ಕ್ರಿಕೆಟ್ ಪಂದ್ಯಗಳಲ್ಲಿ ನಾವು ಕಾಣುವ ಪ್ರಮುಖ ಸಮಸ್ಯೆಗಳಲ್ಲಿ ವಿಳಂಬ ಗತಿಯ ಬೌಲಿಂಗ್ ಕೂಡ ಒಂದು. ಅಂದರೆ ಸ್ಲೋ ಓವರ್ ರೇಟ್ (Slow Over Rate) ಅನ್ನು ಗಂಭೀರ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈಗಿರುವ ನಿಯಮದ ಪ್ರಕಾರ ಸ್ಲೋ ಓವರ್ ರೇಟ್ ಮಾಡುವ ಬೌಲಿಂಗ್ ತಂಡಕ್ಕೆ ಹಲವು ರೀತಿಯ ದಂಡಗಳನ್ನ ವಿಧಿಸಲಾಗುತ್ತದೆ. ಪಾಯಿಂಟ್ಸ್ ಕಡಿತ ಮಾಡುವುದು, ಬೌಲರ್ಗೆ ದಂಡ ವಿಧಿಸುವುದು, ಅಥವಾ ನಾಯಕನನ್ನ ನಿರ್ದಿಷ್ಟ ಪಂದ್ಯಗಳಲ್ಲಿ ಆಡದಂತೆ ನಿಷೇಧಿಸುವುದು ಅಥವಾ ಎದುರಾಳಿ ತಂಡಕ್ಕೆ ಪೆನಾಲ್ಟಿ ರನ್ ದಯಪಾಲಿಸುವುದು ಈ ಅವಕಾಶ ಇದೆ. ಈಗ ಐಸಿಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಟಿ20 ಪಂದ್ಯಗಳಲ್ಲಿ ಸ್ಲೋ ಓವರ್ ರೇಟ್ ಮಾಡುವ ತಂಡದ ಫೀಲ್ಡಿಂಗ್ ಸೆಟಿಂಗ್ನಲ್ಲೇ ಬದಲಾವಣೆ ತರುವ ನಿಯಮ ಜಾರಿ ಮಾಡಿದೆ. ಅಂದರೆ ಪಂದ್ಯ ನಡೆಯುವಾಗಲೇ ದಂಡ ಅನ್ವಯ ಆಗುತ್ತದೆ.
ಏನಿದು ಹೊಸ ನಿಯಮ?
ಪಂದ್ಯದ ನಿರ್ದಿಷ್ಟ ಅವಧಿಯ ವೇಳೆ ನಿಗದಿತ ಸಂಖ್ಯೆಯಲ್ಲಿ ಓವರ್ಗಳನ್ನ ಬೌಲಿಂಗ್ ತಂಡ ಮಾಡದಿದ್ದರೆ ಬಾಕಿ ಉಳಿದ ಓವರ್ಗಳಲ್ಲಿ ಫೀಲ್ಡಿಂಗ್ ಬದಲಾವಣೆ ಮಾಡಬೇಕು. 30 ಯಾರ್ಡ್ ಸರ್ಕಲ್ನ ಆಚೆ ನಿಲ್ಲುವ ಫೀಲ್ಡರ್ಗಳಲ್ಲಿ ಒಬ್ಬರನ್ನ ಸರ್ಕಲ್ ಒಳಗೆ ನಿಲ್ಲಿಸಬೇಕು. ಅಂದರೆ, ಬ್ಯಾಟಿಂಗ್ ಪವರ್ ಪ್ಲೇ ರೀತಿಯ ಫೀಲ್ಡಿಂಗ್ ಜಾರಿಯಲ್ಲಿರಬೇಕಾಗುತ್ತದೆ. ಈ ನಿಯಮ ಈ ತಿಂಗಳಿಂದಲೇ ಜಾರಿಗೆ ಬರಲಿದೆ. ಗಮನಾರ್ಹ ಸಂಗತಿ ಎಂದರೆ, ಸದ್ಯ ಚಾಲ್ತಿ ಇರುವ ಇತರ ನಿಯಮಗಳ ಜೊತೆಗೆ ಹೆಚ್ಚುವರಿಯಾಗಿ ಈ ನಿಯಮ ಅಳವಡಿಕೆ ಆಗುತ್ತದೆ.
ಓವರ್ ರೇಟ್ ಎಂದರೆ ಏನು?
ಕ್ರಿಕೆಟ್ ನಿಯಮದ ಪ್ರಕಾರ, ಬೌಲಿಂಗ್ ಮಾಡುವ ತಂಡ ನಿರ್ದಿಷ್ಟ ಅವಧಿಯಲ್ಲಿ ಎಲ್ಲಾ ನಿಗದಿತ ಓವರ್ಗಳನ್ನ ಬೌಲ್ ಮಾಡಬೇಕು. ನಿಗದಿತ ಅವಧಿಯಲ್ಲಿ ಪಂದ್ಯದ ಕೊನೆಯ ಓವರ್ನ ಮೊದಲ ಬಾಲ್ ಅನ್ನು ಎಸೆಯಲು ಸಿದ್ಧವಾಗಿರಬೇಕು, ಅಥವಾ ಮುಗಿಸಿರಬೇಕು. ಇಲ್ಲದಿದ್ದರೆ ಅದನ್ನ ವಿಳಂಬ ಬೌಲಿಂಗ್ ಅಥವಾ ಸ್ಲೋ ಓವರ್ ರೇಟ್ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: IND vs SA: ಭಾರತ ವಿರುದ್ಧ ಸೌತ್ ಆಫ್ರಿಕಾಗೆ 7 ವಿಕೆಟ್ ಜಯಭೇರಿ
ನಿಗದಿತ ಅವಧಿಯಲ್ಲಿ ಬೌಲಿಂಗ್ ಪಡೆ ಬಾಕಿ ಉಳಿಸಿಕೊಂಡಿರುವ ಅಷ್ಟೂ ಓವರ್ಗಳಲ್ಲಿ ಫೀಲ್ಡಿಂಗ್ ಸೆಟ್ಟಿಂಗ್ನಲ್ಲಿ ಬದಲಾವಣೆ ಮಾಡಲಾಗುತ್ತದೆ. ಸರ್ಕಲ್ ಹೊರಗಿನಿಂದ ಒಬ್ಬ ಫೀಲ್ಡರ್ ಅನ್ನು ಸರ್ಕಲ್ ಒಳಗೆ ನಿಲ್ಲಿಸಬೇಕಾಗುತ್ತದೆ. ಕ್ರಿಕೆಟ್ ಪಂದ್ಯಗಳಲ್ಲಿ ಶಿಸ್ತು ತರಲು, ಸ್ಪರ್ಧಾತ್ಮಕತೆ ತರಲು ನಿರಂತರವಾಗಿ ಪ್ರಯತ್ನಿಸುವ ಐಸಿಸಿ ಕ್ರಿಕೆಟ್ ಕಮಿಟಿ ಈ ನಿಯಮ ಬದಲಾವಣೆಗಳನ್ನ ಶಿಫಾರಸು ಮಾಡಿರುವುದು ತಿಳಿದುಬಂದಿದೆ.
ಓವರ್ ಗತಿ ಎಷ್ಟಿರಬೇಕು?
* ಟೆಸ್ಟ್ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡುವ ತಂಡವು ಒಂದು ಗಂಟೆಯಲ್ಲಿ ಕನಿಷ್ಠ 15 ಓವರ್ಗಳನ್ನ ಮಾಡಬೇಕು.
* ಏಕದಿನ ಕ್ರಿಕೆಟ್ನಲ್ಲಿ ನಿಗದಿತ 50 ಓವರ್ಗಳಲ್ಲಿ 3.5, ಅಂದರೆ ಮೂರೂವರೆ ಗಂಟೆ ಅವಧಿಯಲ್ಲಿ ಮುಗಿಸಬೇಕು.
* ಟಿ20 ಕ್ರಿಕೆಟ್ನಲ್ಲಿ ನಿಗದಿತ 20 ಓವರ್ಗಳನ್ನ ಒಂದು ಗಂಟೆ 25 ನಿಮಿಷದಲ್ಲಿ ಮಾಡಬೇಕಾಗುತ್ತದೆ.
ಭಾರತ ಪಂದ್ಯವನ್ನೇ ಸೋಲಬೇಕಾಯಿತು:
ಹಿಂದೆ ಹಲವು ಬಾರಿ ನಾವು ಬೌಲಿಂಗ್ ತಂಡಕ್ಕೆ ಮ್ಯಾಚ್ನಲ್ಲೇ ದಂಡ ಹಾಕಿದ್ದನ್ನ ನೋಡಿದ್ದೇವೆ. 1999ರ ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ನಿಗದಿತ ಅವಧಿಯಲ್ಲಿ ನಾಲ್ಕು ಓವರ್ ಕಡಿಮೆ ಎಸೆದಿತ್ತು. ಆಗ ಭಾರತ ಬ್ಯಾಟಿಂಗ್ ಮಾಡುವಾಗ 4 ಓವರ್ ದಂಡ ವಿಧಿಸಲಾಯಿತು. ಅಂದರೆ ಜಿಂಬಾಬ್ವೆಯ ರನ್ ಗುರಿಯನ್ನು ಭಾರತ 4 ಕಡಿಮೆ ಓವರ್ನಲ್ಲಿ ಚೇಸ್ ಮಾಡಬೇಕಿತ್ತು. ಆ ಪಂದ್ಯವನ್ನ ಭಾರತ ಸೋತಿತು. ಅಂದರೆ ಸ್ಲೋ ಓವರ್ ರೇಟ್ ಮಾಡಿದ ಕಾರಣ ಭಾರತ ಆ ಪಂದ್ಯದಲ್ಲಿ ಸೋಲುಣ್ಣಬೇಕಾಯಿತು.
ಇದನ್ನೂ ಓದಿ: World Cup Team India: ಮಾರ್ಚ್ನಿಂದ ಮಹಿಳಾ ಓಡಿಐ ವಿಶ್ವಕಪ್: ಭಾರತ ತಂಡ ಪ್ರಕಟ, ಮಿಥಾಲಿ ಕ್ಯಾಪ್ಟನ್
ಹಾಗೆಯೇ, ಟೂರ್ನಮೆಂಟ್ಗಳಲ್ಲಿ ಸ್ಲೋ ಓವರ್ ರೇಟ್ ಮಾಡಿದ ತಂಡದ ಅಂಕಗಳನ್ನ ಕಡಿಮೆ ಮಾಡಿದ ಹಲವು ಉದಾಹರಣೆಗಳು ಉಂಟು. ನಾಯಕನಿಗೆ, ಬೌಲರ್ಗೆ ದಂಡ ವಿಧಿಸಿದ ನಿದರ್ಶನಗಳುಂಟು.
ಡ್ರಿಂಕ್ಸ್ ನಿಯಮದಲ್ಲೂ ಬದಲಾವಣೆ:
ಟಿ20 ಕ್ರಿಕೆಟ್ನಲ್ಲಿ ಐಸಿಸಿ ಮತ್ತೊಂದು ಸಣ್ಣ ನಿಯಮ ಬದಲಾವಣೆ ಮಾಡಿದೆ. ಪ್ರತಿಯೊಂದು ಇನ್ನಿಂಗ್ಸ್ನ ಮಧ್ಯೆ ಎರಡೂವರೆ ನಿಮಿಷ ಕಾಲ ಡ್ರಿಂಕ್ಸ್ ಬ್ರೇಕ್ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ಆದರೆ, ಸರಣಿಯ ಅಥವಾ ಟೂರ್ನಮೆಂಟ್ ಶುರುವಾಗುವ ಮುನ್ನವೇ ಎರಡು ತಂಡಗಳ ಸಮ್ಮತಿ ಇದಕ್ಕೆ ಅಗತ್ಯ ಇರುತ್ತದೆ.
ಐಸಿಸಿ ತಂದಿರುವ ಈ ಹೊಸ ನಿಯಮಗಳು ಜನವರಿ 16ರಂದು ಜಮೈಕಾದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಪಂದ್ಯದಿಂದ ಅನ್ವಯ ಆಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ