ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿಯುವುದರೊಂದಿಗೆ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಿದೆ. ಇನ್ನು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲಿರುವ ತಂಡಗಳ ಪೈಕಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳಿದ್ದು, ಉಭಯ ತಂಡಗಳ ಮುಂಬರುವ ಟೆಸ್ಟ್ ಸರಣಿಯಲ್ಲಿ ಇದು ನಿರ್ಧಾರವಾಗಲಿದೆ.
ಸದ್ಯದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕದಲ್ಲಿ ಭಾರತ 71.7% ಪಾಯಿಂಟ್ಸ್ನೊಂದಿಗೆ ಅಗ್ರ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ನ್ಯೂಜಿಲೆಂಡ್ (70.0%) ಇದ್ದು, 3ನೇ ಸ್ಥಾನವನ್ನು ಆಸ್ಟ್ರೇಲಿಯಾ (69.2%) ಅಲಂಕರಿಸಿದೆ. ಹಾಗೆಯೇ 4ನೇ ಸ್ಥಾನದಲ್ಲಿ ಇಂಗ್ಲೆಂಡ್ ಇಂಗ್ಲೆಂಡ್ (68.7%) ತಂಡವಿದೆ. ಈಗಾಗಲೇ ನ್ಯೂಜಿಲೆಂಡ್ ತಂಡ ಟೆಸ್ಟ್ ಚಾಂಪಿಯನ್ಶಿಪ್ ಎಲ್ಲಾ ಪಂದ್ಯಗಳನ್ನು ಮುಗಿಸಿದ್ದು, ಅತ್ತ ಆಸ್ಟ್ರೇಲಿಯಾ ಕೊರೋನಾ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದೆ.
ಇದರಿಂದ ಆಸ್ಟ್ರೇಲಿಯಾ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವ ಅವಕಾಶ ಕಳೆದುಕೊಂಡಿದೆ. ಈ ಮೂಲಕ ಕಿವೀಸ್ ಪಡೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಂಡಿದೆ. ಇನ್ನು ದಕ್ಷಿಣ ಆಫ್ರಿಕಾ ಸರಣಿಯನ್ನು ಮೊಟಕುಗೊಳಿಸಿರುವ ಆಸ್ಟ್ರೇಲಿಯಾದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಕಠಿಣವಾಗಿದೆ. ಏಕೆಂದರೆ ಆಸ್ಟ್ರೇಲಿಯಾ ತಂಡವು ಪ್ರಶಸ್ತಿ ಸುತ್ತಿಗೆ ತಲುಪಲು ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಲು ಭಾರತ ಏನು ಮಾಡಬೇಕು?
ಇಂಗ್ಲೆಂಡ್ ವಿರುದ್ಧದ ಮುಂಬರುವ 4 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಡೆ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಆದರೆ 2 ಪಂದ್ಯಗಳಲ್ಲಿ ಸೋಲಬಾರದು. ಅಂದರೆ ಇಂಗ್ಲೆಂಡ್ ವಿರುದ್ಧ 4-0, ಅಥವಾ 3-0, ಅಥವಾ 3-1, ಅಥವಾ 2-0, ಅಥವಾ 2-1 ಫಲಿತಾಂಶದೊಂದಿಗೆ ಸರಣಿ ಜಯಿಸಿದರೆ ಮಾತ್ರ ಅರ್ಹತೆ ಪಡೆಯಬಹುದು.
ಒಂದು ವೇಳೆ ಇಂಗ್ಲೆಂಡ್ 4-0, ಅಥವಾ 3-0, ಅಥವಾ 3-1 ಅಂತರದಿಂದ ಭಾರತದ ವಿರುದ್ಧ ಗೆದ್ದರೆ ಟೆಸ್ಟ್ ಚಾಂಪಿಯನ್ ಚಾಂಪಿಯನ್ಶಿಪ್ ಫೈನಲ್ಗೇರಲಿದೆ. ಹಾಗೆಯೇ ಭಾರತ-ಇಂಗ್ಲೆಂಡ್ ಸರಣಿ ಡ್ರಾ ಆದರೆ, ಆಸ್ಟ್ರೇಲಿಯಾ ಫೈನಲ್ ಅರ್ಹತೆ ಪಡೆಯಲಿದೆ. ಹಾಗೆಯೇ ಭಾರತವು 2 ಪಂದ್ಯಗಳಿಗಿಂತ ಹೆಚ್ಚು ಸೋತರೆ ಅಥವಾ ಇಂಗ್ಲೆಂಡ್ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಆಸ್ಟ್ರೇಲಿಯಾ ಫೈನಲ್ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ