ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. 2ನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ನೀಡಿದ್ದ 482 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 164 ರನ್ಗೆ ಸರ್ವಪತನ ಕಂಡಿತು. 317 ರನ್ಗಳ ಅಂತರದ ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ 2ನೇ ಸ್ಥಾನಕ್ಕೇರಿದೆ.
ಈ ಹಿಂದೆ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕುಸಿದಿತ್ತು. ಇದೀಗ ಭರ್ಜರಿ ಗೆಲುವಿನೊಂದಿಗೆ 2ನೇ ಸ್ಥಾನಕ್ಕೇರುವ ಮೂಲಕ, ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.
ಇದಾಗ್ಯೂ, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲಿರುವ ತಂಡಗಳ ಪೈಕಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳಿದ್ದು, ಉಭಯ ತಂಡಗಳ ಪ್ರಸ್ತುತ ಟೆಸ್ಟ್ ಸರಣಿಯ ಫಲಿತಾಂಶದಿಂದ ಇದು ನಿರ್ಧಾರವಾಗಲಿದೆ. ಈಗಾಗಲೇ 4 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ರ ಸಮಬಲ ಸಾಧಿಸಿದ್ದು, 3ನೇ ಪಂದ್ಯದ ಫಲಿತಾಂಶದ ಮೇಲೆ ಕ್ರಿಕೆಟ್ ಪ್ರೇಮಿಗಳ ಕಣ್ಣು ನೆಟ್ಟಿದೆ.
ಏಕೆಂದರೆ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಡೆ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಆದರೆ 2 ಪಂದ್ಯಗಳಲ್ಲಿ ಸೋಲಬಾರದು. ಅಂದರೆ ಇಂಗ್ಲೆಂಡ್ ವಿರುದ್ಧ 3-1 ಅಥವಾ 2-1 ಫಲಿತಾಂಶದೊಂದಿಗೆ ಸರಣಿ ಜಯಿಸಿದರೆ ಮಾತ್ರ ಅರ್ಹತೆ ಪಡೆಯಬಹುದು. ಇಲ್ಲಿ ಭಾರತ ಮುಂದಿನ 2 ಪಂದ್ಯಗಳಲ್ಲಿ ಎರಡು ಜಯ ಅಥವಾ ಒಂದರಲ್ಲಿ ಡ್ರಾ, ಮತ್ತೊಂದರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
⬆️ India move to the No.2 position
⬇️ England slip to No.4
Here's the latest #WTC21 standings table after the conclusion of the second #INDvENG Test! pic.twitter.com/bLNCVyDg4z
— ICC (@ICC) February 16, 2021
ಹೀಗಾಗಿ ಫೆಬ್ರವರಿ 24 ರಿಂದ ಅಹಮದಾಬಾದ್ನಲ್ಲಿ ಶುರುವಾಗಲಿರುವ ಮೂರನೇ ಟೆಸ್ಟ್ ಪಂದ್ಯವು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ