ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ; ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಜಯ

IND vs NZ 1st T20I- ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಜೈಪುರದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 5 ವಿಕೆಟ್​ಗಳಿಂದ ಜಯಿಸಿದೆ.

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್

 • Share this:
  ಜೈಪುರ್, ನ. 17: ಟಿ20 ವಿಶ್ವಕಪ್​ನಲ್ಲಿ ಸೂಪರ್-12 ಹಂತದಿಂದಲೇ ಭಾರತ (India exit from T20 World Cup Super-12 Stage) ನಿರ್ಗಮಿಸಲು ಕಾರಣವಾಗಿದ್ದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೋಲುಗಳು. ಇದೀಗ ನ್ಯೂಜಿಲೆಂಡ್ (New Zealand) ವಿರುದ್ಧದ ಟಿ20 ವಿಶ್ವಕಪ್ ಸೋಲಿಗೆ ಟೀಮ್ ಇಂಡಿಯಾ (Indian Cricket Team) ಇವತ್ತು ಸೇಡು ತೀರಿಸಿಕೊಂಡಿತು. ಇಂದು ಕಿವೀಸ್ ಪಡೆ ವಿರುದ್ಧ ಆರಂಭವಾದ ಟಿ20 ಸರಣಿಯ ಮೊದಲ ಪಂದ್ಯವನ್ನು ಭಾರತ ರೋಚಕವಾಗಿ ಗೆದ್ದಿತು. ಈ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಗೆಲುವು ಸಾಧಿಸಿತು. ನ್ಯೂಜಿಲೆಂಡ್ ತಂಡದ 164 ರನ್ ಮೊತ್ತಕ್ಕೆ ಪ್ರತಿಯಾಗಿ ಭಾರತ 2 ಎಸೆತ ಇರುವಂತೆ ಚೇಸ್ ಮಾಡಿ ಗೆದ್ದಿತು. ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಆರ್ ಅಶ್ವಿನ್, ಬ್ಯಾಟಿಂಗ್​ನಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು.

  ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಓವರ್​ನಲ್ಲೇ ಡರಿಲ್ ಮಿಚೆಲ್ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಮಾರ್ಟಿನ್ ಗಪ್ಟಿಲ್ ಮತ್ತು ಮಾರ್ಕ್ ಚಾಪ್ಮನ್ 109 ರನ್ ಜೊತೆಯಾಟ ನೀಡಿದರು. ಇಬ್ಬರೂ ಅರ್ಧಶತಕ ಭಾರಿಸಿದರು. ಇವರು ಬಿಟ್ಟರೆ ಉಳಿದವರಿಂದ ಹೆಚ್ಚು ರನ್ ಹರಿದುಬರಲಿಲ್ಲ. ನ್ಯೂಜಿಲೆಂಡ್ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ಅನುಭವಿ ಬೌಲರ್​ಗಳಾದ ಭುವನೇಶ್ವರ್ ಕುಮಾರ್ ಮತ್ತು ಆರ್ ಅಶ್ವಿನ್ ಅವರಿಬ್ಬರು ಕಿವೀಸ್ ಬ್ಯಾಟುಗಾರರನ್ನ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.

  ಈ ಪಿಚ್​ನಲ್ಲಿ ಗೆಲ್ಲಲು 165 ರನ್ ಗುರಿ ಟೀಮ್ ಇಂಡಿಯಾಗೆ ಕಠಿಣ ಸವಾಲಾಗುವ ನಿರೀಕ್ಷೆ ಇರಲಿಲ್ಲ. ಅದರಂತೆ ಭಾರತದ ಚೇಸಿಂಗ್ ಭರ್ಜರಿಯಾಗಿ ಆರಂಭವಾಯಿತು. ರಾಹುಲ್ ಮತ್ತು ರೋಹಿತ್ ಮೊದಲ ವಿಕೆಟ್​​ಗೆ 50 ರನ್ ಸೇರಿಸಿ ಬುನಾದಿ ಹಾಕಿದರು. ಕೆಎಲ್ ರಾಹುಲ್ ನಿರ್ಗಮನದ ಬಳಿಕ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ 2ನೇ ವಿಕೆಟ್​ಗೆ 59 ರನ್ ಸೇರಿಸಿದರು. ರೋಹಿತ್ 2 ರನ್​ನಿಂದ ಅರ್ಧಶತಕ ತಪ್ಪಿಸಿಕೊಂಡರು.

  ಇದನ್ನೂ ಓದಿ: ND vs NZ- ಇನ್ಮುಂದೆ ಕೊಹ್ಲಿ ಪಾತ್ರ ಏನು? ಕ್ಯಾಪ್ಟನ್ಸಿ ಬಗ್ಗೆ 9 ವರ್ಷದ ಹಿಂದಿನ ರೋಹಿತ್ ಟ್ವೀಟ್ ವೈರಲ್

  ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್​ಗೆ ಬಂದಿದ್ದ ಸೂರ್ಯಕುಮಾರ್ ಅವರು ಅದೇ ಲಯದಲ್ಲಿ ಆಡಿದರು. 40 ಬಾಲ್​ನಲ್ಲಿ ಅವರು 62 ರನ್ ಗಳಿಸಿದರು. ಅವರ ಇನ್ನಿಂಗ್ಸಲ್ಲಿ 3 ಸಿಕ್ಸರ್ ಮ ತ್ತು 6 ಬೌಂಡರಿ ಒಳಗೊಂಡಿದ್ದವು. ಸೂರ್ಯಕುಮಾರ್ ಔಟಾದ ಬಳಿಕ ಟೀಮ್ ಇಂಡಿಯಾ ಓಟ ನಿಧಾನಗೊಂಡಿತು. ಗೆಲುವಿನ ಹಾದಿ ದುರ್ಗಮಗೊಳ್ಳುತ್ತಾ ಹೋಯಿತು. ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಮೇಟ್ಸ್ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ರನ್ ಗಳಿಸಲು ಪರದಾಡಿದರು. ಅಗತ್ಯ ರನ್ ರೇಟ್ ಹೆಚ್ಚುತ್ತಾ ಹೋಯಿತು. ಕೊನೆಯ ಓವರ್​ನಲ್ಲಿ 10 ರನ್ ಗಳಿಸುವ ಸ್ಥಿತಿಗೆ ಬಂತು.

  ಐಪಿಎಲ್​ನಲ್ಲಿ ಮಿಂಚಿದ್ದ ವೆಂಕಟೇಶ್ ಅಯ್ಯರ್ ಮೊದಲ ಬಾರಿಗೆ ಟೀಮ್ ಇಂಡಿಯಾ ದಿರಿಸಿನಲ್ಲಿ ಕಾಣಿಸಿಕೊಂಡು ಒಂದು ಫೋರ್ ಹೊಡೆದು ನಿರ್ಗಮಿಸಿದರು. ಆದರೆ, ಕೊನೆಯಲ್ಲಿ ರಿಷಭ್ ಪಂತ್ ಬೌಂಡರಿ ಭಾರಿಸಿ ಗೆಲುವಿನ ರನ್ ಹರಿಸಿದರು.

  ಇದನ್ನೂ ಓದಿ: David Warner| ನೀವು ಪ್ರೀತಿಸುವ ತಂಡದಿಂದ ಕಾರಣವೇ ಇಲ್ಲದೆ ಕೈಬಿಟ್ಟಾಗ ನೋವಾಗುತ್ತದೆ: SRH ಬಗ್ಗೆ ವಾರ್ನರ್ ಬೇಸರ!

   ಮುಂದಿನ ಪಂದ್ಯಗಳು:

  ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಎರಡು ದಿನಗಳ ಬಳಿಕ, ಅಂದರೆ ನ. 19ರಂದು ರಾಂಚಿಯಲ್ಲಿ ಎರಡನೇ ಪಂದ್ಯ ಇದೆ. ಅದಾದ ಬಳಿಕ ನ. 21ರಂದು ಕೋಲ್ಕತಾದ ಈಡನ್ ಗಾರ್ಡನ್ಸ್​ನಲ್ಲಿ ಮೂರನೇ ಟಿ20 ಪಂದ್ಯ ಇದೆ.

  ಸ್ಕೋರು ವಿವರ:

  ನ್ಯೂಜಿಲೆಂಡ್ 20 ಓವರ್ 164/6
  (ಮಾರ್ಟಿನ್ ಗಪ್ಟಿಲ್ 70, ಮಾರ್ಕ್ ಚಾಪ್ಮನ್ 63, ಟಿಮ್ ಸೀಫರ್ಟ್ 12 ರನ್ – ಆರ್ ಅಶ್ವಿನ್ 23/2, ಭುವನೇಶ್ವರ್ ಕುಮಾರ್ 24/2)

  ಭಾರತ 19.4 ಓವರ್ 166/5
  (ಸೂರ್ಯಕುಮಾರ್ ಯಾದವ್ 62, ರೋಹಿತ್ ಶರ್ಮಾ 48, ಕೆಎಲ್ ರಾಹುಲ್ 15, ರಿಷಭ್ ಪಂತ್ ಅಜೇಯ 17 ರನ್ – ಟ್ರೆಂಟ್ ಬೌಲ್ಟ್ 31/2)
  Published by:Vijayasarthy SN
  First published: