ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಚುಟುಕು ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿದ ಯಜುವೇಂದ್ರ ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡು ಮಿಂಚಿದರು. ಆದರೆ ಇದಕ್ಕೂ ಮುನ್ನ ಚಹಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ ಎಂಬುದು ವಿಶೇಷ.
ಆದರೆ ವಿಧಿಯಾಟ ಟೀಮ್ ಇಂಡಿಯಾದ ಬ್ಯಾಟಿಂಗ್ ಮುಗಿದಾಗ, ಯಜುವೇಂದ್ರ ಚಹಲ್ ಕಣಕ್ಕಿಳಿಯಬೇಕಾಗಿತ್ತು. ಹೌದು, ಮಿಚೆಲ್ ಸ್ಟಾರ್ಕ್ ಎಸೆದ ಬೌನ್ಸರ್ನಲ್ಲಿ ರವೀಂದ್ರ ಜಡೇಜಾ ಹೆಲ್ಮೆಟ್ಗೆ ಚೆಂಡು ಬಡಿದ ಅವರು ಕಣಕ್ಕಿಳಿಯುವಂತಿರಲಿಲ್ಲ. ಏಕೆಂದರೆ ಐಸಿಸಿಯ ನೂತನ ನಿಯಮದ ಪ್ರಕಾರ, ಬ್ಯಾಟಿಂಗ್ ವೇಳೆ ಚೆಂಡು ಬ್ಯಾಟ್ಸ್ಮನ್ನ ಹೆಲ್ಮೆಟ್ಗೆ ಬಡಿದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಹಾಗೆಯೇ ಗಾಯಗೊಂಡರೆ ಬದಲಿ ಆಟಗಾರರನ್ನು ಕಣಕ್ಕಿಳಿಸಬಹುದು.
ಆರಂಭದಲ್ಲಿ, ಕನ್ಕಷನ್ ಪ್ಲೇಯರ್ (ಬದಲಿ ಆಟಗಾರ)ಗೆ ಫೀಲ್ಡಿಂಗ್ ಮಾಡಲು ಮಾತ್ರ ಅನುಮತಿ ಇತ್ತು. ಆದರೆ ಹೊಸ ನಿಯಮದ ಪ್ರಕಾರ ಕನ್ಕಷನ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಆಟಗಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಹುದು. ಆದರೆ ಕನ್ಕಷನ್ ಸಬ್ಸ್ಟ್ಯೂಟ್ ತೆಗೆದುಕೊಳ್ಳುವ ಮುನ್ನ ಮ್ಯಾಚ್ ರೆಫ್ರಿ ಗಮನಕ್ಕೆ ತರಬೇಕಾಗುತ್ತದೆ. ಅದರಂತೆ ಜಡೇಜಾ ಸ್ಥಾನದಲ್ಲಿ ಯಜುವೇಂದ್ರ ಚಹಲ್ ಮೈದಾನಕ್ಕಿಳಿದರು.
ಅಷ್ಟೇ ಅಲ್ಲದೆ ತಮ್ಮ ಮೊದಲ ಎರಡು ಓವರ್ಗಳಲ್ಲಿ ಆರೋನ್ ಫಿಂಚ್ ಮತ್ತು ಸ್ಟೀವ್ ಸ್ಮಿತ್ ಅವರ ವಿಕೆಟ್ ಪಡೆದರು. ಹಾಗೆಯೇ 4ನೇ ಓವರ್ನ ಅಂತಿಮ ಎಸೆತದಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಉರುಳಿಸಿ 25 ರನ್ಗಳಿಗೆ 3 ವಿಕೆಟ್ನೊಂದಿಗೆ ತಮ್ಮ ಓವರ್ ಕೊನೆಗೊಳಿಸಿದರು. ಅತ್ತ ಮೊದಲು ಬ್ಯಾಟಿಂಗ್ ಮಾಡಿದ್ದ ರವೀಂದ್ರ ಜಡೇಜಾ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ ಅಜೇಯ 44 ರನ್ ಚಚ್ಚಿದ್ದರು. ಕನ್ಕಷನ್ ಸಬ್ಸ್ಟ್ಯೂಟ್ ನಿಯಮದಂತೆ ಇಬ್ಬರು ಆಟಗಾರ ಸಂಪೂರ್ಣ ಲಾಭ ಪಡೆದುಕೊಂಡ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 11 ರನ್ಗಳ ಜಯ ಸಾಧಿಸಿತು.
ಅಂದಹಾಗೆ ಐಸಿಸಿ ನಿಯಮದ ಪ್ರಕಾರ ಕನ್ಕಷನ್ ರಿಪ್ಲೇಸ್ಮೆಂಟ್ ಆಟಗಾರರನ್ನು ಕಣಕ್ಕಿಳಿಸುವ ಮೊದಲು ಮ್ಯಾಚ್ ರೆಫೆರಿ ತಂಡದಲ್ಲಿ ಇಬ್ಬರ ಪಾತ್ರವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಜಡೇಜಾ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಅದರಿಂದ ಚಹಲ್ ಅವರಿಗೆ ಅವಕಾಶ ನೀಡಲಾಗಿದೆ. ಅಂದರೆ ಬ್ಯಾಟ್ಸ್ಮನ್ಗೆ ಬ್ಯಾಟ್ಸ್ಮನ್ ಹಾಗೂ ಬೌಲರ್ಗೆ ಬೌಲರನ್ನೇ ಕಣಕ್ಕಿಳಿಸಬೇಕು. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ರೆಫರಿಗೆ ಇದೆ. ಈ ನಿಯಮದಡಿಯಲ್ಲಿ ಬದಲಿ ಆಟಗಾರರಾಗಿ ಮೊದಲ ಬಾರಿ ಕಣಕ್ಕಿಳಿದ ಆಟಗಾರ ಮಾರ್ನಸ್ ಲಾಬುಶೇನ್. ಕಳೆದ ವರ್ಷ ನಡೆದ ಲಾರ್ಡ್ಸ್ನಲ್ಲಿ ನಡೆದ ಆ್ಯಶಸ್ ಟೆಸ್ಟ್ ವೇಳೆ ಸ್ಟೀವ್ ಸ್ಮಿತ್ ಬದಲಿಗೆ ಲಾಬುಶೇನ್ ಕಣಕ್ಕಿಳಿದಿದ್ದರು.
ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ RCB..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ