ವಿಶ್ವಕಪ್ ಪಂದ್ಯಾವಳಿಯ ವೀಕ್ಷಕ ವಿವರಣೆಗಾರರಾಗಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ವಿಕೆಟ್ ಕೀಪರ್ ಎಂಎಸ್ ಧೋನಿ ಹಾಗೂ ಆಲ್ರೌಂಡರ್ ಜಡೇಜಾ ಅವರನ್ನು ತೆಗಳಿ ವಿವಾದಕ್ಕೀಡಾಗಿದ್ದರು. ಸೆಮಿ ಫೈನಲ್ನಲ್ಲಿ ಜಡೇಜಾ ಪ್ರದರ್ಶನ ನೋಡಿ ಅವರು ದಂಗು ಬಡಿದಿದ್ದಾರೆ. ಜಡೇಜಾ ಅವರನ್ನು ಸಂಜಯ್ ಹೊಗಳಿದ್ದಾರೆ ಕೂಡ. ಇದಕ್ಕೆ ಅವರನ್ನು ಸಖತ್ ಟ್ರೋಲ್ ಮಾಡಲಾಗಿದೆ.
ಜಡೇಜಾ ಆಟದ ಬಗ್ಗೆ ನೇರವಾಗಿ ವ್ಯಂಗ್ಯವಾಡಿದ್ದ ಸಂಜಯ್, “ನಾನು ಸಣ್ಣ ಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಬೌಲರ್ ಆಗಿ ಜಡೇಜ ಸೂಕ್ತ. ನಾನು ತಂಡದಲ್ಲಿ ಸ್ಪಿನ್ನರ್ಗಳಿಗಿಂತ ಬ್ಯಾಟ್ಸ್ಮನ್ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ, ಎಂದಿದ್ದರು.
ಇದಕ್ಕೆ ಉತ್ತರಿಸಿದ್ದ ಜಡೇಜಾ, “ನೀವು ಆಡಿದ ಪಂದ್ಯಗಳಿಗಿಂತ ಎರಡಪಟ್ಟು ಹೆಚ್ಚು ಮ್ಯಾಚ್ಗಳನ್ನು ನಾನು ಆಡಿದ್ದೇನೆ. ಬೇರೆಯವರ ಪರಿಶ್ರಮ, ಪ್ರತಿಭೆ ಮತ್ತು ಸಾಧನೆಯನ್ನು ಗೌರವಿಸುವುದು ಕಲಿತುಕೊಳ್ಳಿ. ನಿಮ್ಮ ಶಬ್ಧಭೇದಿಯನ್ನು ಕೇಳಿ ಸಾಕಾಗಿದೆ,” ಎಂದು ಖಾರವಾಗಿ ಟ್ವೀಟರ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: 4ನೇ ಬಾರಿ ಫೈನಲ್ಗೇರುವ ಟೀಂ ಇಂಡಿಯಾ ಕನಸು ಭಗ್ನ
ಸೆಮಿ ಫೈನಲ್ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಜಡೇಜಾ ಪ್ರದರ್ಶನ ನೀಡಿದ್ದರು. ಬೌಲಿಂಗ್ನಲ್ಲಿ ಒಂದು ವಿಕೆಟ್ ತೆಗೆದಿದ್ದಲ್ಲದೇ, ಕೊಹ್ಲಿ ಪಡೆ ಸೋಲುವ ಹಂತದಲ್ಲಿದ್ದಾಗ ಅದ್ಭುತವಾಗಿ ಬ್ಯಾಟ್ ಬೀಸಿ ಭಾರತೀಯರಲ್ಲಿ ಒಂದು ಹೊಸ ಉತ್ಸಾಹ ಮೂಡಿಸಿದ್ದರು. ಜಡೇಜಾ ಇದ್ದರೆ ಟೀಂ ಇಂಡಿಯಾ ಗೆದ್ದು ಬಿಡುತ್ತದೇ ಎಂದು ಅನೇಕರು ಭಾವಿಸಿದ್ದರು. ಆದರೆ ಜಡೇಜಾ 77 ರನ್ ಬಾರಿಸಿ ಔಟ್ ಆಗಿದ್ದರು.
ಭಾರತ ತಂಡ ಸೋತ ಹೊರತಾಗಿಯೂ ಇಡೀ ದೇಶ ಜಡೇಜಾ ಅವರನ್ನು ಕೊಂಡಾಡಿದೆ. ಈ ಮೊದಲಿನಿಂದಲೂ ಟೀಕೀಸುತ್ತಲೇ ಬರುತ್ತಿದ್ದ ಸಂಜಯ್ ಕೂಡ ಜಡೇಜಾ ಅವರನ್ನು ಹೊಗಳಿದ್ದಾರೆ. “ಜಡೇಜಾ ತುಂಬಾನೇ ಉತ್ತಮವಾಗಿ ಆಟವಾಡಿದ್ದೀರಿ,” ಎಂದು ಕಣ್ಣು ಮಿಟುಕಿಸುವ ಸ್ಮೈಲಿ ಹಾಕಿದ್ದಾರೆ.
Well played Jadeja! 😉
— Sanjay Manjrekar (@sanjaymanjrekar) July 10, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ