ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿಯೊಂದಿಗೆ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟೀಮ್ ಇಂಡಿಯಾ ವಿರುದ್ಧ 17 ರನ್ಗಳಿಸುವುದರೊಂದಿಗೆ ಫಿಂಚ್ ಏಕದಿನ ಕ್ರಿಕೆಟ್ನಲ್ಲಿ 5 ಸಾವಿರ ರನ್ ಪೂರೈಸಿದರು. ಅದು ಕೂಡ ಕೇವಲ 126 ಇನಿಂಗ್ಸ್ಗಳಲ್ಲಿ ಎಂಬುದು ವಿಶೇಷ. ಈ ಮೂಲಕ ಆಸ್ಟ್ರೇಲಿಯಾ ಪರ ವೇಗವಾಗಿ 5 ಸಾವಿರ ರನ್ ಪೂರೈಸಿದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
130 ಏಕದಿನ ಪಂದ್ಯಗಳನ್ನಾಡಿರುವ ಫಿಂಚ್ 126 ಇನಿಂಗ್ಸ್ 5 ಸಾವಿರ ರನ್ ಗಡಿ ದಾಟಿದ್ದಾರೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ 115 ಇನಿಂಗ್ಸ್ ಮೂಲಕ 5000 ರನ್ ಪೂರೈಸಿದ್ದಾರೆ. ಇದೀಗ ಫಿಂಚ್ 17 ಶತಕ ಹಾಗೂ 26 ಅರ್ಧಶತಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 5 ಸಾವಿರ ರನ್ ಪೂರೈಸಿದ ಸಾಧಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಫಿಂಚ್ ಸರಿಗಟ್ಟಿದ್ದಾರೆ. ಗಂಗೂಲಿ ಸಹ 126 ಇನಿಂಗ್ಸ್ಗಳಲ್ಲಿ 5 ಸಾವಿರ ರನ್ ಕಲೆಹಾಕಿದ್ದರು. ಸದ್ಯ ಗಂಗೂಲಿ ಹಾಗೂ ಫಿಂಚ್ ಏಕದಿನ ಕ್ರಿಕೆಟ್ನ ವೇಗದ 5 ಸಾವಿರ ರನ್ ಸರದಾರರ ಪಟ್ಟಿಯಲ್ಲಿ ಜಂಟಿಯಾಗಿ 13ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ ಏಕದಿನ ಕ್ರಿಕೆಟ್ನಲ್ಲಿ 101 ಇನಿಂಗ್ಸ್ನಲ್ಲಿ ಅತೀ ವೇಗವಾಗಿ 5 ಸಾವಿರ ರನ್ ಪೂರೈಸುವ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಹಶೀಮ್ ಆಮ್ಲ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.