ಕ್ರಿಕೆಟ್ನಲ್ಲಿ ಸ್ವಿಚ್ ಹಿಟ್ ಶಾಟ್ಗಳನ್ನು ನಿಷೇಧಿಸುವಂತೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಸಲಹೆ ನೀಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರಸಕ್ತ ಸರಣಿಯಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳು ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ವಾರ್ನರ್ ಸ್ವಿಚ್ ಹಿಟ್ನ ಮೂಲಕ ಭಾರತೀಯ ಬೌಲರುಗಳನ್ನು ದಂಡಿಸುತ್ತಿದ್ದಾರೆ. ಬ್ಯಾಟ್ಸ್ಮನ್ಗಳಿಗೆ ಸಿಗುವ ಈ ಅವಕಾಶವು ನ್ಯಾಯಯುತವಾಗಿಲ್ಲ. ಹೀಗಾಗಿ ಇದನ್ನು ಬ್ಯಾನ್ ಮಾಡುವುದು ಉತ್ತಮ ಎಂದಿದ್ದಾರೆ ಚಾಪೆಲ್.
ಏನಿದು ಸ್ವಿಚ್ ಹಿಟ್ ಶಾಟ್?
ಬ್ಯಾಟ್ಸ್ಮನ್ ಚೆಂಡು ಬರುತ್ತಿದ್ದಂತೆ ತಮ್ಮ ಬ್ಯಾಟಿಂಗ್ ಶೈಲಿ ಬದಲಿಸಿ ಬಾರಿಸುವುದನ್ನು ಸ್ವಿಚ್ ಹಿಟ್ ಎನ್ನಲಾಗುತ್ತದೆ. ಅಂದರೆ ಬೌಲರ್ ಚೆಂಡು ಎಸೆದ ತಕ್ಷಣ ಬಲಗೈ ಬ್ಯಾಟ್ಸ್ಮನ್ ಸಂಪೂರ್ಣ ಎಡಗೈ ಬ್ಯಾಟ್ಸ್ಮನ್ ರೀತಿಯಲ್ಲಿ ತಮ್ಮ ಶೈಲಿ ಬದಲಿಸುವುದು. ಈ ರೀತಿಯ ಬ್ಯಾಟಿಂಗ್ ವಿಷಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಡೇವಿಡ್ ವಾರ್ನರ್ ನಿಸ್ಸೀಮರು. ಭಾರತದ ವಿರುದ್ಧ ಏಕದಿನ ಪಂದ್ಯದಲ್ಲೂ ಸ್ವಿಚ್ ಹಿಟ್ ಶಾಟ್ ಮೂಲಕ ಈ ಇಬ್ಬರು ಬ್ಯಾಟ್ಸ್ಮನ್ ಅನೇಕ ಬೌಂಡರಿ-ಸಿಕ್ಸರ್ಗಳನ್ನು ಬಾರಿಸಿದ್ದರು.
ಇದನ್ನೇ ಪ್ರಸ್ತಾಪಿಸಿರುವ ಇಯಾನ್ ಚಾಪೆಲ್, ಭಾರತದ ವಿರುದ್ಧ ಆಸ್ಟ್ರೇಲಿಯಾದ ಬ್ಯಾಟಿಂಗ್ ಅದ್ಭುತವಾಗಿತ್ತು. ಸುಲಭವಾಗಿ ರನ್ಗಳಿಸುತ್ತಿದ್ದರು. ಅದರಲ್ಲೂ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಬ್ಯಾಟಿಂಗ್ ತುಂಬಾ ವಿಶೇಷವಾಗಿತ್ತು. ಅವರ ಆಡಿದ ಕೆಲ ಹೊಡೆತಗಳನ್ನು ನಂಬಲಸಾಧ್ಯ. ಆದರೆ ಇಂತಹ ಸ್ವಿಚ್ ಹಿಟ್ ನ್ಯಾಯೋಚಿತವಲ್ಲ ಎಂದು ಚಾಪೆಲ್ ತಿಳಿಸಿದರು.
ಮೊದಲು ಗ್ಲೆನ್ ಮ್ಯಾಕ್ಸ್ವೆಲ್ ಒಂದೆರಡು ಸ್ವಿಚ್ ಹಿಟ್ಗಳನ್ನು ಹೊಡೆದರು. 2ನೇ ಏಕದಿನ ಪಂದ್ಯದಲ್ಲಿ ವಾರ್ನರ್ ಕೂಡ ಹಾಗೇ ಆಡಿದರು. ಬೌಲರ್ ಚೆಂಡನ್ನು ಎಸೆಯುವ ವೇಳೆ ಬ್ಯಾಟ್ಸ್ಮನ್ ತನ್ನ ಕೈ-ಕಾಲುಗಳ ದಿಕ್ಕನ್ನು ಬದಲಿಸಿದರೆ, ಅದು ಅಕ್ರಮ ಎಂದು ಪರಿಗಣಿಸಬೇಕಾಗುತ್ತದೆ ಎಂದು ಚಾಪೆಲ್ ಆಗ್ರಹಿಸಿದರು.
ಏಕೆಂದರೆ ಬೌಲರುಗಳು ಯಾವ ಬದಿಯಿಂದ ಬೌಲಿಂಗ್ ಮಾಡಲಿದ್ದೇವೆ ಎಂದು ಮೊದಲೇ ತಿಳಿಸಬೇಕು. ಇಲ್ಲದಿದ್ದರೆ ಅಂಪೈರ್ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿ ಬ್ಯಾಟ್ಸ್ಮನ್ ಏಕಾಏಕಿ ಬ್ಯಾಟಿಂಗ್ ಶೈಲಿ ಬದಲಿಸಿದರೆ ತಪ್ಪಿಲ್ಲ. ಇದು ಏಕಮುಖ ನಿಯಮವಾಗಿದೆ. ಹಾಗಾಗಿ ಇದನ್ನು ನ್ಯಾಯಯುತ ಎನ್ನಲಾಗುವುದಿಲ್ಲ ಎಂದು ಚಾಪೆಲ್ ವಿವರಿಸಿದರು.
ಅಲ್ಲದೆ ಬಲಗೈ ಬ್ಯಾಟ್ಸ್ಮನ್ನ ಶೈಲಿಗೆ ಅನುಗುಣವಾಗಿ ನಾಯಕ ಫೀಲ್ಡಿಂಗ್ ನಿಲ್ಲಿಸಿರುತ್ತಾರೆ. ಆದರೆ ಬಲಗೈ ದಾಂಡಿಗ ತನ್ನ ಶೈಲಿಯನ್ನು ಎಡಗೈ ಬ್ಯಾಟ್ಸ್ಮನ್ ಆಗಿ ಬದಲಾಗುವ ಮೂಲಕ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಾರೆ. ಬ್ಯಾಟ್ಸ್ಮನ್ ಸ್ವಿಚ್ ಹಿಟ್ ಆಡುವುದಾಗಿ ಮೊದಲೇ ತಿಳಿದರೆ ಇಲ್ಲಿ ಸಮಸ್ಯೆ ಇಲ್ಲ. ಆದರೆ ಚೆಂಡು ಬರುವ ಮುನ್ನ ಶೈಲಿ ಬದಲಾಯಿಸಿ ಲಾಭ ಪಡೆಯುವುದು ಎಷ್ಟು ಸರಿ. ಕ್ರಿಕೆಟ್ನ ನಿಯಮಗಳನ್ನು ರಚಿಸಿರುವವರು ಇದು ಯಾವ ರೀತಿಯ ನ್ಯಾಯ ಎಂದು ವಿವರಿಸಲಿ ಎಂದು ಇಯಾನ್ ಚಾಪೆಲ್ ಆಗ್ರಹಿಸಿದರು.
ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ RCB..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ