ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಏಕದಿನ ಬ್ಯಾಟ್ಸ್ಮನ್ ರ್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ನೂತನ ಪಟ್ಟಿಯಲ್ಲೂ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಮೊದಲೆರಡು ಸ್ಥಾನಗಳಲ್ಲಿ ಮುಂದುವರೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದಿದ್ದರೂ ವಿರಾಟ್ ಕೊಹ್ಲಿ (871 ರೇಟಿಂಗ್) ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಹಾಗೆಯೇ ಏಕದಿನ ವಿಶ್ವಕಪ್ ಬಳಿಕ ಮೈದಾನದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ (855 ರೇಟಿಂಗ್) ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಯುವ ಬ್ಯಾಟ್ಸ್ಮನ್ ಬಾಬರ್ ಆಜಂ ಇದ್ದು, 837 ರೇಟಿಂಗ್ನೊಂದಿಗೆ ಟಾಪ್ 3ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಿಂಬಾಬ್ವೆ ವಿರುದ್ಧ 3 ಪಂದ್ಯಗಳಿಂದ 231 ರನ್ ಕಲೆಹಾಕಿರುವ ಬಾಬರ್ ಉತ್ತಮ ಫಾರ್ಮ್ನಲ್ಲಿದ್ದು, ಪರಿಣಾಮ ಶ್ರೇಯಾಂಕ ಪಟ್ಟಿಯಲ್ಲಿ ಮತ್ತಷ್ಟು ಪಾಯಿಂಟ್ಸ್ ಸಂಪಾದಿಸಿದ್ದಾರೆ. ಅಲ್ಲದೆ ಹಿಟ್ಮ್ಯಾನ್ಗಿಂತ ಕೇವಲ 18 ಅಂಕಗಳಷ್ಟು ಹಿಂದಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ಸ್ಪೋಟಕ ಆಟಗಾರ ರಾಸ್ ಟೇಲರ್ (818 ರೇಟಿಂಗ್) ನಾಲ್ಕನೇ ಸ್ಥಾನದಲ್ಲಿದ್ದು, 5ನೇ ಸ್ಥಾನವನ್ನು 790 ರೇಟಿಂಗ್ ಪಡೆದಿರುವ ದಕ್ಷಿಣ ಆಫ್ರಿಕಾ ಫಾಫ್ ಡುಪ್ಲೆಸಿಸ್ ಪಡೆದಿದ್ದಾರೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈ ಬಾರಿ 765 ರೇಟಿಂಗ್ನೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ವೈಫಲ್ಯದ ಹೊರತಾಗಿಯೂ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (762) 7ನೇ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ 6ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಎಡಗೈ ದಾಂಡಿಗ ಡೇವಿಡ್ ವಾರ್ನರ್ ಈ ಬಾರಿ 759 ರೇಟಿಂಗ್ನೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.
755 ರೇಟಿಂಗ್ನೊಂದಿಗೆ ಒಂದು ಸ್ಥಾನ ಮೇಲೆ ಏರಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ನೂತನ ರ್ಯಾಕಿಂಗ್ ಪಟ್ಟಿಯಲ್ಲಿ ಟಾಪ್ 10ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಆಸೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 126 ಎಸೆತಗಳಲ್ಲಿ 112 ಬಾರಿಸಿದ್ದ ಬೈರ್ಸ್ಟೋವ್ ಸರಣಿಯಲ್ಲಿ ಒಟ್ಟಾರೆ 196 ರನ್ ಕಲೆಹಾಕಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ 754 ರೇಟಿಂಗ್ನೊಂದಿಗೆ 10ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ 3 ಸ್ಥಾನ ಮೇಲೆಕ್ಕೇರಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದು, ಟೀಮ್ ಇಂಡಿಯಾ ಯಾರ್ಕರ್ ಮಾಂತ್ರಿಕ ಜಸ್ಪ್ರೀತ್ ಬುಮ್ರಾ ಎರಡನೇ ಶ್ರೇಯಾಂಕದಲ್ಲಿದ್ದಾರೆ. ಅಫ್ಘಾನ್ ಸ್ಪಿನ್ನರ್ ಮುಜೀಬ್ ರೆಹಮಾನ್ ಮೂರನೇ ರ್ಯಾಂಕ್ ಅಲಂಕರಿಸುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ.
ಆಲ್ರೌಂಡರುಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಆಟಗಾರ ಶಕೀಬ್ ಉಲ್ ಹಸನ್ ಅಗ್ರಸ್ಥಾನವನ್ನು ಅಲಂಕರಿಸಿದ್ದು, ಅಫ್ಘಾನಿಸ್ತಾನದ ಸ್ಪೋಟಕ ಆಟಗಾರ ಮೊಹಮ್ಮದ್ ನಬಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಕ್ರಿಸ್ ವೋಕ್ಸ್ 3ನೇ ಸ್ಥಾನದಲ್ಲಿದ್ದರೆ, ಬೆನ್ ಸ್ಟೋಕ್ಸ್ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಪಾಕ್ ಆಲ್ರೌಂಡರ್ ಇಮಾದ್ ವಾಸಿಂ 5ನೇ ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ 246 ರೇಟಿಂಗ್ಗಳೊಂದಿಗೆ 9ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದನ್ನೂ ಓದಿ: Rohit Sharma: ಗಂಗೂಲಿ ಸಲಹೆಯನ್ನು ಧಿಕ್ಕರಿಸಿದ್ರಾ ರೋಹಿತ್ ಶರ್ಮಾ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ