ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ಬ್ಯಾಟಿಂಗ್ ಅದ್ಭುತ. ತನ್ನ ಆಕರ್ಷಕ ಬ್ಯಾಟಿಂಗ್ ಮತ್ತು ಮೈದಾನದಲ್ಲಿನ ನಡವಳಿಕೆಯಿಂದ ಎಲ್ಲರಿಗೂ ಮಾದರಿಯಾಗಿದ್ದರು. ಹೀಗಾಗಿ, ಸಚಿನ್ ಕ್ರಿಕೆಟ್ ದೇವರು ಎಂದು ಗುರುತಿಸಿಕೊಂಡರು. ಎದುರಾಳಿಯ ವೇಗದ ಬೌನ್ಸರ್ಗಳನ್ನು ಅಷ್ಟೇ ವೇಗದಿಂದ ದಂಡಿಸುತ್ತಿದ್ದ ಸಚಿನ್ ಈಗ ಐಸಿಸಿ ಮಾಡಿರುವ ಟ್ವೀಟ್ ಬೌನ್ಸ್ಗೆ ಸರಿಯಾಗಿ ಹುಕ್ ಬಾರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿರೋ ಸಚಿನ್ ತೆಂಡೂಲ್ಕರ್, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿರೋ ಬ್ಯಾಟ್ಸ್ಮನ್, ಶತಕಗಳ ಶತಕ ಬಾರಿಸಿರೋ ಏಕೈಕ ಕ್ರಿಕೆಟಿಗ. ಅಲ್ಲದೇ, ಒನ್ಡೇ ಕ್ರಿಕೆಟ್ನಲ್ಲಿ ದ್ವಿಶತಕ ದಾಖಲಿಸಬಹುದು ಅಂತಾ ತೋರಿಸಿಕೊಟ್ಟಿದ್ದರು
ಇದನ್ನೂ ಓದಿ: ಕುಂದಗೋಳ, ಚಿಂಚೋಳಿ ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆಯಿಂದ ಮನೆ ಮನೆ ಪ್ರಚಾರ
ಸಚಿನ್ ಇತ್ತೀಚೆಗಷ್ಟೇ ತಮ್ಮ ಹಳೆಯ ಸವಿ ನೆನಪುಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಶಿವಾಜಿ ಪಾರ್ಕ್ನಲ್ಲಿ ವಿನೋದ್ ಕಾಂಬ್ಳಿಗೆ ಬೌಲಿಂಗ್ ಮಾಡುವ ವಿಡಿಯೋವೊಂದನ್ನು ಟ್ವೀಟ್ಟರ್ನಲ್ಲಿ ಟ್ವಿಟ್ ಮಾಡಿದ್ದರು. ವಿನೋದ್ ಕಾಂಬ್ಳಿ ಜೊತೆಗೆ ನೆಟ್ಸ್ ನಲ್ಲಿ ಸಮಯ ಕಳೆಯಲು ಯಾವಾಗಲೂ ಖುಷಿ ಕೊಡುತ್ತದೆ. ಬಾಲ್ಯದಲ್ಲಿ ನಾನು ಮತ್ತು ವಿನೋದ್ ಶಿವಾಜಿ ಪಾರ್ಕ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ನೆನಪುಗಳು ಮರುಕಳಿಸಿದವು ಎಂದು ಟ್ವೀಟ್ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಅವರ ಟ್ವೀಟ್ ಸದ್ದು ಮಾಡುತ್ತಿದ್ದಂತೆ, ಐಸಿಸಿ ಸಚಿನ್ ಅವರ ಕಾಲೆಳೆಯೋಕೆ ಶುರು ಮಾಡಿದೆ. ಸಚಿನ್ ಟ್ವೀಟ್ ಗೆ ಕಾಮೆಂಟ್ ಮಾಡಿದ್ದ ಐಸಿಸಿ, ಸಚಿನ್ ಬೌಲ್ ಮಾಡುವ ಫೋಟೊದೊಂದಿಗೆ ಅಂಪೈರ್ ಸ್ಟೀವ್ ಬಕ್ನರ್ ನೋ ಬಾಲ್ ನೀಡುವ ಫೋಟೋ ಹಾಕಿ 'ನಿಮ್ಮ ಕಾಲನ್ನು ನೋಡಿಕೊಳ್ಳಿ ಎಂದು ಟ್ವೀಟ್ ಮಾಡಿದೆ.
ಸಚಿನ್ ಪಾಲಿಗೆ ವಿಲನ್ ಆಗಿದ್ದ ಅಂಪೈರ್ಸ್
ಸಚಿನ್ ಬ್ಯಾಟಿಂಗ್ ವೇಳೆ ಅದೆಷ್ಟೋ ಅಂಪೈರ್ಸ್ ಸಚಿನ್ ಔಟ್ ಅಲ್ಲದಿದ್ರೂ ಔಟ್ ಎಂದು ತೀರ್ಪು ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗೆ ಸಚಿನ್ಗೆ ಅಂಪೈರ್ಗಳೇ ವಿಲನ್ ಆಗಿದ್ದರು. ಅದರಲ್ಲೂ ಸ್ಟೀವ್ ಬಕ್ನರ್ ಅಂತೂ ಸಚಿನ್ಗೆ ವಿಲನ್ ಆಗಿದ್ದರು. ಸಚಿನ್ ವಿರುದ್ಧ ಅನೇಕ ತಪ್ಪು ನಿರ್ಣಯಗಳನ್ನು ನೀಡಿದ್ದಾರೆ. ಸಚಿನ್ ವಿರುದ್ಧ ಅನೇಕ ತಪ್ಪು ತೀರ್ಪುಗಳನ್ನ ಕ್ರಿಕೆಟ್ ಲೋಕ ಕಂಡಿದೆ. ಹೀಗಾಗಿ ಸಚಿನ್ ಗೆರೆದಾಟಿ ಬೌಲ್ ಮಾಡಿದ ಫೋಟೋವನ್ನು ಐಸಿಸಿ ಹೈಲೈಟ್ ಮಾಡಿ, ಸಚಿನ್ ಅವರ ಕಾಲೆಳೆದಿದೆ.
ಐಸಿಸಿಗೆ ತಕ್ಕ ತಿರುಗೇಟು ನೀಡಿದ ಮಾಸ್ಟರ್
ಐಸಿಸಿಯ ಟ್ವೀಟ್ಗೆ ಸಖತ್ ಆಗಿ ಉತ್ತರ ಕೊಟ್ಟ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಐಸಿಸಿಯ ಈ ಬೌನ್ಸರ್ ಗೆ ಸರಿಯಾಗೇ ಉತ್ತರ ನೀಡಿದ್ದಾರೆ. ಐಸಿಸಿಗೆ ಉತ್ತರ ನೀಡಿದ ಸಚಿನ್, ಕನಿಷ್ಠ ಪಕ್ಷ ಈ ಸಲ ನಾನು ಬ್ಯಾಟಿಂಗ್ ಮಾಡುತ್ತಿಲ್ಲ, ಬೌಲಿಂಗ್ ಮಾಡುತ್ತಿದ್ದೇನೆ. ಅಂಪೈರ್ಸ್ ತೀರ್ಮಾನವೇ ಅಂತಿಮ ಎಂದು ಮರು ಟ್ವೀಟ್ ಮಾಡಿದ್ದಾರೆ. ಈ ಮೊದಲು ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಅನೇಕ ಬಾರಿ ಸ್ಟೀವ್ ಬಕ್ನರ್ ನೀಡಿದ್ದ ತಪ್ಪು ತೀರ್ಪಿಗೆ ಔಟಾಗಿದ್ದರು. ಹೀಗಾಗಿ ಸಚಿನ್ ಅಂಪೈರ್ಸ್ ತೀರ್ಪು ಗೌರವಿಸುತ್ತೇನೆ ಎಂದು ಹೇಳುತ್ತಲೇ, ಸ್ವೀವ್ ಬಕ್ನರ್ರನ್ನು ಟ್ರೋಲ್ ಮಾಡುತ್ತಾ ಐಸಿಸಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಇದೀಗ ಸಚಿನ್ ಅವರ ಟ್ವೀಟ್ ಈಗ ಸಖತ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ