಲರ್​ಗಳ ಕೈಚಳಕಕ್ಕೆ ಸಿಂಹಳೀಯ ಬ್ಯಾಟುಗಾರರು ತತ್ತರಿಸಿದರು. ಪರಿಣಾಮವಾಗಿ ಶ್ರೀಲಂಕಾ ಇನ್ನಿಂಗ್ಸ್ 19ನೇ ಓವರ್​ನಲ್ಲಿ 126 ರನ್​ಗೆ ಅಂತ್ಯಗೊಂಡು ಭಾರತಕ್ಕೆ 38 ರನ್​ಗಳ ಭರ್ಜರಿ ಗೆಲುವಿಗೆ ಕಾರಣವಾಯಿತು. ಬ್ಯಾಟಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್, ಶಿಖರ್ ಧವನ್ ಹಾಗೂ ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಯುಜವೇಂದ್ರ ಚಹಲ್ ಮಿಂಚಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಲ್ಪಟ್ಟ ಭಾರತ ಪಂದ್ಯದ ಮೊದಲ ಎಸೆತದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಶಾ ನಿರ್ಗಮನದ ಬಳಿಕ ನಾಯಕ ಶಿಖರ್ ಧವನ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ಅವರಂತೂ ಅಮೋಘ ಫಾರ್ಮ್​ನಲ್ಲಿದ್ದು, 34 ಎಸೆತದಲ್ಲಿ 50 ರನ್ ಚ್ಚಿದರು. ನಾಯಕ ಶಿಖರ್ ಧವನ್ ಕೇವಲ 46 ರನ್​ನಿಂದ ಅರ್ಧಶತಕ ವಂಚಿತರಾದರು. ಸ್ಯಾಮ್ಸನ್ 27 ರನ್ ಗಳಿಸಿದರು. ಈ ಮೂವರ ಭರ್ಜರಿ ಬ್ಯಾಟಿಂಗ್ ಫಲವಾಗಿ ಭಾರತ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ, ಈ ಪಿಚ್​ನಲ್ಲಿ ಇದು ಸಾಧಾರಣ ಮೊತ್ತ ಎಂದು ಪರಿಗಣಿಸಲಾಗಿತ್ತಾದರೂ ಶ್ರೀಲಂಕಾ ಚೇಸಿಂಗ್​ನಲ್ಲಿ ಎಡವಿ ಪಂದ್ಯವನ್ನ ಕೈಚೆಲ್ಲಿದ್ದು ಹೌದು.

ಲಂಕಾ ಇನ್ನಿಂಗ್ಸ್​ನಲ್ಲಿ 4ನೇ ವಿಕೆಟ್​ಗೆ 40 ರನ್ ಬಂದಿದ್ದು ಬಿಟ್ಟರೆ ದೊಡ್ಡ ಜೊತೆಯಾಟ ಸಿಗಲಿಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋದ ಶ್ರೀಲಂಕಾ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಭಾರತದ ಸ್ಪಿನ್ನರ್​ಗಳಾದ ಯುಜವೇಂದ್ರ ಚಹಲ್, ವರುಣ್ ಚಕ್ರವರ್ತಿ ಮತ್ತು ಕೃಣಾಲ್ ಪಾಂಡ್ಯ ಅವರು ಲಂಕಾ ಬ್ಯಾಟುಗಾರರನ್ನ ಕಟ್ಟಿಹಾಕಿದರು. ವೇಗಿಗಳಾದ ಭುವನೇಶ್ವರ್ ಕುಮಾರ್, ದೀಪಕ್ ಚಹಾರ್ ಅವರು ವಿಕೆಟ್​ಗಳನ್ನ ಕಬಳಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಕೃಣಾಲ್ ಪಾಂಡ್ಯ, ಯುಜವೇಂದ್ರ ಚಹಲ್, ವರುಣ್ ಚಕ್ರವರ್ತಿ ಮತ್ತು ಹಾರ್ದಿಕ್ ಪಾಂಡ್ಯ ಈ ಎಲ್ಲಾ ಆರು ಬೌಲರ್​ಗಳೂ ವಿಕೆಟ್ ಗಳಿಸಿದ್ದು ವಿಶೇಷ. ಲಂಕಾ ಪರ ಚರಿತ್ ಅಸಲಂಕಾ ಮತ್ತು ಅವಿಷ್ಕಾ ಫರ್ನಾಂಡೋ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ಆರು ಬ್ಯಾಟ್ಸ್​ಮನ್​ಗಳು ಎರಡಂಕಿ ಸ್ಕೋರ್ ಮಾಡದೇ ಔಟಾಗಿದ್ದು ಲಂಕಾಗೆ ಮುಳುವಾಯಿತು. ಅಂತಿಮವಾಗಿ ಲಂಕಾ ತಂಡ 18.3 ಓವರ್​ನಲ್ಲಿ 126 ರನ್​ಗೆ ಆಲೌಟ್ ಅಯಿತು. ನಾಲ್ಕು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯ ಶ್ರೇಷ್ಠ ಗೌರವಕ್ಕೆ ಬಾಜನರಾದರು.

ಇದನ್ನೂ ಓದಿ: Olympics 2020 - ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಎಷ್ಟು ಪದಕ ಗೆಲ್ಲುತ್ತೆ ಭಾರತ?

ಭಾರತ ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0ಯಿಂದ ಮುನ್ನಡೆ ಪಡೆದುಕೊಂಡಿದೆ. ನಾಳೆ (ಜುಲೈ 27) ಮತ್ತು ಜುಲೈ 29 ರಂದು ಇನ್ನೆರಡು ಪಂದ್ಯಗಳು ನಡೆಯಲಿವೆ. ಈ ಟಿ20 ಸರಣಿಗೆ ಮುನ್ನ ನಡೆದ ಏಕದಿನ ಕ್ರಿಕೆಟ್ ಸರಣಿಯನ್ನ ಭಾರತ 2-1ರಿಂದ ಗೆದ್ದುಕೊಂಡಿತ್ತು. ಈಗ ಟಿ20 ಸರಣಿಯೂ ಭಾರತದ ಕೈವಶವಾಗುವ ಸಂಭವ ಕಾಣುತ್ತಿದೆ.

ಸ್ಕೋರು ವಿವರ:

ಭಾರತ 20 ಓವರ್ 164/5
(ಸೂರ್ಯಕುಮಾರ್ ಯಾದವ್ 50, ಶಿಖರ್ ಧವನ್ 46, ಸಂಜು ಸ್ಯಾಮ್ಸನ್ 27, ಇಶಾನ್ ಕಿಶನ್ ಅಜೇಯ 20 ರನ್ – ದುಶಮಂತ ಚಮೀರ 24/2, ವನಿಂಡು ಹಸರಂಗ 28/2)

ಶ್ರೀಲಂಕಾ 18.3 ಓವರ್ 126/10
(ಚರಿತ್ ಅಸಲಂಕಾ 44, ಅವಿಷ್ಕಾ ಫರ್ನಾಂಡೋ 26, ಮಿನೋದ್ ಭನುಕಾ 10 ರನ್ – ಭುವನೇಶ್ವರ್ ಕುಮಾರ್ 22/4, ದೀಪಕ್ ಚಹಾರ್ 24/2)
Published by:Vijayasarthy SN
First published: