ವಿಶ್ವಕಪ್​ ಮಹಾಸಮರಕ್ಕೆ ಇಂಗ್ಲೆಂಡ್-ನ್ಯೂಜಿಲೆಂಡ್ ಸಜ್ಜು: ಯಾರು ಬಲಿಷ್ಠ? ಇಲ್ಲಿದೆ ಅಂಕಿ ಅಂಶ

ICC World Cup Final: ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ 90 ಬಾರಿ ಮುಖಾಮುಖಿ ಆಗಿದ್ದು ಉಭಯ ತಂಡಗಳ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿಲ್ಲ. ಇದರಲ್ಲಿ ನ್ಯೂಜಿಲೆಂಡ್ 43ರಲ್ಲಿ ಗೆಲುವು ಸಾಧಿಸಿದರೆ, ಇಂಗ್ಲೆಂಡ್ 41 ರಲ್ಲಿ ವಿಜಯ ಸಾಧಿಸಿದೆ.

zahir | news18
Updated:July 14, 2019, 2:54 PM IST
ವಿಶ್ವಕಪ್​ ಮಹಾಸಮರಕ್ಕೆ ಇಂಗ್ಲೆಂಡ್-ನ್ಯೂಜಿಲೆಂಡ್ ಸಜ್ಜು: ಯಾರು ಬಲಿಷ್ಠ? ಇಲ್ಲಿದೆ ಅಂಕಿ ಅಂಶ
ICC World Cup Final:
  • News18
  • Last Updated: July 14, 2019, 2:54 PM IST
  • Share this:
ಕ್ರಿಕೆಟ್ ಕಾಶಿ ಲಾರ್ಡ್ಸ್‌ ಅಂಗಳದಲ್ಲಿ ಈ ಬಾರಿ ನಡೆಯುತ್ತಿರುವ ವಿಶ್ವಕಪ್​ ಫೈನಲ್ ಪಂದ್ಯ ವಿಶೇಷ ಎನಿಸಿದೆ. ಇದಕ್ಕೆ ಕಾರಣ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿರುವುದು ಅತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು. ಏಕೆಂದರೆ ಉಭಯ ತಂಡಗಳಿಗೆ ವಿಶ್ವಕಪ್​ ಎಂಬುದು  ಮರೀಚಿಕೆ. ಹೀಗಾಗಿ ಈ ಬಾರಿ ಒಂದು ತಂಡವು ತನ್ನ ಕನಸಿನ ಟ್ರೋಫಿಯನ್ನು ಮೇಲೆಕ್ಕೆತ್ತಲಿದೆ.

ಈ ಹಿಂದೆ ಇಂಗ್ಲೆಂಡ್ ತಂಡವು ಮೂರು ಬಾರಿ ಫೈನಲ್​ ಪ್ರವೇಶಿಸಿತ್ತು. ಆದರೆ ಚಾಂಪಿಯನ್ ಪಟ್ಟ ಮಾತ್ರ ಒಲಿದಿರಲಿಲ್ಲ. ಹಾಗೆಯೇ ನ್ಯೂಜಿಲೆಂಡ್ ತಂಡವು ಕಳೆದ ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದರೂ, ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತು.

ಐಸಿಸಿ ಏಕದಿನ ರ‍್ಯಾಂಕಿಂಗ್​​ನಲ್ಲಿ ನಂಬರ್​ 1 ಸ್ಥಾನದಲ್ಲಿರುವ ಇಂಗ್ಲೆಂಡ್ ತವರಿನಲ್ಲಿ ನಡೆಯುವ ಫೈನಲ್​​ನಲ್ಲಿ ಫೇವರೇಟ್​ ಎನ್ನಲಾಗುತ್ತಿದ್ದರೂ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸುವ ನ್ಯೂಜಿಲೆಂಡ್​ ತಂಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಮುಖ್ಯವಾಗಿ ಕಳೆದ ಬಾರಿಯ ಫೈನಲ್​ ಈ ಬಾರಿ ಮರುಕಳಿಸದಂತೆ ಕಿವೀಸ್ ಪಡೆ ಅಂಗಳಕ್ಕೆ ಇಳಿಯಲಿದೆ. ಅದೇ ರೀತಿ 2015ರ ವಿಶ್ವಕಪ್ ಫೈನಲ್ ಆಡಿರುವ 6 ಆಟಗಾರರು ಈ ಬಾರಿ ತಂಡದಲ್ಲಿರುವುದು ಕೇನ್ ವಿಲಿಯಮ್ಸನ್​ ಬಳಗ ಆತ್ಮ ವಿಶ್ವಾಸಕ್ಕೆ ಕಾರಣ.

ಬ್ಯಾಟಿಂಗ್ ಬಲ:
ಇನ್ನು ಉಭಯ ತಂಡಗಳ ಬ್ಯಾಟಿಂಗ್​ ನೋಡಿದರೆ ಇಯಾನ್ ಮೋರ್ಗನ್ ಪಡೆ ಬಲಿಷ್ಠ ಎನ್ನಬಹುದು. ಅದರಲ್ಲೂ ಆರಂಭಿಕರಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಜೇಸನ್ ರಾಯ್ ಮತ್ತು ಬೈರ್​ಸ್ಟೋ ಅವರ ಕಾಣಿಕ ಮಹತ್ವದ್ದು. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್, ಮಾರ್ಗನ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೇ ಅದ್ಭುತವಾಗಿ ಬ್ಯಾಟ್ ಬೀಸಿದ್ದರು. ಜೋಸ್ ಬಟ್ಲರ್ ಮತ್ತು ಜೇಮ್ಸ್ ವಿನ್ಸಿ ಯಾವುದೇ ಕ್ಷಣದಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು.

ಅತ್ತ ನ್ಯೂಜಿಲೆಂಡ್​ ತಂಡದ ಬ್ಯಾಟಿಂಗ್ ವಿಭಾಗವು ಇಂಗ್ಲೆಂಡ್​ಗೆ ಹೋಲಿಸಿದರೆ ತುಸು ಕಳಪೆ ಎನ್ನಬಹುದು. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಸತತ ವಿಫಲರಾಗಿದ್ದಾರೆ. ಇನ್ನು ನಾಯಕ ಕೇನ್ ವಿಲಿಯಮ್ಸನ್​ ಮಾತ್ರ ಕಿವೀಸ್ ಪಡೆಯಲ್ಲಿ ಅಬ್ಬರಿಸುತ್ತಿದ್ದು, ಇವರಿಗೆ ಕೆಲ ಪಂದ್ಯಗಳಲ್ಲಿ ಸಾಥ್ ನೀಡುವಲ್ಲಿ ಟಾಮ್ ಲಾಥಮ್ ಯಶಸ್ವಿಯಾಗಿದ್ದಾರೆ. ಇನ್ನು ಭಾರತದ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ರಾಸ್ ಟೇಲರ್ ಫಾರ್ಮ್​​ಗೆ ಮರಳಿರುವುದು ಕಿವೀಸ್ ಪಾಳಯಕ್ಕೆ ತುಸು ನೆಮ್ಮದಿ.

ಬೈರ್​ಸ್ಟೋ ಅಬ್ಬರ:ನ್ಯೂಜಿಲೆಂಡ್ ವಿರುದ್ಧದ ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ಜಾನಿ ಬೈರ್​ಸ್ಟೋ ಮೂರು ಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ ಕಿವೀಸ್ ವಿರುದ್ಧದ ಕಳೆದ 7 ಏಕದಿನ ಪಂದ್ಯಗಳಲ್ಲಿ ಬೈರ್​ಸ್ಟೋ 491 ರನ್​ಗಳನ್ನು ಕಲೆ ಹಾಕಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಬೌಲರುಗಳನ್ನು ಇಂಗ್ಲೆಂಡ್ ಆರಂಭಿಕ ಲೀಲಾಜಾಲವಾಗಿ ಎದುರಿಸುವ ವಿಶ್ವಾಸದಲ್ಲಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಬೈರ್​ಸ್ಟೋ ಶತಕ ಬಾರಿಸಿದರೆ ಒಂದು ತಂಡದ ವಿರುದ್ಧ ಸತತ ನಾಲ್ಕು ಸೆಂಚುರಿ ಬಾರಿಸಿದ ವಿಶ್ವದ 2ನೇ ಆಟಗಾರನೆಂಬ ಖ್ಯಾತಿಗೆ ಇಂಗ್ಲೆಂಡ್ ಓಪನರ್ ಪಾತ್ರರಾಗಲಿದ್ದಾರೆ. ಈ ಹಿಂದೆ ಇಂತಹದೊಂದು ಸಾಧನೆಯನ್ನು ವೆಸ್ಟ್​ ಇಂಡೀಸ್ ವಿರುದ್ದ ವಿರಾಟ್ ಕೊಹ್ಲಿ ಮಾಡಿದ್ದರು.

ಸಮರ್ಥ ಬೌಲರುಗಳು:
ಬೌಲಿಂಗ್ ವಿಭಾಗವನ್ನು ಗಮನಿಸಿದರೆ ಉಭಯ ತಂಡಗಳಲ್ಲೂ ಸಮರ್ಥ ಬೌಲರುಗಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್‌ ಅವರ ಸ್ವಿಂಗ್ ಅಸ್ತ್ರಗಳು ಮೋಡಿ ಮಾಡಿತ್ತು. ಇನ್ನು ಸ್ಪಿನ್ನರ್ ಆದಿಲ್ ರಶೀದ್ ಕೂಡ ತಮ್ಮ ಕೈ ಚಳಕದ ಮೂಲಕ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕುತ್ತಿದ್ದಾರೆ.

ಇತ್ತ ನ್ಯೂಜಿಲೆಂಡ್ ತಂಡ ಕೂಡ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಇದಕ್ಕೆ ಸಾಕ್ಷಿ ಭಾರತದ ವಿರುದ್ಧದ ಸೆಮಿಫೈನಲ್‌. ಭಾರತದ ಯಶಸ್ವಿ ಆರಂಭಿಕ ಜೋಡಿ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಆರಂಭದಲ್ಲಿಯೇ ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೌಲ್ಟ್​ ಕಟ್ಟಿ ಹಾಕಿದ್ದರು. ಹಾಗೆಯೇ ವಿಕೆಟ್ ಟೇಕರ್ ವೇಗಿ ಲಾಕಿ ಫರ್ಗ್ಯುಸನ್, ಸ್ಪಿನ್ನರ್ ಮಿಷೆಲ್ ಸ್ಯಾಂಟನರ್ ಅವರೂ ವಿಕೆಟ್ ಉರುಳಿಸುವಲ್ಲಿ ನಿಸ್ಸೀಮರು.

ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಜೋಫ್ರಾ ಆರ್ಚರ್ (19) ಮೂರನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ವೇಗಿ ಲೂಕಿ ಫೆರ್ಗುಸನ್(18) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಟ್ರೆಂಟ್ ಬೌಲ್ಟ್(17) ಏಳನೇ ಸ್ಥಾನವನ್ನು, ಇಂಗ್ಲೆಂಡ್ ಬೌಲರ್ ಮಾರ್ಕ್​ವುಡ್(17) 8ನೇ ಸ್ಥಾನವನ್ನ ಅಲಂಕರಿಸಿದ್ದಾರೆ. ಉಭಯ ತಂಡಗಳಲ್ಲೂ ವಿಕೆಟ್ ಟೇಕರ್​ ಬೌಲರುಗಳಿರುವುದು ಫೈನಲ್​ ಪಂದ್ಯ ವೇಗಿಗಳ ಆಟವಾಗಿ ಮಾರ್ಪಡುವ ಸಾಧ್ಯತೆಯಿದೆ.

ಎರಡು ತಂಡಗಳ ಒಟ್ಟಾರೆ ಬಲಾಬಲ:
ಉಭಯ ತಂಡಗಳ ಫೈನಲ್​ ಪಂದ್ಯಗಳನ್ನು ಅಂಕಿ ಅಂಶಗಳನ್ನು ಗಮನಿಸಿದರೆ ಎರಡು ತಂಡಗಳ ಪ್ರದರ್ಶನ ಕಳಪೆಯಾಗಿದೆ. ಐಸಿಸಿ ಏಕದಿನ ಟೂರ್ನಿಯಲ್ಲಿ ನ್ಯೂಜಿಲೆಂಡ್ 22 ಬಾರಿ ಫೈನಲ್ ಆಡಿದ್ದು, ಅದರಲ್ಲಿ ಕೇವಲ 5 ರಲ್ಲಿ ಮಾತ್ರ ಗೆದ್ದಿದೆ. ಹಾಗೆಯೇ 24 ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ತಂಡ 8 ಫೈನಲ್​ಗಳನ್ನು ಮಾತ್ರ ಗೆದ್ದುಕೊಂಡಿದೆ. ಇನ್ನು ವಿಶ್ವಕಪ್​​​ ಟೂರ್ನಿಯಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ಮೂರರಲ್ಲೂ ಸೋಲುಂಡಿದೆ. ಹಾಗೆಯೇ 2015 ರಲ್ಲಿ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಆಸೀಸ್ ವಿರುದ್ದ ಶರಣಾಗಿತ್ತು. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳ ಪ್ರದರ್ಶನ ಸಮಬಲದಿಂದ ಕೂಡಿದೆ ಎನ್ನಬಹುದು.

ಚೇಸಿಂಗ್​ಗೆ ಸಹಕಾರಿ:

ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯಗಳಲ್ಲಿ ಮೂರು ಬಾರಿ ಮಾತ್ರ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. 1975, 1979 ರಲ್ಲಿ ವೆಸ್ಟ್​ ಇಂಡೀಸ್ ಗೆದ್ದರೆ 1983ರಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ಚೊಚ್ಚಲ ವಿಶ್ವಕಪ್ ಕಿರೀಟ ಧರಿಸಿತ್ತು. ಹಾಗೆಯೇ ಲಾರ್ಡ್ಸ್​ ಮೈದಾನದಲ್ಲಿ ಆಡಲಾದ ಕಳೆದ 8 ಏಕದಿನ ಫೈನಲ್ ಪಂದ್ಯಗಳಲ್ಲಿ ಒಂದು ಪಂದ್ಯ ಟೈಯಾದರೆ, 6 ಬಾರಿ ಸೆಕೆಂಡ್ ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಲ್ಲಿನ ಪಿಚ್ ಚೇಸಿಂಗ್​ಗೆ ಸಹಕಾರಿ ಎನ್ನಲಾಗಿದೆ.

ಲೀಗ್  ಹಂತದಲ್ಲಿ ಇಂಗ್ಲೆಂಡ್ ಅಬ್ಬರ:

ಲೀಗ್ ಹಂತದಲ್ಲಿ ಆಡಲಾದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇಂಗ್ಲೆಂಡ್ ನೀಡಿದ 305 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್ ಪಡೆ 186 ರನ್​ಗಳಿಗೆ ಸರ್ವಪತನ ಕಂಡಿತು. ಈ ಗೆಲುವು ಇಂಗ್ಲೆಂಡ್ ಆಟಗಾರರ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ.

ಲಾರ್ಡ್ಸ್​ನಲ್ಲಿ ಕಿವೀಸ್ ಮೇಲುಗೈ:
ಇನ್ನು ಲಾರ್ಡ್ಸ್​ ಮೈದಾನದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಅದರಲ್ಲೂ ಕ್ರಿಕೆಟ್ ಕಾಶಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಕಿವೀಸ್ ಪಡೆಯು ಎರಡು ಬಾರಿ ಗೆದ್ದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಎಡಗೈ ವೇಗಿಗಳಿಗೆ ಸಹಕಾರಿ:
ಈ ಮೈದಾನಲ್ಲಿ ಆಡಲಾದ ಕಳೆದ ನಾಲ್ಕು ಪಂದ್ಯಗಳಲ್ಲಿ ಎಡಗೈ ವೇಗಿಗಳು 39 ವಿಕೆಟ್​ಗಳನ್ನು ಕಿತ್ತಿದ್ದಾರೆ. ಇಲ್ಲಿ ಲೆಫ್ಟ್ ಆರ್ಮ್​ ಬೌಲರುಗಳು ಎರಡು ಬಾರಿ 4 ವಿಕೆಟ್​ಗಳ ಗುಚ್ಛ ಪಡೆದರೆ, ನಾಲ್ಕು ಬಾರಿ 5 ವಿಕೆಟ್​ಗಳ ಗುಚ್ಛಗಳ ಸಾಧನೆ ಮಾಡಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಏಕೈಕ ಎಡಗೈ ವೇಗಿಯಾಗಿ ನ್ಯೂಜಿಲೆಂಡ್​ನ ಟ್ರೆಂಟ್ ಬೌಲ್ಟ್ ಕಣಕ್ಕಿಳಿಯಲಿದ್ದಾರೆ. ಇದು ಕಿವೀಸ್ ತಂಡದ ಪಾಲಿಗೆ ವರದಾನವಾಗುವ ಸಾಧ್ಯತೆಯಿದೆ.

ರನ್​ ಸರದಾರರು:
ಇನ್ನು ಈ ಬಾರಿಯ ವಿಶ್ವಕಪ್​ನಲ್ಲಿ ರನ್ ಮಳೆ ಹರಿಸಿದವರಲ್ಲಿ ನಾಲ್ವರು ಫೈನಲ್ ಪಂದ್ಯವಾಡಲಿದ್ದಾರೆ. 549 ರನ್​ ಬಾರಿಸಿರುವ ಜೋ ರೂಟ್ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, 548 ರನ್​ಗಳೊಂದಿಗೆ ನ್ಯೂಜಿಲೆಂಡ್ ನಾಯಕ ನಂತರದ ಸ್ಥಾನದಲ್ಲಿದ್ದಾರೆ. ಅದೇ ರೀತಿ ಜಾನಿ ಬೈರ್​ಸ್ಟೋ(496) 7ನೇ ಹಾಗೂ ಜೇಸನ್ ರಾಯ್ (426) 10ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಮೂವರು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿರುವುದು ತಂಡದ ಬ್ಯಾಟಿಂಗ್ ಶಕ್ತಿಯನ್ನು ತೋರಿಸುತ್ತದೆ.

ಮುಖಾಮುಖಿ:
ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ 90 ಬಾರಿ ಮುಖಾಮುಖಿ ಆಗಿದ್ದು ಉಭಯ ತಂಡಗಳ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿಲ್ಲ. ಇದರಲ್ಲಿ ನ್ಯೂಜಿಲೆಂಡ್ 43ರಲ್ಲಿ ಗೆಲುವು ಸಾಧಿಸಿದರೆ, ಇಂಗ್ಲೆಂಡ್ 41 ರಲ್ಲಿ ವಿಜಯ ಸಾಧಿಸಿದೆ. ಇನ್ನು 4 ಪಂದ್ಯಗಳು ಫಲಿತಾಂಶ ರಹಿತವಾಗಿದ್ದು, 2 ಪಂದ್ಯಗಳು ಟೈ ಆಗಿವೆ. ಹಾಗೆಯೇ ವಿಶ್ವಕಪ್​ನಲ್ಲಿ ಉಭಯ ತಂಡಗಳು 9 ಬಾರಿ ಸೆಣಸಿದ್ದು, ಇಂಗ್ಲೆಂಡ್ 4ರಲ್ಲಿ ಗೆದ್ದರೆ, ಕಿವೀಸ್ ಪಡೆ 5 ರಲ್ಲಿ ಗೆದ್ದುಬೀಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಬಲಾಬಲ

ರ‍್ಯಾಂಕಿಂಗ್
ಇಂಗ್ಲೆಂಡ್: 1
ನ್ಯೂಜಿಲೆಂಡ್: 3

ನಾಯಕರ ಬಲಾಬಲ
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
ಪಂದ್ಯ: 148
ರನ್: 6102
ಶ್ರೇಷ್ಠ: 148
ಶತಕ: 13
ಅರ್ಧಶತಕ: 39
ಸ್ಟ್ರೈಕ್‌ರೇಟ್: 82

ಇಯಾನ್ ಮೋರ್ಗನ್ (ಇಂಗ್ಲೆಂಡ್ )
ಪಂದ್ಯ: 232
ರನ್: 7339
ಶ್ರೇಷ್ಠ: 148
ಶತಕ: 13
ಅರ್ಧಶತಕ: 46
ಸ್ಟ್ರೈಕ್‌ರೇಟ್: 91.38

ಉಭಯ ತಂಡಗಳು ಇಂತಿವೆ:
ಇಂಗ್ಲೆಂಡ್: ಇಯಾನ್ ಮೋರ್ಗನ್ (ನಾಯಕ), ಜೋಫ್ರಾ ಆರ್ಚರ್, ಜಾನಿ ಬೈರ್​ಸ್ಟೋ, ಜಾಸ್ ಬಟ್ಲರ್ (ವಿಕೆಟ್‌ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್‌.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಟ್ರೆಂಟ್ ಬೌಲ್ಟ್, ಲೂಕಿ ಫೆರ್ಗುಸನ್, ಮ್ಯಾಟ್ ಹೆನ್ರಿ, ಮಿಷೆಲ್ ಸ್ಯಾಂಟ್ನರ್ , ಹೆನ್ರಿ ನಿಕೊಲ್ಸ್‌, ಟಾಮ್ ಲಾಥಮ್ (ವಿಕೆಟ್‌ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜಿಮ್ಮಿ ನೀಶಮ್ .
First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ