T20 World Cup- ಇದು ರಿಯಲ್ ಟೀಮ್ ಇಂಡಿಯಾ; ಅಫ್ಘನ್ನರನ್ನ ಸದೆಬಡಿದ ಭಾರತಕ್ಕೆ ಚೊಚ್ಚಲ ಜಯ

T20 World Cup: IND vs AFG- ಟಿ20 ವಿಶ್ವಕಪ್​ನಲ್ಲಿ ಭಾರತಕ್ಕೆ ಮೊದಲ ಗೆಲುವಿನ ಸವಿ ಸಿಕ್ಕಿದೆ. ಅಫ್ಘಾನಿಸ್ತಾನ್ ವಿರುದ್ಧ ಗೆದ್ದ ಭಾರತ ಸೆಮಿಫೈನಲ್ ಸಾಧ್ಯತೆಯನ್ನ ಜೀವಂತವಾಗಿರಿಸಿಕೊಂಡಿದೆ. ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಜಯಭೇರಿ ಭಾರಿಸಿತು.

ಭಾರತ ತಂಡ

ಭಾರತ ತಂಡ

 • Share this:
  ಅಬುಧಾಬಿ, ನ. 03: ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಟೀಮ್ ಇಂಡಿಯಾ ದೀಪಾವಳಿ ಗಿಫ್ಟ್ ನೀಡಿದೆ (Deepavali gift for Indian Cricket Fans). ಟಿ20 ವಿಶ್ವಕಪ್​ನಲ್ಲಿ (T20 World Cup) ಸತತ ಎರಡು ಸೋಲುಗಳಿಂದ ನಿರಾಸೆ ಉಂಟು ಮಾಡಿದ್ದ ಕೊಹ್ಲಿ ಬಳಗ ಇಂದು ಚೊಚ್ಚಲ ಗೆಲುವಿನ ಸಂಭ್ರಮ ಕೊಟ್ಟಿತು. ಇಲ್ಲಿ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ 66 ರನ್​ಗಳಿಂದ ಜಯಭೇರಿ ಭಾರಿಸಿತು (India beat Afghanistan). ಇದರೊಂದಿಗೆ ಭಾರತ ಸೆಮಿಫೈನಲ್​ನ ಕಿರು ಸಾಧ್ಯತೆಯನ್ನ ಹಸಿರಾಗಿರಿಸಿಕೊಂಡಿದೆ. ಭಾರತದ ದಾಖಲೆಯ 210 ರನ್ ಮೊತ್ತವನ್ನು ಚೇಸ್ ಮಾಡಲಾಗದೇ ಅಫ್ಘಾನಿಸ್ತಾನ ಹೆಚ್ಚು ಪ್ರತಿರೋಧ ಇಲ್ಲದೇ ಸೋಲಪ್ಪಿತು. ಮೊಹಮ್ಮದ್ ನಬಿ ಮತ್ತು ಕರೀಮ್ ಜನತ್ ಕೊನೆಕೊನೆಯಲ್ಲಿ ಒಂದಷ್ಟು ಸ್ಫೋಟಕ ಆಟವಾಡಿದರಾದರೂ ಸವಾಲು ಬೃಹತ್ ಆಗಿದ್ದರಿಂದ ಗೆಲುವಿನ ಸನಿಹಕ್ಕೆ ಬರಲಾಗಲಿಲ್ಲ.

  ಆರ್ ಅಶ್ವಿನ್ ಶಕ್ತಿ: ಭಾರತ ಈ ಪಂದ್ಯದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಿತು. ನಿರೀಕ್ಷೆಯಂತೆ ವರುಣ್ ಚಕ್ರವರ್ತಿ ಬದಲು ಆರ್ ಅಶ್ವಿನ್ ಅವರನ್ನ ಆಡಿಸಲಾಯಿತು. ಇಶಾನ್ ಕಿಶನ್ ಬದಲು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ಕೊಡಲಾಯಿತು. ಇದರಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಬ್ಯಾಟಿಂಗ್ ಮಾಡುವ ಸಂದರ್ಭವೇ ಒದಗಿ ಬರಲಿಲ್ಲ.

  ಆರ್ ಅಶ್ವಿನ್ ತಮಗೆ ಕೊಟ್ಟಿದ್ದ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 4 ಓವರ್ ಬೌಲ್ ಮಾಡಿ ಕೇವಲ 14 ರನ್ನಿತ್ತು 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 32 ರನ್​ಗೆ 3 ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ತೋರ್ಪಡಿಸಿದರು.

  ಟಾಸ್ ಸೋತರೂ ಪಂದ್ಯ ಗೆದ್ದ ಕೊಹ್ಲಿ:

  ವಿರಾಟ್ ಕೊಹ್ಲಿ ಈ ಬಾರಿಯೂ ಟಾಸ್ ಸೋತರು. ಅಫ್ಘಾನಿಸ್ತಾನ್ ಫೀಲ್ಡಿಂಗ್ ಆಯ್ದುಕೊಂಡರು. ತಾನು ಟಾಸ್ ಗೆದ್ದಿದ್ದರೆ ಫೀಲ್ಡಿಂಗ್ ಅನ್ನೇ ಆಯ್ದುಕೊಳ್ಳುತ್ತಿದ್ದೆ ಎಂದ ಕೊಹ್ಲಿ, ಏನೇ ಆದರೂ ಈ ಪಂದ್ಯ ಗೆಲ್ಲುವ ಗುರಿ ಇದೆ ಎಂದು ಆರಂಭದಲ್ಲೇ ಸ್ಪಷ್ಟಪಡಿಸಿದರು.

  ವಿರಾಟ್ ಕೊಹ್ಲಿ ನಿರೀಕ್ಷಿಸಿದಂತೆ ಭಾರತ ತಂಡ ಭರ್ಜರಿ ಆರಂಭ ಪಡೆಯಿತು. ಮೇಲಿನ ಕ್ರಮಾಂಕದಲ್ಲಿ ಯಾವುದೇ ಪ್ರಯೋಗಕ್ಕೆ ಮುಂದಾಗದೇ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನ ಕಳುಹಿಸಿದ್ದು ವರ್ಕೌಟ್ ಆಯಿತು. ಇಬ್ಬರೂ ಮೊದಲ ವಿಕೆಟ್​ಗೆ ದಾಖಲೆಯ 140 ರನ್ ಜೊತೆಯಾಟ ಕೊಟ್ಟರು. ಇಬ್ಬರೂ ಅರ್ಧಶತಕ ಗಳಿಸಿದರು.

  ಇದನ್ನೂ ಓದಿ: Rahul Dravid- ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

  ಇಬ್ಬರೂ ಆರಂಭಿಕರು ಔಟಾದ ಬಳಿಕ ವಿರಾಟ್ ಕೊಹ್ಲಿಗಿಂತ ಮೊದಲು ಬಂದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಸಿಡಿಲಬ್ಬರದ ಬ್ಯಾಟಿಂಗ್ ಆಡಿ ಭಾರತದ ಸ್ಕೋರು 210 ರನ್ ಗಡಿ ಮುಟ್ಟಿಸಿದರು. ಈ ವಿಶ್ವಕಪ್​ನಲ್ಲಿ ಯಾವುದೇ ತಂಡ ಗಳಿಸಿದ ಗರಿಷ್ಠ ಸ್ಕೋರ್ ಇದಾಗಿದೆ.

  ರಷೀದ್ ಖಾನ್ ಆದಿಯಾಗಿ ಇಂದು ಬೌಲ್ ಮಾಡಿದ ಏಳು ಅಫ್ಘನ್ ಬೌಲರ್​ಗಳು ಭಾರತದ ಬ್ಯಾಟುಗಾರರ ಆರ್ಭಟ ತಡೆಯಲು ಸಾಧ್ಯವಾಗಲಿಲ್ಲ.

  ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್​ಗೆ ಜಯ:

  ಇಂದು ಬೆಳಗ್ಗೆ ನಡೆದ ಎರಡನೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 16 ರನ್​ಗಳಿಂದ ಗೆಲುವು ಸಾಧಿಸಿತು. ಸ್ಕಾಟ್​ಲೆಂಡ್ ತಂಡ ಸೋಲುವ ಮುನ್ನ ವೀರೋಚಿತ ಹೋರಾಟ ತೋರಿದ್ದು ವಿಶೇಷ. ಗೆಲ್ಲಲು ನ್ಯೂಜಿಲೆಂಡ್ ಒಡ್ಡಿದ 173 ರನ್ ಗುರಿಯನ್ನ ಬೆನ್ನತ್ತಿದ ಸ್ಕಾಟ್ಲೆಂಡ್​ನ ಇನಿಂಗ್ಸ್ 156 ರನ್​ಗೆ ಅಂತ್ಯಗೊಂಡಿತು. ಕೆಳ ಮಧ್ಯಮ ಕ್ರಮಾಂಕದ ಮೈಕೇಲ್ ಲೀಸ್ಕ್ 20 ಎಸೆತದಲ್ಲಿ ಅಜೇಯ 42 ರನ್ ಚಚ್ಚಿದರು.

  ನ್ಯೂಜಿಲೆಂಡ್​ನ ಇನ್ನಿಂಗ್ಸಲ್ಲಿ ಮಾರ್ಟಿನ್ ಗಪ್ಟಿಲ್ ಅವರ ಆಟ ಹೈಲೈಟ್ ಆಯಿತು. ಅವರು ಕೇವಲ 56 ಬಾಲ್​ನಲ್ಲಿ 93 ರನ್ ಗಳಿಸಿದರು. ಅವರ ಇನ್ನಿಂಗ್ಸಲ್ಲಿ 7 ಸಿಕ್ಸರ್ ಮತ್ತು 6 ಬೌಂಡರಿ ಒಳಗೊಂಡವು.

  ನ್ಯೂಜಿಲೆಂಡ್ ಈ ಗೆಲುವಿನೊಂದಿಗೆ ಸೆಮಿಫೈನಲ್ ಸಾಧ್ಯತೆಯನ್ನ ಹೆಚ್ಚಿಸಿಕೊಂಡಿತು. 3 ಪಂದ್ಯಗಳಿಂದ 4 ಅಂಕ ಗಳಿಸಿರುವ ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಅಫ್ಘಾನಿಸ್ತಾನ 4 ಪಂದ್ಯಗಳಿಂದ 4 ಅಂಕ ಗಳಿಸಿದೆ. ಸೆಮಿಫೈನಲ್ ರೇಸ್​ಗೆ ಈಗ ಭಾರತವೂ ಸೇರಿಕೊಂಡಿದೆ.

  ಇದನ್ನೂ ಓದಿ: T20 World Cup- ರವಿಶಾಸ್ತ್ರಿ 24 ಗಂಟೆ ನಶೆಯಲ್ಲೇ ಇರ್ತಾರೆ: ನಟ ಕೆಆರ್​ಕೆ ಗಂಭೀರ ಆರೋಪ

  ಸ್ಕೋರು ವಿವರ:

  ಭಾರತ 20 ಓವರ್ 210/2
  (ರೋಹಿತ್ ಶರ್ಮಾ 74, ಕೆಎಲ್ ರಾಹುಲ್ 69, ಹಾರ್ದಿಕ್ ಪಾಂಡ್ಯ ಅಜೇಯ 35, ರಿಷಭ್ ಪಂತ್ ಅಜೇಯ 27 ರನ್)

  ಅಫ್ಘಾನಿಸ್ತಾನ್ 20 ಓವರ್ 144/7
  (ರಹಮನುಲ್ಲಾ ಗುರ್ಬಜ್ 19, ಗುಲ್ಬದಿನ್ ನಯಿಬ್ 18, ಮೊಹಮ್ಮದ್ ನಬಿ 35, ಕರೀಮ್ ಜನತ್ ಅಜೇಯ 42 ರನ್- ಮೊಹಮ್ಮದ್ ಶಮಿ 32/3 ಆರ್ ಅಶ್ವಿನ್ 14/2)
  Published by:Vijayasarthy SN
  First published: