ಬೆಂಗಳೂರು, ಆ. 17: ದುಬೈನಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ನ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ಅಕ್ಟೋಬರ್ 17ರಂದು ಪ್ರಾರಂಭವಾಗಲಿರುವ ಈ ಮೆಗಾ ಕ್ರಿಕೆಟ್ ಟೂರ್ನಿ ನವೆಂಬರ್ 14ಕ್ಕೆ ಮುಕ್ತಾಯವಾಗಲಿದೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಎರಡು ಹಂತದಲ್ಲಿ ಟೂರ್ನಿ ನಡೆಯಲಿದ್ದು, ಮೊದಲನೆಯದ್ದು ಅರ್ಹತಾ ಹಂತವಾಗಿದೆ. ಈ ಹಂತದ ಪಂದ್ಯಗಳು ಅಕ್ಟೋಬರ್ 17ರಿಂದ ಅಕ್ಟೋಬರ್ 22ರವರೆಗೆ ನಡೆಯಲಿವೆ. ಅದಾದ ಬಳಿಕ ಸೂಪರ್12 ಹಂತ ಇರಲಿದೆ. ಅರ್ಹತಾ ಹಂತದಲ್ಲಿ ಎಂಟು ತಂಡಗಳು ಸ್ಪರ್ಧಿಸಲಿವೆ. ಈ ಎಂಟು ತಂಡಗಳನ್ನ ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಒಂದೊಂದು ಗುಂಪಿನಿಂದ ಟಾಪ್ 2 ತಂಡಗಳಂತೆ ಒಟ್ಟು ಅರ್ಹತಾ ಹಂತದಿಂದ ನಾಲ್ಕು ತಂಡಗಳು ಸೂಪರ್12 ಹಂತಕ್ಕೆ ಅರ್ಹತೆ ಪಡೆಯಲಿವೆ.
ಟಿ20 ಕ್ರಿಕೆಟ್ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 8 ಸ್ಥಾನದಲ್ಲಿರುವ ತಂಡಗಳು ನೇರವಾಗಿ ಸೂಪರ್12 ಹಂತ ಪ್ರವೇಶ ಪಡೆಯುತ್ತವೆ. ಈ 12 ತಂಡಗಳ ಜೊತೆಗೆ ಅರ್ಹತಾ ಹಂತದಿಂದ ನಾಲ್ಕು ತಂಡಗಳು ಕ್ವಾಲಿಫೈ ಆಗಲಿವೆ. ಟೆಸ್ಟ್ ಆಡುವ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಅರ್ಹತಾ ಹಂತದಲ್ಲಿ ಆಡುತ್ತಿವೆ. ಎ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮೀಬಿಯಾ ತಂಡಗಳಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್ ತಂಡಗಳಿವೆ.
ಸೂಪರ್12 ಹಂತದಲ್ಲೂ ಎರಡು ಗುಂಪುಗಳನ್ನ ಮಾಡಲಾಗಿದೆ. ಒಂದನೇ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಅರ್ಹತಾ ಹಂತದಿಂದ ಬಂದ 2 ತಂಡಗಳು ಇರಲಿವೆ. ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ಅರ್ಹತಾ ಹಂತದಿಂದ ಬಂದ ಎರಡು ತಂಡಳು ಇರಲಿವೆ. ಅರ್ಹತಾ ಹಂತದಲ್ಲಿರುವ ಗ್ರೂಪ್ ಎನಲ್ಲಿ ಮೊದಲ ಸ್ಥಾನ ಪಡೆದ ತಂಡ ಹಾಗೂ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಸೂಪರ್12 ಹಂತದಲ್ಲಿ ಒಂದನೇ ಗುಂಪಿನಲ್ಲಿ ಆಡಲಿವೆ. ಹಾಗೆಯೇ, ಅರ್ಹತಾ ಹಂತದಲ್ಲಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಹಾಗೂ ಬಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡಗಳು ಸೂಪರ್12 ಹಂತದಲ್ಲಿ ಎರಡನೇ ಗುಂಪಿನಲ್ಲಿ ಆಡಲಿವೆ.
ಇದನ್ನೂ ಓದಿ: ಕ್ರಿಕೆಟ್ ಕಾಶಿಯಲ್ಲಿ ಆಂಗ್ಲರ ಪಡೆಯನ್ನ ಮೆಟ್ಟಿನಿಂತ ಭಾರತೀಯರು; ಸ್ವಾತಂತ್ರ್ಯೋತ್ಸವ ಗಿಫ್ಟ್
ಸೂಪರ್12 ಹಂತದ ಪಂದ್ಯಗಳು ಅಕ್ಟೋಬರ್ 23ರಂದು ಪ್ರಾರಂಭವಾಗುತ್ತವೆ. ಆಸ್ಟ್ರೇಲಿಯಾ ಹಾಗೂ ಸೌಥ್ ಆಫ್ರಿಕಾ ನಡುವೆ ಮೊದಲ ಸೂಪರ್12 ಹಂತದ ಪಂದ್ಯ ನಡೆಯಲಿದೆ. ಎರಡನೇ ಗುಂಪಿನಲ್ಲಿನ ಮೊದಲ ಪಂದ್ಯ ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯಲಿದೆ.
ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತದ ಪಂದ್ಯಗಳು:
1) ಭಾರತ ವರ್ಸಸ್ ಪಾಕಿಸ್ತಾನ – ಅ. 24
2) ಭಾರತ ವರ್ಸಸ್ ನ್ಯೂಜಿಲೆಂಡ್ – ಅ. 31
3) ಭಾರತ ವರ್ಸಸ್ ಆಫ್ಘನಿಸ್ತಾನ – ನ. 4
4) ಭಾರತ ವರ್ಸಸ್ ಬಿ1 – ನ. 5
5) ಭಾರತ ವರ್ಸಸ್ ಎ2 – ನ. 8
ಸೂಪರ್12 ಹಂತದಲ್ಲಿ ಪ್ರತೀ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ. ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ:
ಒಂದನೇ ಸುತ್ತು:
ಎ ಗುಂಪು: ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮೀಬಿಯಾ
ಬಿ ಗುಂಪು: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್
ಸೂಪರ್12 ಸುತ್ತು:
ಗ್ರೂಪ್ 1: ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ, ವೆಸ್ಟ್ ಇಂಡೀಸ್, ಎ1, ಬಿ2
ಗ್ರೂಪ್ 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಎ2, ಬಿ1
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ