ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 3ನೇ ಏಕದಿನ ಪಂದ್ಯವು ಬುಧವಾರ ನಡೆಯಲಿದೆ. ಆದರೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕಣಕ್ಕಿಳಿಯುವುದಿಲ್ಲ. 2ನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ವಾರ್ನರ್ ಕೊನೆಯ ಏಕದಿನ ಹಾಗೂ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮತ್ತೋರ್ವ ಆರಂಭಿಕನನ್ನು ಕಣಕ್ಕಿಳಿಸುವ ಇರಾದೆಯಲ್ಲಿದೆ. ಹಾಗಾದ್ರೆ ವಾರ್ನರ್ ಸ್ಥಾನದಲ್ಲಿ ಯಾರು ಬ್ಯಾಟ್ ಬೀಸಲಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಆಸೀಸ್ ನಾಯಕ ಆರೋನ್ ಫಿಂಚ್ 3 ಆಟಗಾರರ ಹೆಸರುಗಳನ್ನು ಸೂಚಿಸಿದ್ದಾರೆ.
ಡೇವಿಡ್ ವಾರ್ನರ್ ಸ್ಥಾನದಲ್ಲಿ ಆಡುವಂತಹ ಆಟಗಾರರ ಹಲವು ಆಯ್ಕೆಗಳಿವೆ. ನಾವು ಒಂದು ಸ್ಥಾನಕ್ಕಾಗಿ ಮಾತ್ರ ಯಾರನ್ನೂ ಆಯ್ಕೆ ಮಾಡಿಲ್ಲ. ತಂಡದಲ್ಲಿ ಮ್ಯಾಥ್ಯೂ ವೇಡ್, ಮಾರ್ನಸ್ ಲಾಬುಶೇನ್ ಹಾಗೂ ಅಲೆಕ್ಸ್ ಕ್ಯಾರಿ ಇದ್ದಾರೆ. ಇವರಲ್ಲಿ ಒಬ್ಬರು ನನ್ನೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಫಿಂಚ್ ತಿಳಿಸಿದ್ದಾರೆ.
ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಡೇವಿಡ್ ವಾರ್ನರ್ ಶ್ರೇಷ್ಠ ಬ್ಯಾಟ್ಸ್ಮನ್. ಅವರು ತಂಡದಿಂದ ಹೊರಗುಳಿದರೆ ಟೀಮ್ ದುರ್ಬಲವಾಗುತ್ತದೆ. ಆದರೆ ನಮ್ಮಲ್ಲಿರುವ ಇತರೆ ಆಟಗಾರರು ಅವರ ಸ್ಥಾನ ತುಂಬಬಲ್ಲರು ಎಂದು ಫಿಂಚ್ ತಿಳಿಸಿದರು. ಇನ್ನು ಟಿ20 ಕ್ರಿಕೆಟ್ನಲ್ಲಿ ವಾರ್ನರ್ ಸ್ಥಾನಕ್ಕೆ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಅಬ್ಬರಿಸಿದ ಡಿಆರ್ಸಿ ಶಾರ್ಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 51 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅಲ್ಲದೆ ಮೂರನೇ ಪಂದ್ಯದಲ್ಲೂ ಕೊಹ್ಲಿ ಪಡೆಗೆ ಸೋಲುಣಿಸುವ ಮೂಲಕ ವೈಟ್ವಾಷ್ ಮಾಡುವ ಇರಾದೆಯಲ್ಲಿದೆ ಫಿಂಚ್ ಪಡೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ