HOME » NEWS » Sports » CRICKET IND VS ENG 3RD TEST DAY 1 LIVE SCORE ROHIT SHARMAS UNBEATEN FIFTY TAKES INDIA TO 99 AT STUMPS ZP

IND vs ENG, 3rd Test: ಅಕ್ಷರ್-ರೋಹಿತ್ ಮಿಂಚಿಂಗ್: ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೇಲುಗೈ

ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆಯುವುದರೊಂದಿಗೆ ಅಕ್ಷರ್ ಪಟೇಲ್ 2ನೇ ಟೆಸ್ಟ್​​ನಲ್ಲೂ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಚೆನ್ನೈ ಟೆಸ್ಟ್​ನಲ್ಲಿ ಪಾದರ್ಪಣೆ ಮಾಡಿದ್ದ ಅಕ್ಷರ್ ಇನಿಂಗ್ಸ್​ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದರು.

news18-kannada
Updated:February 24, 2021, 10:19 PM IST
IND vs ENG, 3rd Test: ಅಕ್ಷರ್-ರೋಹಿತ್ ಮಿಂಚಿಂಗ್: ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೇಲುಗೈ
Rohit Sharma
  • Share this:
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದೆ. ಮಧ್ಯಾಹ್ನ 2.30 ರಿಂದ ಶುರುವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ಸ್ಪಿನ್ನರ್​ಗಳ ಮೋಡಿಗೆ ತತ್ತರಿಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 112 ರನ್​ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 99 ರನ್​ಗಳಿಸಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್​​ಗೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರುಗಳು ಯಶಸ್ವಿಯಾದರು. ಓಪನಿಂಗ್ ಬ್ಯಾಟ್ಸ್​ಮನ್ ಸಿಬ್ಲಿಯನ್ನು(0)ಯನ್ನು 3ನೇ ಓವರ್​ನಲ್ಲಿ ಔಟ್ ಮಾಡಿ ಇಶಾಂತ್ ಶರ್ಮಾ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜಾನಿ ಬೈರ್​ಸ್ಟೋ ಅವರನ್ನೂ ಸಹ ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಜೋ ರೂಟ್, ಆರಂಭಿಕ ಝಾಕ್ ಕ್ರಾಲಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು.

ಆದರೆ ತಂಡದ ಮೊತ್ತ 74 ರನ್​ಗಳಾಗಿದ್ದ ವೇಳೆ ದಾಳಿಗಿಳಿದ ಅಶ್ವಿನ್ ರೂಟ್ (17) ಅವರ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಅರ್ಧಶತಕ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕ್ರಾಲಿ (53) ವಿಕೆಟ್ ಪಡೆದು ಅಕ್ಷರ್ ಪಟೇಲ್ ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.

ಇದರ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಒಲಿ ಪೋಪ್ (1) ಹಾಗೂ ಬೆನ್ ಸ್ಟೋಕ್ಸ್​ (6) ವಿಕೆಟ್​ಗಳನ್ನು ಉರುಳಿಸಿದ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಇಡೀ ಪಂದ್ಯವನ್ನು ತೆಕ್ಕೆಗೆ ತೆಗೆದುಕೊಂಡರು. ಆ ಬಳಿಕ ಬಂದ ಯಾವುದೇ ಬ್ಯಾಟ್ಸ್​ಮನ್​ಗಳನ್ನು ನೆಲೆಯೂರಲು ಬಿಡದ ಟೀಮ್ ಇಂಡಿಯಾ ಸ್ಪಿನ್ನರ್​ಗಳು ತಂಡದ ಮೊತ್ತ 100ರ ಗಡಿದಾಟುವಷ್ಟರಲ್ಲಿ 8 ವಿಕೆಟ್ ಉರುಳಿಸಿದರು.

ಇನ್ನು ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆಯುವುದರೊಂದಿಗೆ ಅಕ್ಷರ್ ಪಟೇಲ್ 2ನೇ ಟೆಸ್ಟ್​​ನಲ್ಲೂ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಚೆನ್ನೈ ಟೆಸ್ಟ್​ನಲ್ಲಿ ಪಾದರ್ಪಣೆ ಮಾಡಿದ್ದ ಅಕ್ಷರ್ ಇನಿಂಗ್ಸ್​ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೊನೆಯ ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಒಟ್ಟು 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 112 ರನ್​ಗಳಿಗೆ ಸರ್ಪಪತನ ಕಂಡಿತು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 6 ವಿಕೆಟ್ ಕಬಳಿಸಿ ಮಿಂಚಿದರೆ, ರವಿಚಂದ್ರನ್ ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಇನ್ನು ಮೊದಲ ದಿನದ ಮೂರನೇ ಸೇಷನ್​ನಲ್ಲಿ ಪ್ರಥಮ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ-ಶುಭ್​ಮನ್ ಗಿಲ್ ಮೊದಲ ವಿಕೆಟ್​ಗೆ 33 ರನ್​ ಕಲೆಹಾಕಿದರು. ಈ ವೇಳೆ ಜೋಫ್ರಾ ಆರ್ಚರ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಗಿಲ್ (11) ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (0) ಅವರನ್ನು ಎಲ್​ಬಿಡಬ್ಲ್ಯೂಗೆ ಬೀಳಿಸಿದ ಲೀಚ್ ಟೀಮ್ ಇಂಡಿಯಾಗೆ ಶಾಕ್ ನೀಡಿದರು.
ಈ ಹಂತದಲ್ಲಿ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ರೋಹಿತ್ ಶರ್ಮಾ ಹಾಫ್​ ಸೆಂಚುರಿಸಿ ಸಿಡಿಸಿದರು. ಇನ್ನು ದಿನದಾಟದ ಅಂತಿಮ ಓವರ್​ನಲ್ಲಿ ವಿರಾಟ್ ಕೊಹ್ಲಿ (27) ಜ್ಯಾಕ್ ಲೀಚ್​ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಮೊದಲ ದಿನಾಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 99 ರನ್​ಗಳಿಸಿದೆ. ಇಂಗ್ಲೆಂಡ್​ ಪರ ಜ್ಯಾಕ್ ಲೀಚ್ 2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್​ 1 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಆಕರ್ಷಕ ಅರ್ಧಶತಕ ಬಾರಿಸಿರುವ ರೋಹಿತ್ ಶರ್ಮಾ (57) ಹಾಗೂ ಅಜಿಂಕ್ಯ ರಹಾನೆ (1) ಕ್ರೀಸ್​ನಲ್ಲಿದ್ದಾರೆ.
Published by: zahir
First published: February 24, 2021, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories