IND vs AUS; ರಾಹುಲ್ ದ್ರಾವಿಡ್ರನ್ನು ಆಸ್ಟ್ರೇಲಿಯಾಗೆ ಕಳಿಸಿ; ಮಾಜಿ ಆಟಗಾರ ವೆಂಗ್ ಸರ್ಕಾರ್ ಒತ್ತಾಯ
ರಾಹುಲ್ ದ್ರಾವಿಡ್ ಅಂತಹ ವ್ಯಕ್ತಿಯನ್ನು ರಾಷ್ಟ್ರೀಯ ತಂಡದೊಂದಿಗೆ ಹೆಚ್ಚು ತೊಡಗಿಸಿಕೊಳ್ಳಬೇಕಾದ ಸಮಯವಿದು. ಇಂತಹ ಅವಕಾಶವನ್ನು ಬಿಸಿಸಿಐ ಬಳಸಿಕೊಳ್ಳಬೇಕು ಎಂದು 1983 ವಿಶ್ವಕಪ್ ವಿಜೇತ ತಂಡದ ಮಾಜಿ ಆಟಗಾರ ವೆಂಗ್ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡ ಈವರೆಗೆ ಆ ಮಟ್ಟದ ಕಳಪೆ ಪ್ರದರ್ಶನ ನೀಡಇದ ಇತಿಹಾಸವೇ ಇಲ್ಲ. ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಸಾಧಾರಣವಾಗಿಯೇ ಬ್ಯಾಟ್ ಮಾಡಿದ್ದರೂ ಸಹ ಭಾರತದ ಬೌಲರ್ಗಳು ಕಾಂಗರೂ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದ್ದರು. ಪರಿಣಾಮ ಭಾರತದಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮುನ್ನಡೆ ಲಭ್ಯವಾಗಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕಂಡದ್ದು ಮಾತ್ರ ನಾಟಕೀಯ ಬೆಳವಣಿಗೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಯಾವೊಬ್ಬ ಬ್ಯಾಟ್ಸ್ಮನ್ ಸಹ ಎರಡಂಕಿ ಸ್ಕೋರ್ ದಾಟಲಿಲ್ಲ. ಪರಿಣಾಮ ಭಾರತ ಕೇವಲ 36/9 ರನ್ಗಳಿಗೆ ಆಟ ಮುಗಿಸಿ 8 ವಿಕೆಟ್ಗಳ ಹೀನಾಯ ಸೋಲನುಭವಿಸಿತು. ಈ ಪಂದ್ಯದಲ್ಲಿ ಆಫ್ಸ್ಟಂಪ್ನಿಂದ ಹೊರಗೆ ಹೋಗುವ ವೇಗಿಗಳ ಸ್ವಿಂಗ್ ಎಸೆತಗಳನ್ನು ಎದುರಿಸುವಲ್ಲಿ ಭಾರತದ ಬ್ಯಾಟ್ಸ್ಮನ್ಗಳ ಪರಿಣಿತಿ ಏನು? ಎಂಬುದು ಇದೀಗ ಜಗಜ್ಜಾಹೀರಾಗಿದೆ. ಹೀಗಾಗಿ ಉಳಿದ ಮೂರು ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್ಮನ್ಗಳಿಗೆ ಸಲಹೆ ನೀಡುವ ಸಲುವಾಗಿ ಮಾಜಿ ನಾಯಕ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ಆಸ್ಟ್ರೇಲಿಯಾಗೆ ಕಳುಹಿಸಬೇಕು ಎಂಬ ಒತ್ತಾಯ ಎಲ್ಲೆಡೆಯಿಂದ ಕೇಳಿಬರುತ್ತಿದೆ.
ಟೈಮ್ಸ್ ಆಫ್ ಇಂಡಿಯಾದ ವಿಶೇಷ ಚಾಟ್ನಲ್ಲಿ ಈ ಕುರಿತು ಒತ್ತಾಯಿಸಿರುವ ಮಾಜಿ ಕ್ರಿಕೆಟ್ ಆಟಗಾರ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ವೆಂಗ್ ಸರ್ಕಾರ್, "ಭಾರತದ ಬ್ಯಾಟ್ಸ್ಮನ್ಗಳು ಆಸ್ಟ್ರೇಲಿಯಾ ನೆಲದಲ್ಲಿ ವೇಗಿಗಳನ್ನು ಎದುರಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ನಂತಹ ಪರಿಣತ ಟೆಸ್ಟ್ ಆಟಗಾರ ಭಾರತ ತಂಡದ ಜೊತೆಗೆ ಇರುವುದು ಒಳ್ಳೆಯದು. ಅವರ ಅನುಭವ ಈಗಿನ ಯುವ ಬ್ಯಾಟ್ಸ್ಮನ್ಗಳಿಗೆ ಸಹಕಾರಿಯಾಗುತ್ತದೆ.
ಇದೇ ಸಂದರ್ಭದಲ್ಲಿ ಕೊರೋನಾ ವೈರಸ್ ಕಾರಣದಿಂದಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಮುಚ್ಚಲಾಗಿರುವುದರಿಂದ ಕೂಡಲೇ ರಾಹುಲ್ ದ್ರಾವಿಡ್ ಅವರನ್ನು ಆಸ್ಟ್ರೇಲಿಯಾಗೆ ಕಳುಹಿಸುವುದು ಸೂಕ್ತ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, "ಆಫ್ ಸ್ಟಂಪ್ನಿಂದ ಸ್ವಿಂಗ್ ಆಗಿ ಹೊರಗೆ ಹೋಗುವ ಚೆಂಡುಗಳನ್ನು ಹೇಗೆ ಎದುರಿಸಬೇಕು ಎಂದು ಬ್ಯಾಟ್ಸ್ಮನ್ಗಳಿಗೆ ಮಾರ್ಗದರ್ಶನ ನೀಡಲು ರಾಹುಲ್ ದ್ರಾವಿಡ್ ಅವರಿಗಿಂತ ಉತ್ತಮ ವ್ಯಕ್ತಿ ಯಾರೂ ಇಲ್ಲ. ಅವರ ಉಪಸ್ಥಿತಿ ನೆಟ್ಸ್ನಲ್ಲಿ ಭಾರತೀಯ ತಂಡಕ್ಕೆ ದೊಡ್ಡ ಉತ್ತೇಜನ ನೀಡುತ್ತದೆ. ಹೀಗಾಗಿ ಭಾರತ ತಂಡದ ಸಹಾಯಕ್ಕೆ ರಾಹುಲ್ ದ್ರಾವಿಡ್ ಕೂಡಲೇ ಧಾವಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಪಿತೃತ್ವ ರಜೆಗಾಗಿ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಮುಂದಿನ ಮೂರು ಟೆಸ್ಟ್ಗಳನ್ನು ಅವರ ಅನುಪಸ್ಥಿತಿಯಲ್ಲೇ ಭಾರತ ಆಡಬೇಕಿದೆ. ಇನ್ನೂ ರೋಹಿತ್ ಶರ್ಮಾ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಮೂರನೇ ಪಂದ್ಯಕ್ಕೆ ಮಾತ್ರ ಲಭ್ಯರಾಗಲಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನೂ ಈಗಲೇ ಆಸ್ಟ್ರೇಲಿಯಾಗೆ ಕಳುಹಿಸಿದರೆ ಮೂರನೇ ಟೆಸ್ಟ್ ವೇಳೆಗೆ ಅವರೂ ತಂಡದ ಭಾಗವಾಗುವ ಸಾಧ್ಯತೆ ಇದೆ.
ರಾಹುಲ್ ದ್ರಾವಿಡ್ ಅಂತಹ ವ್ಯಕ್ತಿಯನ್ನು ರಾಷ್ಟ್ರೀಯ ತಂಡದೊಂದಿಗೆ ಹೆಚ್ಚು ತೊಡಗಿಸಿಕೊಳ್ಳಬೇಕಾದ ಸಮಯವಿದು. ಇಂತಹ ಅವಕಾಶವನ್ನು ಬಿಸಿಸಿಐ ಬಳಸಿಕೊಳ್ಳಬೇಕು" ಎಂದು 1983 ವಿಶ್ವಕಪ್ ವಿಜೇತ ತಂಡದ ಮಾಜಿ ಆಟಗಾರ ವೆಂಗ್ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ