ICC World Cup 2019: ಇಂದು ವಿಶ್ವಕಪ್​ಗೆ ಅಧಿಕೃತ ಚಾಲನೆ: ಮೊದಲ ಪಂದ್ಯದಲ್ಲಿ ಆತಿಥೇಯ ಆಂಗ್ಲರಿಗೆ ಹರಿಣಗಳ ಪಡೆ ಸವಾಲು

ಉಭಯ ತಂಡಗಳು ಇದುವರೆಗೆ 59 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಇಂಗ್ಲೆಂಡ್ 26 ರಲ್ಲಿ ಗೆದ್ದರೆ, ದಕ್ಷಿಣ ಆಫ್ರಿಕಾ 29 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

zahir | news18
Updated:May 30, 2019, 12:01 PM IST
ICC World Cup 2019: ಇಂದು ವಿಶ್ವಕಪ್​ಗೆ ಅಧಿಕೃತ ಚಾಲನೆ: ಮೊದಲ ಪಂದ್ಯದಲ್ಲಿ ಆತಿಥೇಯ ಆಂಗ್ಲರಿಗೆ ಹರಿಣಗಳ ಪಡೆ ಸವಾಲು
@circleofcricket.com
  • News18
  • Last Updated: May 30, 2019, 12:01 PM IST
  • Share this:
ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿ ಇಂದು ಆರಂಭವಾಗಲಿದೆ. ಈ ಬಾರಿಯ ವಿಶ್ವಕಪ್​ ಆತಿಥ್ಯವನ್ನು ಇಂಗ್ಲೆಂಡ್-ವೇಲ್ಸ್ ಜಂಟಿಯಾಗಿ ಆಯೋಜಿಸುತ್ತಿದ್ದು, 10 ತಂಡಗಳ ಮುಖಾಮುಖಿಯನ್ನು ವಿಶ್ವ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಮೇ.30 ರಿಂದ ಆರಂಭವಾಗುತ್ತಿರುವ ಕ್ರಿಕೆಟ್​ ಹಬ್ಬವು 45 ದಿನಗಳ ಕಾಲ ನಡೆಯಲಿದ್ದು, ಜುಲೈ 14 ರಂದು ಫೈನಲ್ ಮೂಲಕ ಅಂತಿಮ ತೆರೆ ಬೀಳಲಿದೆ. ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಈ ಬಾರಿಯ ವಿಶ್ವಕಪ್ ಉದ್ಘಾಟನಾ ಪಂದ್ಯದ ಮತ್ತೊಂದು ವಿಶೇಷತೆ ಅಂದರೆ ಉಭಯ ತಂಡಗಳು ಇದುವರೆಗೆ ವರ್ಲ್ಡ್​​ಕಪ್​ ಅನ್ನು ಮುಡಿಗೇರಿಸಿಕೊಂಡಿಲ್ಲ ಎಂಬುದು. ಇಂಗ್ಲೆಂಡ್​ ತಂಡವು 1979, 1987, 1992ರಲ್ಲಿ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಎಡವಿದ ಆಂಗ್ಲರು ವಿಶ್ವಕಪ್ ಕಿರೀಟ ಕೈ ತಪ್ಪಿಸಿಕೊಂಡಿದ್ದರು. ಪ್ರಸ್ತುತ ಏಕದಿನ ಕ್ರಿಕೆಟ್​ನ ನಂಬರ್ ಒನ್ ತಂಡವಾಗಿರುವ ಇಂಗ್ಲೆಂಡ್ ಮೇಲೆ ಈ ಬಾರಿ ನಿರೀಕ್ಷೆಯಿದ್ದು, ತವರಿನ ಬೆಂಬಲದೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿಯುವ ಸಿದ್ಧತೆಯಲ್ಲಿದ್ದಾರೆ ಇಯಾನ್ ಮೊರ್ಗನ್ ಬಳಗ.

ಇನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಫೈನಲ್ ಪ್ರವೇಶ ಮರೀಚಿಕೆಯಾಗಿ ಉಳಿದಿದ್ದು, ಕಳೆದ ಬಾರಿ ಸೆಮಿ ಫೈನಲ್ ತಲುಪಿರುವುದೇ ಶ್ರೇಷ್ಠ ಸಾಧನೆಯಾಗಿದೆ. ಆದರೆ ಈ ಬಾರಿ ದಕ್ಷಿಣ ಆಫ್ರಿಕಾ ತಂಡವನ್ನು ಫಫ್ ಡುಪ್ಲೆಸಿಸ್ ಮುನ್ನಡೆಸುತ್ತಿದ್ದು, ಈ ಹಿಂದಿನ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸುವ ಇರಾದೆಯಲ್ಲಿದ್ದಾರೆ.

ಬಲಿಷ್ಠ ದಾಂಡಿಗರ ಪಡೆಯನ್ನೇ ಹೊಂದಿರುವ ಹರಿಣರ ತಂಡದ ಬೆನ್ನೆಲುಬಾಗಿ ಡೇವಿಡ್ ಮಿಲ್ಲರ್, ಹಾಶಿಮ್ ಆಮ್ಲಾ, ಡುಮಿನಿ, ಡಿ ಕೊಕ್ ಇದ್ದರೆ, ಬೌಲಿಂಗ್ ವಿಭಾಗದ ಬಲ ಹೆಚ್ಚಿಸಲು ಲುಂಗಿ ಎನ್​ಗಿಡಿ, ಸ್ಟೇನ್​, ರಬಾಡರಂತಹ ರಣವೇಗಿಗಳು ತಂಡದಲ್ಲಿದ್ದಾರೆ. ಇವರಿಗೆ ಸಾಥ್ ನೀಡಲು ಸ್ಪಿನ್ ಮಾಂತ್ರಿಕರಾದ ಇಮ್ರಾನ್ ತಾಹಿರ್ ಹಾಗೂ ತಬ್ರಾರಿಜ್ ಶಂಸಿ ಸಹ ಟೀಮ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತ್ತ ಕಡೆ ಹೊಡಿಬಡಿ ದಾಂಡಿಗರೇ ತುಂಬಿರುವ ಇಂಗ್ಲೆಂಡ್​ಗೆ ಈ ಬಾರಿ ತವರಿನ ಬೆಂಬಲ ಪ್ಲಸ್ ಪಾಯಿಂಟ್ ಆಗಲಿದೆ. ಇತ್ತೀಚೆಗಷ್ಟೇ ನಡೆದ ಪಾಕ್ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಜಾನಿ ಬೇರ್​ಸ್ಟೊ, ಜಾಯ್ ರೂಟ್, ಮೊರ್ಗನ್, ಜಾಸನ್ ರಾಯ್, ಮೊಹೀನ್ ಅಲಿ, ಜೋಸ್ ಬಟ್ಲರ್​ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ಅವರನ್ನು ಕಟ್ಟಿ ಹಾಕುವುದೇ ಹರಿಣರಿಗೆ ದೊಡ್ಡ ಸವಾಲಾಗಲಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಟಾಮ್ ಕುರ್ರನ್, ಕ್ರಿಸ್ ವೋಕ್ಸ್ ಹಾಗೂ ಆದಿಲ್ ರಶೀದ್ ತಂಡದ ಬೆನ್ನೆಲುಬಾಗಿ ನಿಲ್ಲಲಿದ್ದಾರೆ.

ಉಭಯ ತಂಡಗಳು ಇದುವರೆಗೆ 59 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಇಂಗ್ಲೆಂಡ್ 26 ರಲ್ಲಿ ಗೆದ್ದರೆ, ದಕ್ಷಿಣ ಆಫ್ರಿಕಾ 29 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಮೂರು ಪಂದ್ಯಗಳು ಫಲಿತಾಂಶ ರಹಿತ ಹಾಗೂ ಒಂದು ಪಂದ್ಯ ಟೈಯಿಂದ ಅಂತ್ಯಗೊಂಡಿದೆ. ಒಟ್ಟಿನಲ್ಲಿ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಎದುರು ನೋಡುತ್ತಿರುವ ಉಭಯ ತಂಡಗಳಿಂದ ಇಂದು ಓವಲ್​ ಮೈದಾನದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.ದಕ್ಷಿಣ ಆಫ್ರಿಕಾ ತಂಡ:
ಫಾಫ್ ಡುಪ್ಲೆಸಿಸ್(ನಾಯಕ), ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಡೇಲ್ ಸ್ಟೇನ್, ಆ್ಯಂಡಿಲಿ ಫೆಲಿಕ್‌ವಾಯೋ, ಇಮ್ರಾನ್ ತಾಹಿರ್, ಕಗಿಸೋ ರಬಾಡ, ಡ್ವೇನ್ ಪ್ರಿಟೋರಿಯಸ್, ಕ್ವಿಂಟನ್ ಡಿ ಕೊಕ್, ಆ್ಯನ್ರಿಚ್ ನೊರ್ಜೆ, ಲುಂಗಿ ಎನ್‌ಗಿಡಿ, ಆಡೆನ್ ಮಾಕ್ರಮ್, ರಸಿ ವ್ಯಾಡ್ ಹುಸೈನ್, ಹಾಶಿಮ್ ಆಮ್ಲಾ, ತಬ್ರಾರಿಜ್ ಶಂಸಿ

ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್(ನಾಯಕ), ಮೊಯಿನ್ ಆಲಿ, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್, ಟಾಮ್ ಕುರ್ರನ್, ಜೊ ಡೆನ್ಲಿ, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜಾಸನ್ ರೊಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲೆ, ಕ್ರಿಸ್ ವೋಕ್ಸ್, ಮಾರ್ಕ್ ವುಡ್

ಸಮಯ: 3PM
ಮೈದಾನ: ಓವಲ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​
ಲೈವ್ ಸ್ಟ್ರೀಮಿಂಗ್: ಹಾಟ್​ಸ್ಟಾರ್.ಕಾಮ್
First published:May 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ