ದುಬೈ, ಅ. 24: ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ವಿರುದ್ಧ ಸತತ ಸೋಲುಗಳ ಸರಪಳಿಗಳಿಂದ ಪಾಕಿಸ್ತಾನ ಕೊನೆಗೂ ಬಿಡಿಸಿಕೊಳ್ಳಲು ಯಶಸ್ವಿಯಾಗಿದೆ. ಇಂದು ನಡೆದ ಸೂಪರ್-12 ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್ಗಳಿಂದ ಜಯಭೇರಿ ಭಾರಿಸಿತು. ಶಾಹೀನ್ ಅಫ್ರಿದಿ ಅವರ ಮಾರಕ ಬೌಲಿಂಗ್ ಹಾಗೂ ಬಾಬರ್ ಮತ್ತು ರಿಜ್ವಾನ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಪಾಕಿಸ್ತಾನ ನಿರೀಕ್ಷೆಮೀರಿ ಸುಲಭ ಗೆಲುವು ಸಂಪಾದಿಸಿತು. ಭಾರತದ 151 ರನ್ ಮೊತ್ತವನ್ನು ಪಾಕಿಸ್ತಾನ ಇನ್ನೂ 13 ಎಸೆತ ಬಾಕಿ ಇರುವಂತೆ ಚೇಸ್ ಮಾಡಿತು.
ಆರಂಭಿಕ ಬ್ಯಾಟುಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಎಲ್ಲಿಯೂ ಎಡವದೇ ತಂಡವನ್ನ ಗೆಲುವಿನತ್ತ ಕೊಂಡೊಯ್ದರು. ಇಬ್ಬರೂ ಸಮಾನ ವೇಗದಲ್ಲಿ ಇನ್ನಿಂಗ್ಸ್ ಕಟ್ಟಿದರು. ಪಾಕಿಸ್ತಾನದ ಒಂದೂ ವಿಕೆಟ್ ಪಡೆಯಲಾಗದೆ ಭಾರತದ ಬೌಲರ್ಗಳು ಹತಾಶೆಗೊಂಡರು.
ಭಾರತದ ಬ್ಯಾಟಿಂಗ್ ವೈಫಲ್ಯ:
ಇದಕ್ಕೆ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಓವರ್ನಲ್ಲೇ ಆಘಾತ ಅನುಭವಿಸಿತು. ಶಾಹೀನ್ ಅಫ್ರಿದಿ ಅವರು ತಮ್ಮ ಮೊದಲ ಓವರ್ನಲ್ಲೇ ರೋಹಿತ್ ಶರ್ಮಾ ಅವರನ್ನ ಔಟ್ ಮಾಡಿದರು. ಅಫ್ರಿದಿ ತಮ್ಮ ಎರಡನೇ ಓವರ್ನಲ್ಲಿ ಕೆಎಲ್ ರಾಹುಲ್ ಅವರನ್ನೂ ಔಟ್ ಮಾಡಿದರು. ನಂತರ ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚು ರನ್ ಗಳಿಸದೇ ಪೆವಿಲಿಯನ್ಗೆ ಮರಳಿದರು.
31 ರನ್ಗೆ 3 ವಿಕೆಟ್ ಬಿದ್ದು ಭಾರತ ಸಂಕಷ್ಟದಲ್ಲಿದ್ಧಾಗ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ 53 ರನ್ಗಳ ಜೊತೆಯಾಟ ನೀಡಿದರು. ಪಂತ್ ಔಟಾದ ಬಳಿಕ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 41 ರನ್ ಜೊತೆಯಾ ಆಡಿದರು. ಆಗ ಟೀಮ್ ಇಂಡಿಯಾಗೆ ಒಂದಷ್ಟು ಸಮಾಧಾನಕರ ಮೊತ್ತ ಸಿಗುವ ಭರವಸೆ ಮೂಡಿತು.
ಕೊಹ್ಲಿ ಮಾತ್ರ ದಿಟ್ಟ ಬ್ಯಾಟಿಂಗ್:
ಭಾರತದ ಇನ್ನಿಂಗ್ಸಲ್ಲಿ ವಿರಾಟ್ ಕೊಹ್ಲಿ ಅವರೊಬ್ಬರೇ ದಿಟ್ಟವಾಗಿ ಪಾಕ್ ಬೌಲಿಂಗ್ ದಾಳಿಯನ್ನ ಎದುರಿಸಿದ್ದು. ರಿಷಭ್ ಪಂತ್ ಕೆಲವಷ್ಟು ಜೀವದಾನಗಳನ್ನ ಪಡೆದರೂ ಬಿಡುಬೀಸಾಗಿ ಬ್ಯಾಟ್ ಬೀಸಿ ರನ್ ಗಳಿಸುವಲ್ಲಿ ಯಶಸ್ವಿಯಾದರು. ಸೂರ್ಯಕುಮಾರ್ ಯಾದವ್ ಉತ್ತಮ ಲಯದಲ್ಲಿದ್ದಂತಿದ್ದರೂ ದುರದೃಷ್ಟವಶಾತ್ ಬೇಗನೇ ಔಟಾಗಿಬಿಟ್ಟರು. 19ನೇ ಓವರ್ನಲ್ಲಿ ವಿರಾಟ್ ಕೊಹ್ಲಿಯೂ ಔಟಾದರು. ಶಾಹೀನ್ ಅಫ್ರಿದಿ ಅವರು ತಮ್ಮ ಕೊನೆಯ ಓವರ್ನಲ್ಲಿ ಕೊಹ್ಲಿಯನ್ನ ಬಲಿತೆಗೆದುಕೊಂಡರು.
ಇದನ್ನೂ ಓದಿ: Shaheen Afridi- ಶಾಹೀನ್ ಮೊದಲ ಓವರ್ ತಂಬಾ ಡೇಂಜರ್ ಎಂದು ಇವರಂದದ್ದು ನಿಜ ಆಯ್ತು
ಅಫ್ರಿದಿ ಆಸೆ ಈಡೇರಿತು:
ಕುತೂಹಲವೆಂದರೆ, ಈ ಪಂದ್ಯಕ್ಕೆ ಮುನ್ನ ಶಾಹೀನ್ ಅಫ್ರಿದಿ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾನು ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಮೂವರ ವಿಕೆಟ್ ಪಡೆಯಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು. ಈ ಮೂವರು ಶ್ರೇಷ್ಠ ಕ್ರಿಕೆಟಿಗರ ವಿಕೆಟ್ ಪಡೆಯುವುದು ನನ್ನ ಆಸೆ. ಅವರಲ್ಲಿ ಒಬ್ಬರನ್ನಾದರೂ ಔಟ್ ಮಾಡುವ ಬಯಕೆ ಇದೆ ಎಂದು ಹೇಳಿದ್ದರು. ಅಂತಿಮವಾಗಿ ಈ ಮೂವರನ್ನೂ ಅವರು ಬಲಿತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಮುಂದಿನ ಪಂದ್ಯಗಳು:
ಟಿ20 ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸಾಧಿಸಿದ ಅತಿ ದೊಡ್ಡ ಗೆಲುವು ಇದಾಗಿದೆ. ಪಾಕಿಸ್ತಾನ್ ತನ್ನ ಮುಂದಿನ ಪಂದ್ಯವನ್ನ ಅ. 26ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಇದೇ ನ್ಯೂಜಿಲೆಂಡ್ ವಿರುದ್ಧ ಅ. 31ರಂದು ಆಡಲಿದೆ. ಅಲ್ಲಿಯವರೆಗೆ ಭಾರತಕ್ಕೆ 6 ದಿನಗಳ ದೊಡ್ಡ ವಿರಾಮ ಭಾಗ್ಯ ಇದೆ.
ತಂಡಗಳು:
ಭಾರತ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ ತಂಡ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಅಸಿಫ್ ಅಲಿ, ಶದಾಬ್ ಖಾನ್, ಇಮದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ.
ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ
ಸ್ಕೋರು ವಿವರ:
ಭಾರತ 20 ಓವರ್ 151/7
(ವಿರಾಟ್ ಕೊಹ್ಲಿ 57, ರಿಷಭ್ ಪಂತ್ 39 ರನ್ – ಶಾಹೀನ್ ಅಫ್ರಿದಿ 31/3, ಹಸನ್ ಅಲಿ 44/2)
ಪಾಕಿಸ್ತಾನ 17.5 ಓವರ್ 152/0
(ಮೊಹಮ್ಮದ್ ರಿಜ್ವಾನ್ ಅಜೇಯ 79, ಬಾಬರ್ ಅಜಂ ಅಜೇಯ 68 ರನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ