news18-kannada Updated:February 23, 2021, 6:30 PM IST
Devon Conway
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ಗಾಗಿ ತಂಡಗಳು ಪ್ರಕಟಗೊಂಡಿವೆ. ಫೆ. 18 ರಂದು ಚೆನ್ನೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹಲವು ಆಟಗಾರರಿಗೆ ಅವಕಾಶ ಲಭಿಸಿದರೆ, ಅನೇಕ ಸ್ಟಾರ್ ಆಟಗಾರರು ಅವಕಾಶ ವಂಚಿತರಾಗಿದ್ದರು. ಅದರಲ್ಲಿ ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಕೂಡ ಒಬ್ಬರು. ಆದರೆ ಇದೀಗ ಕಾನ್ವೇ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ನ ಕಾನ್ವೇ ಕೇವಲ 59 ಎಸೆತಗಳಲ್ಲಿ ಅಜೇಯ 99 ರನ್ ಸಿಡಿಸಿದ್ದಾರೆ. ಅಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇತ್ತ ಹರಾಜು ಮುಕ್ತಾಯ ಬೆನ್ನಲ್ಲೇ ಟಿ20 ಯಲ್ಲಿ ಕಾನ್ವೇ ಅಬ್ಬರ ಶುರುವಾಗಿದೆ. ಕಿವೀಸ್ ಆಟಗಾರನ ಈ ಭರ್ಜರಿ ಬ್ಯಾಟಿಂಗ್ಗೆ ಟೀಮ್ ಇಂಡಿಯಾ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನ್, ಡೆವೊನ್ ಕಾನ್ವೇ, ಕೇವಲ 4 ದಿನಗಳು ಲೇಟ್ ಆಗಿಬಿಡ್ತು...ಅದ್ಭುತ ಆಟ ಎಂದು ಬರೆದುಕೊಂಡಿದ್ದಾರೆ. ಅಶ್ವಿನ್ ಈ ರೀತಿಯಲ್ಲಿ ಟ್ವೀಟ್ ಮಾಡಲು ಮುಖ್ಯ ಕಾರಣ ಐಪಿಎಲ್ನಲ್ಲಿ ಕಾನ್ವೇ ಹರಾಜಾಗದಿರುವುದು. ಇದೇ ಆಟ ನಾಲ್ಕು ದಿನಗಳು ಮುಂಚಿತವಾಗಿ ಮೂಡಿಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂಬಾರ್ಥದಲ್ಲಿ ಅಶ್ವಿನ್ ಟ್ವಿಟಿಸಿದ್ದಾರೆ.
ಕ್ರೈಸ್ಟ್ಚರ್ಚ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ 53 ರನ್ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ನಾಲ್ಕು ಓವರ್ಗಳಲ್ಲಿ ವೇಗದ ಬೌಲರ್ಗಳು ಕೂಡ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ್ದರು. ಎಡಗೈ ವೇಗದ ಬೌಲರ್ ಡೇನಿಯಲ್ ಸ್ಯಾಮ್ಸ್ ಮೊದಲ ಓವರ್ನಲ್ಲಿ ಮಾರ್ಟಿನ್ ಗುಪ್ಟಿಲ್ ಅವರನ್ನು ಔಟ್ ಮಾಡಿದರೆ, ಜೇ ರಿಚರ್ಡ್ಸನ್ ವಿಕೆಟ್ಕೀಪರ್ ಟಿಮ್ ಸಿಫೆರ್ಟ್ರನ್ನು 1 ರನ್ಗೆ ಪೆವಿಲಿಯನ್ ಕಡೆ ಕಳುಹಿಸಿದರು. ಇನ್ನು ನಾಲ್ಕನೇ ಓವರ್ನಲ್ಲಿ ನಾಯಕ ಕೇನ್ ವಿಲಿಯಮ್ಸನ್ (12) ಅವರಿಗೂ ಡೇನಿಯಲ್ ಸ್ಯಾಮ್ಸ್ ಪೆವಿಲಿಯನ್ ಹಾದಿ ತೋರಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಎಡಗೈ ಬ್ಯಾಟ್ಸ್ಮನ್ ಡೆವೊನ್ ಕಾನ್ವೇ ಹಾಗೂ ಗ್ಲೆನ್ ಫಿಲಿಪ್ಸ್ ನಾಲ್ಕನೇ ವಿಕೆಟ್ಗೆ 74 ಎಸೆತಗಳಲ್ಲಿ 52 ರನ್ಗಳ ಜೊತೆಯಾಟವಾಡಿದರು. ಅಲ್ಲದೆ ನ್ಯೂಜಿಲೆಂಡ್ 8.5 ಓವರ್ಗಳಲ್ಲಿ ತಮ್ಮ 50 ರನ್ಗಳನ್ನು ಪೂರ್ಣಗೊಳಿಸಿತು. ಕಾನ್ವೇ 36 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು.
10 ಓವರ್ಗಳ ನಂತರ ಗೇರ್ ಬದಲಿಸಿದ ಕಾನ್ವೇ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 13.2 ಓವರ್ಗಳಲ್ಲಿ ನ್ಯೂಜಿಲೆಂಡ್ ತಂಡದ ಸ್ಕೋರ್ 100 ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಫಿಲಿಪ್ಸ್ 30 ರನ್ಗಳಿಸಿ ಔಟ್ ಆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾನ್ವೇ, ಜೇಮ್ಸ್ ನೀಶಮ್ ಜೊತೆಗೂಡಿ ಕೊನೆಯ 20 ಎಸೆತಗಳಲ್ಲಿ 44 ರನ್ ಚಚ್ಚಿದರು. ಅಲ್ಲದೆ 59 ಎಸೆತಗಳಲ್ಲಿ ಅಜೇಯ 99 ರನ್ಗಳಿಸುವ ಮೂಲಕ ಕಾನ್ವೇ ನ್ಯೂಜಿಲೆಂಡ್ ತಂಡದ ಮೊತ್ತವನ್ನು 184 ಕ್ಕೆ ತಂದು ನಿಲ್ಲಿಸಿದರು. ಕಾನ್ವೇಯ ಈ ಸ್ಪೋಟಕ ಇನಿಂಗ್ಸ್ನಲ್ಲಿ 3 ಸಿಕ್ಸರ್ ಹಾಗೂ 10 ಬೌಂಡರಿಗಳು ಒಳಗೊಂಡಿದ್ದವು.ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 53 ರನ್ಗಳ ಹೀನಾಯ ಸೋಲನುಭವಿಸಿತು.
Published by:
zahir
First published:
February 23, 2021, 6:30 PM IST