Virender Sehwag- ಏಕಾಂಗಿಯಾಗೇ ಪಾಕ್ ವಿರುದ್ಧ ಇವರು ಪಂದ್ಯ ಗೆಲ್ಲಿಸಬಲ್ಲರು ಎಂದ ಸೆಹ್ವಾಗ್

T20 World Cup, Ind vs Pak Match at Dubai: ಅವರು ಬೌಲಿಂಗ್ ಮಾಡದಿದ್ದರೂ ಸರಿ ಬ್ಯಾಟುಗಾರನಾಗಿ ತಂಡದಲ್ಲಿ ಇದ್ದರೆ ಒಳ್ಳೆಯದು ಎಂದು ಹಾರ್ದಿಕ್ ಪಾಂಡ್ಯ ಬಗ್ಗೆ ವಿರೇಂದರ್ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ವಿರೇಂದರ್ ಸೆಹ್ವಾಗ್

ವಿರೇಂದರ್ ಸೆಹ್ವಾಗ್

 • Share this:
  ದುಬೈ, ಅ. 24: ಟೀಮ್ ಇಂಡಿಯಾದ ಬಹುತೇಕ ಆಟಗಾರರು ವಿಶ್ವಕಪ್​ಗೆ ಮುನ್ನ ಒಳ್ಳೆಯ ಫಾರ್ಮ್​ಗೆ ಬಂದಿದ್ದಾರೆ. ಪ್ರಮುಖ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಅವರೊಬ್ಬರೇ ತುಸು ಲಯ ಕಳೆದುಕೊಂಡಂತಿರುವುದು. ಗಾಯದಿಂದ ಇನ್ನೂ ಅವರು ಪೂರ್ಣ ಚೇತರಿಸಿಕೊಂಡಂತಿಲ್ಲ. ಐಪಿಎಲ್​ನ ಕೊನೆಯ ಕೆಲ ಪಂದ್ಯಗಳಲ್ಲಿ ಅವರು ಆಡಿದರಾದರೂ ಬ್ಯಾಟಿಂಗ್​ನಲ್ಲಿ ಹೆಚ್ಚು ಯಶಸ್ಸು ಕಾಣಲಿಲ್ಲ. ಬೌಲಿಂಗ್ ಮಾಡಲು ಆಗಲೇ ಇಲ್ಲ. ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಹಾರ್ದಿಕ್ ಬೌಲಿಂಗ್ ಮಾಡಲಿಲ್ಲ. ನೆಟ್ ಪ್ರಾಕ್ಟೀಸ್​ನಲ್ಲೂ ಅವರು ಬೌಲಿಂಗ್ ಅಭ್ಯಾಸ ನಡೆಸಿದ್ದು ಕಂಡುಬರಲಿಲ್ಲ. ಬ್ಯಾಟಿಂಗ್​ನಲ್ಲಿ ಕೊಂಚ ಲಯ ಕಂಡುಕೊಂಡಂತೆ ಕಂಡುಬಂದರೂ ಮೊದಲಿನ ಹಾರ್ದಿಕ್ ಪಾಂಡ್ಯ ಎಂದು ತೋರುತ್ತಿಲ್ಲ. ಅವರು ತಂಡದಲ್ಲಿ ಆಡುತ್ತಾರಾ ಇಲ್ಲವಾ ಎಂಬುದು ಖಾತ್ರಿ ಇಲ್ಲ. ಇದೆಲ್ಲದರ ಹೊರತಾಗಿಯೂ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಹಾರ್ದಿಕ್ ಅವರನ್ನ ಆಡಿಸುವುದು ಒಳ್ಳೆಯದು ಎಂದು ವಿರೇಂದರ್ ಸೆಹ್ವಾಗ್ ಅಭಿಪ್ರಾಯಪಟ್ಟಿದ್ಧಾರೆ. ಹಾರ್ದಿಕ್ ನೆಟ್ ಪ್ರಾಕ್ಟೀಸ್​ನಲ್ಲಿ ಚೆನ್ನಾಗಿ ಆಡುತ್ತಿದ್ಧಾರೆಂದರೆ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದಿದ್ದಾರೆ.

  ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೂ ಪರವಾಗಿಲ್ಲ, ಅವರೊಬ್ಬ ಮ್ಯಾಚ್ ಟರ್ನ್ ಮಾಡಬಲ್ಲ ಸ್ಫೋಟಕ ಬ್ಯಾಟರ್. ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಬಲ್ಲರು ಎಂದು ಅವರು ಹೇಳಿದ್ದಾರೆ. “ನನ್ನ ತಂಡದಲ್ಲಿ ಅವರಿಗೆ ಸ್ಥಾನ ಕೊಡುತ್ತೇನೆ. ಅವರೆಂಥ ಬ್ಯಾಟರ್ ಎಂದರೆ ಅವರು ಲಯಕ್ಕೆ ಬಂದರೆ ಪಂದ್ಯ ಏಕಪಕ್ಷೀಯವಾಗಿ ಮುಗಿದುಹೋಗುತ್ತದೆ. ಅವರು ಬಹಳಷ್ಟು ಬಾರಿ ತಮ್ಮ ಸಾಮರ್ಥ್ಯವನ್ನ ನಿರೂಪಿಸಿದ್ದಾರೆ. ಅವರು ಬೌಲಿಂಗ್ ಮಾಡಲು ಫಿಟ್ ಆದರೆ ಇನ್ನೂ ಅಮೋಘವಾಗಿರುತ್ತದೆ” ಎಂದು ವಿರೇಂದರ್ ಸೆಹ್ವಾಗ್ ಹೇಳಿದ್ಧಾರೆ.

  ಐವರು ಮುಖ್ಯ ಬೌಲರ್​ಗಳನ್ನ ಕಣಕ್ಕಿಳಿಸಬೇಕು:

  ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಐವರು ಬೌಲರ್​ಗಳನ್ನ ಆಡಿಸಬೇಕು. ಟಾಪ್ ಆರ್ಡರ್​ನಲ್ಲಿರುವ ಬ್ಯಾಟುಗಾರರ ಪೈಕಿ ಹಾರ್ದಿಕ್ ಪಾಂಡ್ಯ ಅಥವಾ ಇನ್ಯಾರಾದರೊಬ್ಬರು ಬೌಲಿಂಗ್ ಮಾಡಿದರೆ ಇನ್ನೂ ಅನುಕೂಲ. ಆಗ ತಂಡದ ಸಮತೋಲನ ಸರಿಯಾಗಿರುತ್ತದೆ ಎಂದು ಸೆಹ್ವಾಗ್ ಸಲಹೆ ನೀಡಿದ್ಧಾರೆ.

  ಹಾರ್ದಿಕ್ ಪಾಂಡ್ಯಗೆ ಕೊಹ್ಲಿಯದೂ ಬೆಂಬಲ:

  ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ತಾನೆಂಥ ಬ್ಯಾಟರ್ ಎಂದು ನಿರೂಪಿಸಿದ್ಧಾರೆ. ಆ ಸ್ಥಾನದಲ್ಲಿ ಬೇರೆಯವರನ್ನ ಆಡಿಸಲು ಆಗದು. ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಗಮನಾರ್ಹವಾಗಿ ಸುಧಾರಣೆ ಆಗಿದೆ. ಅವರು ಆರನೇ ಕ್ರಮಾಂಕದಲ್ಲಿ ಆಡುತ್ತಾರೆ. ಒಂದೆರಡು ಓವರ್ ಬೌಲಿಂಗ್ ಕೂಡ ಮಾಡಬಹುದು ಎಂದು ವಿರಾಟ್ ಕೊಹ್ಲಿ ಹೇಳಿದ್ಧಾರೆ.

  ಇದನ್ನೂ ಓದಿ: Ind vs Pak match- ಭಾರತ ಮತ್ತು ಪಾಕಿಸ್ತಾನದ ಈ ಆರು ಆಟಗಾರರ ಮೇಲೆ ಎಲ್ಲರ ಕಣ್ಣು

  ಕುತೂಹಲವೆಂದರೆ ಹಾರ್ದಿಕ್ ಪಾಂಡ್ಯ ಆಡಿದರೂ ಅವರು ಬೌಲಿಂಗ್ ಮಾಡುತ್ತಾರಾ ಎಂಬುದು ಗೊತ್ತಿಲ್ಲ. ವಿರಾಟ್ ಕೊಹ್ಲಿ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ತಾವೇ ಖುದ್ದಾಗಿ ಬೌಲಿಂಗ್ ಮಾಡಿ ಅಚ್ಚರಿ ಹುಟ್ಟಿಸಿದರು. ಬಹುಶಃ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಹೋದ ಪಕ್ಷದಲ್ಲಿ ಮತ್ತೊಬ್ಬ ಪಾರ್ಟ್ ಟೈಮ್ ಬೌಲರ್ ಅನ್ನ ಬ್ಯಾಕಪ್ ಆಗಿ ಇರಲಿ ಎಂಬುದು ಉದ್ದೇಶ ಇರಬಹುದು.

  ಹಾರ್ದಿಕ್ ಪಾಂಡ್ಯ ಸಾಮಾನ್ಯವಾಗಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ. ಚೇಸಿಂಗ್ ವೇಳೆ ಅವರು ಕ್ರೀಸ್​ಗೆ ಬಂದಿದ್ದಾರೆ ಎಂದರೆ ಪಂದ್ಯ ಬಹಳ ಮಹತ್ವದ ಹಂತದಲ್ಲಿರುತ್ತದೆ, ಅಥವಾ ತಂಡ ಅಪಾಯದಲ್ಲಿರುತ್ತದೆ. ಇಂಥ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕೆಲವೇ ಓವರ್​ನಲ್ಲಿ ತಿರುವು ಕೊಡಬಲ್ಲರು. ಇನ್ನು, ಬೌಲಿಂಗ್​ನಲ್ಲೂ ಅವರು ಬಹಳಷ್ಟು ಬಾರಿ ಎದುರಾಳಿ ತಂಡದ ಜೊತೆಯಾಟವನ್ನ ಮುರಿಯುವುದರಲ್ಲಿ ನಿಸ್ಸೀಮರು. ಅವರು ಒಬ್ಬ ಬ್ಯಾಟರ್ ಮಾತ್ರವಾಗಿಯೇ ತಂಡಕ್ಕೆ ಸೇರಬಲ್ಲವರು ಹೌದು, ಹಾಗೆಯೇ ಬರೀ ಬೌಲರ್ ಆಗಿಯೇ ತಂಡಕ್ಕೆ ಸೇರಬಲ್ಲಂತಹವರು.

  ಇಂದು ಭಾರತ-ಪಾಕ್ ಪಂದ್ಯ:

  ಇಂದು ದುಬೈನಲ್ಲಿ ಸಂಜೆ 7:30ಕ್ಕೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ಆರಂಭವಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನ ವಾಹಿನಿಗಳಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ, ಡಿಜಿಟಲ್​ನಲ್ಲಿ ಹಾಟ್​ಸ್ಟಾರ್​ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

  ಟಿ20 ಆಗಲಿ, ಏಕದಿನ ಕ್ರಿಕೆಟ್ ಆಗಲಿ ಯಾವುದೇ ವಿಶ್ವಕಪ್​ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿಲ್ಲ. ಈ ಬಾರಿ ಬಾಬರ್ ಅಜಂ ನೇತೃತ್ವದಲ್ಲಿ ಪಾಕಿಸ್ತಾನ ತಂಡ ಪ್ರಬಲವಾಗಿ ಕಾಣುತ್ತಿದೆ. ಅದರ ಬೌಲಿಂಗ್ ಪಡೆ ಬಹಳ ಸಮರ್ಥವಾಗಿದೆ. ಇವತ್ತಿನ ಪಂದ್ಯದಲ್ಲಿ ಯಾವ ಫಲಿತಾಂಶವಾದರೂ ಅನಿರೀಕ್ಷಿತವಲ್ಲ.
  Published by:Vijayasarthy SN
  First published: