ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಅಂತಿಮ ದಿನಕ್ಕೆ ಕಾಲಿಟ್ಟಿದೆ. ಕಳೆದ ಐದು ದಿನಗಳಲ್ಲಿ ಫಲಿತಾಂಶ ಮೂಡಿಬರದ ಕಾರಣ ಮೀಸಲು ದಿನಕ್ಕೆ ಪಂದ್ಯ ಮುಂದೂಡಲ್ಪಟ್ಟಿದೆ. ಕಳೆದ ಐದು ದಿನದಲ್ಲಿ ಸಂಪೂರ್ಣ ಪಂದ್ಯ ನಡೆದಿರುವುದು 2 ದಿನ ಮಾತ್ರ ಎನ್ನಬಹುದು. ಅಂದರೆ ಈ ಐದು ದಿನಗಳಲ್ಲಿ ಉಭಯ ತಂಡಗಳು ಕೇವಲ 221 ಓವರ್‌ಗಳನ್ನು ಮಾತ್ರ ಆಡಲಾಗಿದೆ. ಐಸಿಸಿ ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್ನಲ್ಲಿ ಯಾವುದೇ ಅಡಚಣೆ ಇಲ್ಲದಿದ್ರೆ ಐದು ದಿನಗಳಲ್ಲಿ 450 ಓವರ್‌ಗಳನ್ನು ಆಡಬೇಕಾಗುತ್ತದೆ.
ಇದೀಗ ಪಂದ್ಯವು ಮೀಸಲು ದಿನಕ್ಕೆ ಮುಂದೂಡಲ್ಪಟ್ಟರೂ 229 ಓವರ್‌ಗಳನ್ನು ಆಡಿಸಲು ಸಾಧ್ಯವಿಲ್ಲ. ಹೀಗಾಗಿ ಮೊದಲೇ ನಿರ್ಧರಿಸಿದಂತೆ ಮೀಸಲು ದಿನದಲ್ಲಿ ಕನಿಷ್ಠ 330 ನಿಮಿಷಗಳನ್ನು ಆಡಲಾಗುತ್ತದೆ. ಇದರ ಹೊರತಾಗಿ ಹೆಚ್ಚುವರಿ ಒಂದು ಗಂಟೆ ಆಡಿಸಬಹುದು. ಅದರಂತೆ ಅಂತಿಮ ದಿನದಲ್ಲಿ 98 ಓವರ್‌ಗಳನ್ನು ಆಡಿಸಲಾಗುತ್ತದೆ. ಈ ವೇಳೆ ಕೂಡ ಫಲಿತಾಂಶ ಮೂಡಿಬರದಿದ್ದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಸದ್ಯ ಉಭಯ ತಂಡಗಳ ಮೊದಲ ಇನಿಂಗ್ಸ್ ಮುಗಿದಿದ್ದು, ಅಂತಿಮ ದಿನದಲ್ಲಿ 2 ತಂಡಗಳು ಬಿರುಸಿನ ದ್ವಿತೀಯ ಇನಿಂಗ್ಸ್ ಆಡುವ ಮೂಲಕ ಫಲಿತಾಂಶಕ್ಕಾಗಿ ಹೋರಾಟ ನಡೆಸಲಿದೆಯಾ ಎಂಬುದೇ ಪ್ರಶ್ನೆ. ಮೊದಲ ಇನಿಂಗ್ಸ್ನಲ್ಲಿ ಭಾರತ 217 ರನ್ ಕಲೆಹಾಕಿದರೆ, ನ್ಯೂಜಿಲೆಂಡ್ 249 ರನ್ ಬಾರಿಸಿ 32 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ 5ನೇ ದಿನದಾಟದ ಅಂತ್ಯಕ್ಕೆ 64 ರನ್ಗೆ 2 ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿದೆ.
ಹೀಗಾಗಿ ಮೀಸಲು ದಿನದಂದು ಬಿರುಸಿನ ಬ್ಯಾಟಿಂಗ್ ಮೂಲಕ 2ನೇ ಸೆಷನ್ ಅಂತ್ಯಕ್ಕೆ ಕನಿಷ್ಠ 300 ರನ್ಗಳಿಸಿದರೆ ಮಾತ್ರ ಗೆಲ್ಲುವ ಅವಕಾಶ ದೊರೆಯಲಿದೆ. ಒಂದು ವೇಳೆ ಭಾರತವನ್ನು 2ನೇ ಸೆಷನ್ ಒಳಗೆ ಕಡಿಮೆ ಮೊತ್ತಕ್ಕೆ ನ್ಯೂಜಿಲೆಂಡ್ ಆಲೌಟ್ ಮಾಡಿದರೆ ಕಿವೀಸ್ ಪಡೆ ಗೆಲ್ಲುವ ಸಾಧ್ಯತೆ ಹೆಚ್ಚು. ಏಕೆಂದರೆ ಟೀಮ್ ಇಂಡಿಯಾ ಕೇವಲ 32 ರನ್ಗಳ ಮುನ್ನಡೆಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು 8 ವಿಕೆಟ್ಗಳನ್ನು ಬೇಗನೆ ಪಡೆದರೆ ಕಡಿಮೆ ಮೊತ್ತದ ಸವಾಲು ಪಡೆಯಲಿದೆ. ಅಲ್ಲದೆ ನಿರ್ದಿಷ್ಟ ಓವರ್ಗಳಲ್ಲಿ ಗುರಿ ಇರುವುದರಿಂದ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಅವಕಾಶ ನ್ಯೂಜಿಲೆಂಡ್ಗೆ ದೊರೆಯಲಿದೆ. ಅಷ್ಟೇ ಅಲ್ಲದೆ ವಿಕೆಟ್ ನಷ್ಟವಾದರೆ ಎಚ್ಚರಿಕೆಯ ಆಟದೊಂದಿಗೆ ಡ್ರಾ ಮಾಡಿಕೊಳ್ಳಬಹುದು.
ಇನ್ನೊಂದೆಡೆ ಅಂತಿಮ ದಿನದಾಟವಾಗಿರುವುದರಿಂದ ಭಾರತ 2ನೇ ಸೆಷನ್ಗೂ ಮುನ್ನ ಬೃಹತ್ ಮೊತ್ತ ಪೇರಿಸದೇ ಡಿಕ್ಲೇರ್ ಘೋಷಿಸುವುದನ್ನು ನಿರೀಕ್ಷಿಸುವಂತಿಲ್ಲ. ಅತ್ತ ಆದಷ್ಟು ಬೇಗ ಟೀಮ್ ಇಂಡಿಯಾವನ್ನು ಆಲೌಟ್ ಮಾಡಿದರೆ ಮಾತ್ರ ನ್ಯೂಜಿಲೆಂಡ್ಗೆ ಗೆಲ್ಲುವ ಚಾನ್ಸ್ ಸಿಗಲಿದೆ. ಹೀಗಾಗಿ ಭಾರತ 2ನೇ ಸೆಷನ್ ಅಂತಿಮದ ವೇಳೆಗೆ ಡಿಕ್ಲೇರ್ ನೀಡಿ 3ನೇ ಸೆಷನ್ನಲ್ಲಿ ನ್ಯೂಜಿಲೆಂಡ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಲಿದೆ.
ಇತ್ತ 98 ಓವರ್ಗಳು ನಡೆಯುವುದರಿಂದ 3ನೇ ಸೆಷನ್ನಲ್ಲೂ ಹೆಚ್ಚುವರಿ ಬೌಲಿಂಗ್ಗೆ ಅವಕಾಶ ದೊರೆಯಲಿದೆ. ಇದೇ ಪ್ಲ್ಯಾನ್ ಮೂಲಕ ಟೀಮ್ ಇಂಡಿಯಾ ಅಂತಿಮ ಹಂತದಲ್ಲಿ ಗೆಲ್ಲುವ ಪ್ರಯತ್ನ ಮಾಡಲಿದೆ. ಆದರೆ ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷಿಸುವಂತಿಲ್ಲ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು ಎನ್ನಬಹುದು. ಈ ಮೂಲಕ ಭಾರತ-ನ್ಯೂಜಿಲೆಂಡ್ ಚೊಚ್ಚಲ ಟೆಸ್ಟ್ ಕಿರೀಟವನ್ನು ಜೊತೆಯಾಗಿ ಹಂಚಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ಉಭಯ ತಂಡಗಳು ಹೀಗಿವೆ:-
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ