ನೀವು ಗೂಗಲ್ಗೆ ಹೋಗಿ Rashid Khan Wife ಎಂದು ಸರ್ಚ್ ಮಾಡಿ ನೋಡಿ. ಅಲ್ಲಿ ತೋರಿಸೋ ಉತ್ತರ ನಿಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳಿಸದೇ ಇರದು. ಏಕೆಂದರೆ, ರಾಶೀದ್ ಖಾನ್ ಪತ್ನಿ ಯಾರೆಂದು ಸರ್ಚ್ ಮಾಡಿದರೆ ನಿಮಗೆ ಅಲ್ಲಿ ಸಿಗುತ್ತಿರುವ ಉತ್ತರ ಅನುಷ್ಕಾ ಶರ್ಮಾ ಅವರದ್ದು. ಅರೆ ಇದೇಕೆ ಹೀಗೆ? ಈ ಎಡವಟ್ಟು ಆಗಿದ್ದೇಕೆ? ಗೂಗಲ್ ಹೀಗೆ ತೋರಿಸೋಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಬರದೆ ಇರದು. ಇದಕ್ಕೆ ಇಲ್ಲಿದೆ ಉತ್ತರ.
ರಶೀದ್ ಖಾನ್ ಹುಟ್ಟಿದ್ದು 1998ರಲ್ಲಿ. ಇವರು ಅಫ್ಘಾನಿಸ್ತಾನ ತಂಡದ ಉಪನಾಯಕ ಕೂಡ ಹೌದು. 2018ರಲ್ಲಿ ಭಾರತದ ವಿರುದ್ಧ ನಡೆದ ಅಫ್ಘಾನಿಸ್ತಾನದ ಮೊದಲ ಟೆಸ್ಟ್ ಮ್ಯಾಚ್ನಲ್ಲಿ ರಶೀದ್ ಖಾನ್ ಕೂಡ ಮೈದಾನಕ್ಕೆ ಇಳಿದಿದ್ದರು. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯವೊಂದಕ್ಕೆ ರಶೀದ್ ನಾಯಕನಾಗಿದ್ದರು. ಈ ಮೂಲಕ ಅತಿ ಸಣ್ಣ ವಯಸ್ಸಿಗೆ ಟೆಸ್ಟ್ ನಾಯಕತ್ವ ವಹಿಸಿಕೊಂಡ ಮೊದಲ ಆಟಗಾರ ಎನ್ನುವ ಖ್ಯಾತಿ ರಶೀದ್ಗೆ ಸಲ್ಲುತ್ತದೆ.
ಇನ್ನು, ಅನುಷ್ಕಾ ಶರ್ಮಾ ಬಾಲಿವುಡ್ನಲ್ಲಿ ಮಿಂಚಿದವರು. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಅವರು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ವರಿಸಿದ್ದರು. ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದ ಈ ಜೋಡಿ ಈಗ ಮಗುವಿನ ನಿರೀಕ್ಷೆಯಲ್ಲಿದೆ. ಹಾಗಾದರೆ ಅನುಷ್ಕಾ ಶರ್ಮಾ, ರಶೀದ್ ಪತ್ನಿ ಎಂದು ತೋರಿಸುತ್ತಿರುವುದೇಕೆ?
2018ರಲ್ಲಿ ಇನ್ಸ್ಟಾಗ್ರಾಂನಲ್ಲಿ ಹಿಂಬಾಲಕರ ಜೊತೆ ಮಾತನಾಡುವಾಗ ರಶೀದ್ ಖಾನ್ ಬಳಿ ಅಭಿಮಾನಿಗಳು, 'ನಿಮ್ಮ ಫೇವರಿಟ್ ಬಾಲಿವುಡ್ ಹೀರೋಯಿನ್ ಯಾರು' ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ರಶೀದ್, ಅನುಷ್ಕಾ ಶರ್ಮಾ ಹಾಗೂ ಪ್ರೀತಿ ಜಿಂಟಾ ಹೆಸರನ್ನು ಹೇಳಿದ್ದರು. ಇದಾದ ಬೆನ್ನಲ್ಲೇ ಅನೇಕ ಮಾಧ್ಯಮಗಳು ರಾಶೀದ್ ಖಾನ್ ಅವರ ಫೇವರಿಟ್ ಬಾಲಿವುಡ್ ನಟಿ ಅನುಷ್ಕಾ ಎಂದು ಸುದ್ದಿ ಮಾಡಿದ್ದರು. ಇವರಿಬ್ಬರ ನಡುವೆ ಇರುವ ಕನೆಕ್ಷನ್ ಇಷ್ಟೇ. ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಗೂಗಲ್, ರಶೀದ್ ಪತ್ನಿ ಅನುಷ್ಕಾ ಎಂದು ತೋರಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ