ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸದಾ ಟೀಕಾಸ್ತ್ರ ಪ್ರಯೋಗಿಸುವ ಭಾರತ ತಂಡ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, ಇದೀಗ ಕೊಹ್ಲಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಗಮನ ಸೆಳೆದಿದ್ದಾರೆ. ಹೌದು, ಕೆಲ ದಿನಗಳ ಹಿಂದೆಯಷ್ಟೇ ಕೊಹ್ಲಿ ನಾಯಕತ್ವದ ಬಗ್ಗೆ ಗಂಭೀರ್ ಪ್ರಶ್ನೆಗಳನ್ನೆತ್ತಿದ್ದರು. ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ರೀತಿ ಬಗ್ಗೆ ಗೌತಿ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.
ಆದರೆ ಬುಧವಾರ ಕ್ಯಾನ್ಬೆರಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ನಿರ್ಮಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ 23 ರನ್ ಬಾರಿಸುವುದರೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದ್ದರು. ಅದು ಕೂಡ 241 ಇನಿಂಗ್ಸ್ಗಳಲ್ಲಿ ಎಂಬುದು ವಿಶೇಷ. ಈ ಮೂಲಕ 300 ಇನಿಂಗ್ಸ್ಗಳಲ್ಲಿ 12 ಸಾವಿರ ರನ್ ಬಾರಿಸಿದ ವಿಶ್ವ ದಾಖಲೆ ಬರೆದಿದ್ದ ಸಚಿನ್ ರೆಕಾರ್ಡ್ನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದರು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಅವರು ದೇಶಕ್ಕೆ ನೀಡಿರುವ ಕೊಡುಗೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ನೀವು ಏನು ಬೇಕಾದರೂ ತೆಗೆದುಕೊಳ್ಳಬಹುದು. ನಿಮಗೆ ಬೇಕಾಗಿರುವುದನ್ನು ಮಾಡಬಹುದು. ಆದರೆ ನೀವು ಕೊನೆಯ ರನ್ ಗಳಿಸಿ ಹೊಟೇಲ್ ಕೊಠಡಿಗೆ ಮರಳಿದಾಗ ದೇಶಕ್ಕಾಗಿ ಏನನ್ನಾದರೂ ಮಾಡಿದ್ದೀನಿ ಎಂದು ತೃಪ್ತಿಪಟ್ಟುಕೊಳ್ಳುವುದು ಇದೆಯಲ್ವಾ, ಅದು ವಿಶ್ವದಲ್ಲಿಯೇ ಅತ್ಯುತ್ತಮ ಭಾವನೆಯಾಗಿರುತ್ತದೆ ಎಂದು ಗಂಭೀರ್ ಹೇಳಿದರು.
ಆತನ ಎಲ್ಲಾ ಪರಿಶ್ರಮ ವಿರಾಟ್ ಕೊಹ್ಲಿ ಏನೆಂಬುದನ್ನು ತೋರಿಸಿದೆ. ಅವರಿಗೆ ನನ್ನ ಕಡೆಯಿಂದ ಹ್ಯಾಟ್ಸ್ ಆಫ್. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ಶತಕಗಳೊಂದಿಗೆ 20 ಸಾವಿರಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ ಎಂದು ಗೌತಮ್ ಗಂಭೀರ್ ಕೊಹ್ಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ RCB..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ