ಫೈನಲ್​ನಲ್ಲಿ 106ಕ್ಕೆ ಆಲೌಟ್ ಆದರೂ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ

50 ಓವರ್​ಗಳ ಪಂದ್ಯದಲ್ಲಿ ಭಾರತದ 106 ರನ್​ಗಳಿಗೆ ಪ್ರತಿಯಾಗಿ ಬಾಂಗ್ಲಾದೇಶ 101 ರನ್​ಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್ ಅಥರ್ವ ಅಂಕೋಲೇಕರ್ 5 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠರೆನಿಸಿದರು.

Vijayasarthy SN | news18
Updated:September 14, 2019, 6:28 PM IST
ಫೈನಲ್​ನಲ್ಲಿ 106ಕ್ಕೆ ಆಲೌಟ್ ಆದರೂ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ
ಕ್ರಿಕೆಟ್ ಪ್ರಾತಿನಿಧಿಕ ಚಿತ್ರ
  • News18
  • Last Updated: September 14, 2019, 6:28 PM IST
  • Share this:
ಕೊಲಂಬೋ(ಸೆ. 14): ಭಾರತದ 19 ವರ್ಷದೊಳಗಿನವರ ತಂಡವು ಏಷ್ಯಾ ಕಪ್ ಟೂರ್ನಿ ಗೆದ್ದುಕೊಂಡಿದೆ. ಅಲ್ಪ ಮೊತ್ತದ ರನ್ ಗಳಿಕೆ ಕಂಡ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತೀಯರು 5 ರನ್​ಗಳಿಂದ ಸೋಲಿಸಿದರು. ಭಾರತ ಅಂಡರ್-19 ತಂಡ ಗೆಲುವಿಗೆ ಒಡ್ಡಿದ 107 ರನ್​ಗಳ ಅಲ್ಪ ಮೊತ್ತದ ಸವಾಲಿಗೆ ಪ್ರತಿಯಾಗಿ ಬಾಂಗ್ಲಾದೇಶೀಯರ ಇನ್ನಿಂಗ್ಸ್ 101 ರನ್​ಗೆ ಮುಕ್ತಾಯ ಕಂಡಿತು. ಇಡೀ ಪಂದ್ಯದಲ್ಲಿ ಹರಿದುಬಂದದ್ದು ಕೇವಲ 207 ರನ್ ಮಾತ್ರ. ಈ ಪಂದ್ಯದಲ್ಲಿ ಬೌಲರ್​ಗಳೇ ಪಾರಮ್ಯ ಮೆರೆದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಕಿರಿಯರ ತಂಡ ನೀರಸ ಆರಂಭ ಪಡೆಯಿತು. 8 ರನ್ನಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ವಿಕೆಟ್​ಗೆ ನಾಯಕ ಧ್ರುವ್ ಜುರೆಲ್ ಮತ್ತು ಶಾಶ್ವತ್ ರಾವತ್ ಅವರು 45 ರನ್ ಜೊತೆಯಾಟ ಒದಗಿಸಿದರು. ರಾವತ್ ನಿರ್ಗಮನದ ಬಳಿಕ ತಂಡ ಮತ್ತೊಮ್ಮೆ ಪತನದ ಹಾದಿ ಹಿಡಿಯಿತು. ಬಳಿಕ ಚೇತರಿಸಿಕೊಳ್ಳಲಿಲ್ಲ. ಆಲ್​ರೌಂಡರ್ ಕರಣ್ ಲಾಲ್ ಅವರು 37 ರನ್ ಭಾರಿಸಿದ ಹೊರತಾಗಿಯೂ ಭಾರತದ ಜೂನಿಯರ್ಸ್ 33ನೇ ಓವರ್​ನಲ್ಲಿ 106 ರನ್​ಗೆ ಆಲೌಟ್ ಆಯಿತು. ಜುರೆಲ್, ರಾವತ್ ಮತ್ತು ಲಾಲ್ ಬಿಟ್ಟು ಉಳಿದ ಯಾವ ಬ್ಯಾಟುಗಾರರೂ ಎರಡಂಕಿ ಗಡಿ ದಾಟಲಿಲ್ಲ.

ಇದನ್ನೂ ಓದಿ: ಟಿ-20 ಕ್ರಿಕೆಟ್​ನಲ್ಲಿ ಪೊಲಾರ್ಡ್​​ ಪಡೆಯಿಂದ ನೂತನ ದಾಖಲೆ; 120 ಎಸೆತಗಳಲ್ಲಿ ಬಾರಿಸಿದ ರನ್ ಎಷ್ಟು ಗೊತ್ತಾ?

ಬಾಂಗ್ಲಾದೇಶದ ಸ್ಪಿನ್ನರ್ ಶಮೀಮ್ ಹೊಸೇನ್ 6 ಓವರ್ ಬೌಲ್ ಮಾಡಿ 8 ರನ್ನಿತ್ತು 3 ವಿಕೆಟ್ ಪಡೆದರು. ಭಾರತದ ಪ್ರಮುಖ ಬ್ಯಾಟುಗಾರರನ್ನು ಬಲಿ ತೆಗೆದುಕೊಂಡು ತಂಡಕ್ಕೆ ಚೊಚ್ಚಲ ಏಷ್ಯಾ ಕಪ್ ಮುತ್ತಿಕ್ಕುವ ಅವಕಾಶ ಜೀವಂತವಾಗಿರಿಸಿದರು.

ಭಾರತದ ಅಲ್ಪಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ಕೂಡ ಕಳಪೆ ಆರಂಭ ಪಡೆಯಿತು. 16 ರನ್ನಾಗುಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. 5 ಮತ್ತು 7 ನೇ ವಿಕೆಟ್​ಗೆ ಒಂದಷ್ಟು ಉತ್ತಮ ಜೊತೆಯಾಟ ಸಿಕ್ಕು ಚೇತರಿಸಿಕೊಂಡಿತು. ಒಂದು ಹಂತದಲ್ಲಿ 6 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದ್ದ ಬಾಂಗ್ಲಾದೇಶ ಪ್ರಯಾಸದ ಗೆಲುವು ಪಡೆಯುವ ನಿರೀಕ್ಷೆ ಇತ್ತು. ಆದರೆ, ಅವರ ಓಟಕ್ಕೆ ಮಳೆ ಅಡ್ಡಿಯಾಯಿತು. ಸ್ವಲ್ಪ ಹೊತ್ತು ಮಳೆಯಿಂದ ನಿಂತ ಆಟ ಪುನಾರಂಭಗೊಂಡಾಗ ಪಂದ್ಯಕ್ಕೆ ಮತ್ತೊಂದು ತಿರುವು ಸಿಕ್ಕಿತು. ಭಾರತದ ಸ್ಪಿನ್ನರ್ ಅಥರ್ವ ಅಂಕೋಲೇಕರ್ ಅವರ ಸ್ಪಿನ್ ಗಾರುಡಿಗೆ ಸಿಕ್ಕು ಬಾಂಗ್ಲಾ ಮರಿಹುಲಿಗಳು ತರಗೆಲೆಗಳಂತೆ ಉದುರಿ ಹೋದರು. ಪರಿಣಾಮ, ಬಾಂಗ್ಲಾ 101 ರನ್​ಗೆ ಸರ್ವಪತನಗೊಂಡಿತು. ಅಥರ್ವ ಅಂಕೋಲೇಕರ್ ಅವರು 28 ರನ್ನಿತ್ತು 5 ವಿಕೆಟ್ ಪಡೆದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಆಟದಿಂದಾಗಿ ಅಂಕೋಲೇಕರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೂ ಬಾಜನರಾದರು.

ಇದನ್ನೂ ಓದಿ: ಜೇಟ್ಲಿ ಕ್ರೀಡಾಂಗಣ ಮರು ನಾಮಕರಣ ವೇಳೆ ಕೊಹ್ಲಿ-ಅನುಷ್ಕಾ ಕಿಸ್ಸಿಂಗ್; ವಿಡಿಯೋ ವೈರಲ್!

ಸ್ಕೋರು ವಿವರ:ಭಾರತ ಅಂಡರ್-19 ತಂಡ 32.4 ಓವರ್ 106/10
(ಧ್ರುವ್ ಜುರೆಲ್ 33, ಶಾಶ್ವತ್ ರಾವತ್ 19, ಕರಣ್ ಲಾಲ್ 37 ರನ್ – ಶಮೀಮ್ ಹುಸೇನ್ 8/3, ಮೃತ್ಯುಂಜಯ್ ಚೌಧುರಿ 18/3)

ಬಾಂಗ್ಲಾದೇಶ ಅಂಡರ್-19 ತಂಡ 33 ಓವರ್ 101/10
(ಅಕ್ಬರ್ ಅಲಿ 23, ಮೃತ್ಯುಂಜಯ್ ಚೌಧುರಿ 21, ತಾಂಜಿಮ್ ಹಸನ್ ಶಕಿಬ್ 12, ರಾಕಿಬುಲ್ ಹಸನ್ ಅಜೇಯ 11 ರನ್ – ಅಥರ್ವ ಅಂಕೋಲೇಕರ್ 28/5, ಆಕಾಶ್ ಸಿಂಗ್ 12/3)

ಪಂದ್ಯಶ್ರೇಷ್ಠ: ಅಥರ್ವ ಅಂಕೋಲೇಕರ್

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 14, 2019, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading