ಮಯಂಕ್ ಮರಳಿ ಫಾರ್ಮ್ ಕಂಡುಕೊಳ್ಳುವಂತೆ ಮಾಡಿತ್ತು ದ್ರಾವಿಡ್ ಇತ್ತ ಈ ಸಲಹೆ

Rahul Dravid Tips to Mayank Agarwal- ಟೆಸ್ಟ್ ಕ್ರಿಕೆಟ್​ನಲ್ಲಿ ಕಳೆದ ಒಂದು ವರ್ಷದಿಂದ ರನ್ ಗಳಿಸಲು ಪರದಾಡುತ್ತಿದ್ದ ಮಯಂಕ್ ಅವರು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಆಟ ಆಡಲು ಕಾರಣವಾಗಿದ್ದು ರಾಹುಲ್ ದ್ರಾವಿಡ್ ಇತ್ತ ಸಲಹೆ.

ಮಯಂಕ್ ಅಗರ್ವಾಲ್

ಮಯಂಕ್ ಅಗರ್ವಾಲ್

 • Share this:
  ಬೆಂಗಳೂರು: ಕರ್ನಾಟಕದ ಮನೀಶ್ ಪಾಂಡೆ ಮತ್ತು ಮಯಂಕ್ ಅಗರ್ವಾಲ್ ಅವರಿಬ್ಬರದ್ದು ಟೀಮ್ ಇಂಡಿಯಾ ಜೊತೆ ಇರುವುದು ಒಂದು ರೀತಿ ತೂಗುಯ್ಯಾಲೆ ಸಂಬಂಧ. ಟೀಮ್​ಗೆ ಆಗಾಗ ಒಳಗೆ ಬರುವುದು, ಹೊರಗೆ ಹೋಗುವುದು ನಡೆದೇ ಇದೆ. ಮನೀಶ್ ಪಾಂಡೆ ಐಪಿಎಲ್ ಇತಿಹಾಸದಲ್ಲಿ ಶತಕ ಭಾರಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿದ್ದಾರೆ. ಟೀಮ್ ಇಂಡಿಯಾಗೆ ಕೊಟ್ಟ ಅವಕಾಶದಲ್ಲಿ ವಿಫಲವಾಗಿದ್ದು ಕಡಿಮೆ. ಆದರೂ ಅವರು ಪದೇಪದೇ ಅವಕಾಶವಂಚಿತರೇ. ಇನ್ನು, ಮಯಂಕ್ ಅಗರ್ವಾಲ್ ಅವರದ್ದು ಇಂಥದ್ದೇ ಸ್ಥಿತಿ. ಆಸ್ಟ್ರೇಲಿಯಾದಲ್ಲಿ 2018ರಲ್ಲಿ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಭಾರಿಸಿ ಗಮನ ಸೆಳೆದರು. 2019ರಲ್ಲಿ ಭಾರತದಲ್ಲಿ ಎರಡು ದ್ವಿಶತಕಗಳನ್ನ ಭಾರಿಸಿ ತಮ್ಮ ಅಸಾಮಾನ್ಯ ಸಾಮರ್ಥ್ಯ ತೋರ್ಪಡಿಸಿದರು.

  ಆದರೆ, 2020ರಲ್ಲಿ ಅವರು ಫಾರ್ಮ್ ಕಳೆದುಕೊಂಡರು. ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಮತ್ತು ಅರ್ಧಶತಕ ಗಳಿಸುವ ಮೂಲಕ ಅವರು ಭರ್ಜರಿಯಾಗಿ ಫಾರ್ಮ್​ಗೆ ಮರಳಿದ್ದಾರೆ. ಇದಕ್ಕೂ ಮುನ್ನ 2020ರಿಂದ ನಡೆದ 6 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 210 ರನ್ ಮಾತ್ರ. ನ್ಯೂಜಿಲೆಂಡ್ ವಿರುದ್ಧ ಕಾನಪುರ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಂಕ್ ಹೆಚ್ಚು ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಮುಂಬೈ ಟೆಸ್ಟ್ ಪಂದ್ಯಕ್ಕೆ ಅವರನ್ನ ಆಯ್ಕೆ ಮಾಡುವುದೇ ಅನುಮಾನವೆನಿಸಿತ್ತು. ವಿರಾಟ್ ಕೊಹ್ಲಿಗಾಗಿ ಅವರು ಸ್ಥಾನ ಬಿಟ್ಟುಕೊಡಬೇಕಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಅಜಿಂಕ್ಯ ರಹಾನೆ ಗಾಯಗೊಂಡಿದ್ದರಿಂದ ಮಯಂಕ್ ಅವರಿಗೆ ಆಡಲು ಅವಕಾಶ ಸಿಕ್ಕಿತು. ಅವರು ಮೊದಲ ಇನ್ನಿಂಗ್ಸಲ್ಲಿ 150 ರನ್ ಭಾರಿಸುವ ಮೂಲಕ ತನ್ನನ್ನ ಕಡೆಗಣಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದರು.

  ಮಯಂಕ್ ಅಗರ್ವಾಲ್ ಅವರಿಗೆ ರಾಹುಲ್ ಕೊಟ್ಟಿದ್ದ ಸಲಹೆ ವರ್ಕೌಟ್ ಆಗಿತ್ತು:

  ಹಿಂದಿನ ಟೆಸ್ಟ್ ಪಂದ್ಯಗಳಲ್ಲಿ ವಿಫಲವಾಗಿದ್ದ ಮಯಂಕ್ ಅಗರ್ವಾಲ್ ಅವರಿಗೆ ಐಪಿಎಲ್​ನಲ್ಲಿ ಒಳ್ಳೆಯ ಆಟ ಆಡಿದ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ದ ಸರಣಿಯಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಆದರೆ, ಟೆಸ್ಟ್ ಕ್ರಿಕೆಟ್​ನಲ್ಲಿ ಮತ್ತೆ ಲಯಕ್ಕೆ ಮರಳುವುದು ಮಯಂಕ್​ಗೆ ಸವಾಲಿನ ಕೆಲಸವಾಗಿತ್ತು. ಆಗ ಅವರ ನೆರವಿಗೆ ಬಂದದ್ದು ಟೀಮ್ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್.

  ಇದನ್ನೂ ಓದಿ: ಎಜಾಜ್ ಸಾಧನೆ ಹಿಂದೆ ಮಾಜಿ ಕರ್ನಾಟಕ ಕ್ರಿಕೆಟಿಗ; ಸ್ನೇಹ, ಗುರು-ಶಿಷ್ಯರಂತಿದೆ ಅವರಿಬ್ಬರ ಸಂಬಂಧ

  ಸ್ಪೋರ್ಟ್ಸ್ ಕೀಡಾ ವೆಬ್​ಸೈಟ್ ಜೊತೆ ಮಾತನಾಡುತ್ತಿದ್ದ ಮಯಂಕ್ ಅಗರ್ವಾಲ್, ತಮ್ಮ ಆತ್ಮವಿಶ್ವಾಸ ಮರಳಿ ಬರಲು ರಾಹುಲ್ ದ್ರಾವಿಡ್ ಅವರ ಸಲಹೆ ಹೇಗೆ ಕಾರಣ ಆಯ್ತು ಎಂಬ ವಿಚಾರವನ್ನ ತಿಳಿಸಿದ್ದಾರೆ. ನನ್ನ ಮಾನಸಿಕ ಶಕ್ತಿ ಮತ್ತು ಭಾವೋದ್ವೇಗವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ದ್ರಾವಿಡ್ ಸಲಹೆ ಕೊಟ್ಟರು ಎಂದಿದ್ದಾರೆ ಮಯಂಕ್.

  “ನೀನು ಹೆಚ್ಚು ರನ್ ಗಳಿಸಲು ಆಗಿಲ್ಲ ಎಂದು ನನಗೆ ಗೊತ್ತು. ನಿನ್ನ ಭಾವನೆ ಮತ್ತು ಮಾನಸಿಕ ಶಕ್ತಿಯನ್ನ ನಿಯಂತ್ರಣದಲ್ಲಿಟ್ಟುಕೋ. ಯೋಚನೆಗಳು ಪ್ರವಹಿಸಿ ಬರುತ್ತವೆ. ಅವುಗಳ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬೇಡ ಎಂದು ಸರಣಿಗೆ ಮುನ್ನ ದ್ರಾವಿಡ್ ತಿಳಿಸಿದರು.”

  ”ಅದು ಮಾನಸಿಕತೆ ವಿಚಾರವಾಯಿತು. ಆದರೆ, ಬ್ಯಾಟಿಂಗ್​ನ ತಾಂತ್ರಿಕ ಅಂಶದ ಬಗ್ಗೆ ಒಂದು ಸಲಹೆ ನೀಡಿದರು. ನೀನು ಬಳಸುತ್ತಿರುವ ಇದೇ ಟೆಕ್ನಿಕ್ ನಿನಗೆ ಹಿಂದೆ ಬಹಳ ರನ್​ಗಳನ್ನ ಕೊಟ್ಟಿದೆ. ಹೀಗಾಗಿ, ಆ ಟೆಕ್ನಿಕ್ ಮುಂದುವರಿಸು. ರನ್ ತಾನಾಗೇ ಬರುತ್ತೆ. ನಿನಗೆ ನೆರವಾದ ಅಂಶಗಳನ್ನ ಬಿಡಬೇಡ ಎಂದರು. ಅದೃಷ್ಟಕ್ಕೆ ಮುಂದಿನ ಟೆಸ್ಟ್ ಪಂದ್ಯದಲ್ಲಿ ರನ್​ಗಳು ಬಂದವು” ಎಂದು ಮಯಂಕ್ ಅಗರ್ವಾಲ್ ಹೇಳಿದ್ಧಾರೆ.
  Published by:Vijayasarthy SN
  First published: