ಬೆಂಗಳೂರು: ದುಬೈನಲ್ಲಿ ಪುನಾರಂಭಗೊಳ್ಳಲಿರುವ ಐಪಿಎಲ್ ಟೂರ್ನಿಗೆ ಆರ್ಸಿಬಿಯಲ್ಲಿ ಹೊಸ ಕಳೆಗಟ್ಟುತ್ತಿದೆ. ಐವರು ಆಟಗಾರರು ತೊರೆದೊಹೋಗಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕ್ರಿಕೆಟ್ ತಂಡಕ್ಕೆ ಮೂವರು ಹೊಸ ಆಟಗಾರರು ಸೇರ್ಪಡೆಯಾಗಿದ್ದಾರೆ. ಶ್ರೀಲಂಕಾದ ಹೊಸ ಸ್ಪಿನ್ ಮಾಂತ್ರಿಕನಾಗಿ ಖ್ಯಾತವಾಗಿರುವ ವನಿಂಡು ಹಸರಂಗ ಅವರನ್ನ ಬೆಂಗಳೂರು ತಂಡ ಸೆಳೆದುಕೊಂಡಿದೆ. ಲಂಕಾದ ಮತ್ತೊಬ್ಬ ಅಟಗಾರ ದುಷ್ಮಂತಾ ಚಮೀರಾ ಹಾಗೂ ಸಿಂಗಾಪುರ ಸಂಜಾತ ಆಸ್ಟ್ರೇಲಿಯಾ ಕ್ರಿಕೆಟಿಗ ಟಿಮ್ ಡೇವಿಡ್ ಅವರು ಆರ್ಸಿಬಿ ಸೇರಿರುವ ಇನ್ನಿಬ್ಬರು ಆಟಗಾರರು. ನ್ಯೂಜಿಲೆಂಡ್ನ ಫಿನ್ ಅಲೆನ್ ಮತ್ತು ಸ್ಕಾಟ್ ಕುಗ್ಗೆಲಿಜಿನ್ ಹಾಗೂ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸ್, ಡೇನಿಯಲ್ ಸ್ಯಾಮ್ಸ್ ಮತ್ತು ಅಡಂ ಜಂಪಾ ಅವರು ವಿವಿಧ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ತಂಡವನ್ನು ಬಿಟ್ಟುಹೋಗಿದ್ದಾರೆ. ಅಡಂ ಜಂಪಾ ಅವರು ಬೆಂಗಳೂರು ತಂಡದ ಸ್ಪಿನ್ ವಿಭಾಗಕ್ಕೆ ಬಲ ನೀಡಿದ್ದರು. ಈಗ ವನಿಂಡು ಹಸರಂಗ ಅವರು ಆ ಸ್ಥಾನವನ್ನು ತುಂಬಲಿದ್ದಾರೆ.
ರಾಯಲ್ ಚಾಲೆಂಜರ್ಸ್ ತಂಡದ ಬೌಲಿಂಗ್ ವಿಭಾಗ ಈಗಾಗಲೇ ಬಹಳಷ್ಟು ಬಲಿಷ್ಠವಾಗಿದೆ. ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕೈಲೆ ಜೇಮೀಸನ್, ನವದೀಪ್ ಸೈನಿ ಅವರು ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿಗೆ ಶಕ್ತಿ ತುಂಬಿದ್ದಾರೆ. ಈಗ ಹಸರಂಗ ಆಗಮನದೊಂದಿಗೆ ಬೆಂಗಳೂರು ಪಡೆ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಸ್ಪಿನ್ನರ್ ಹಸರಂಗ ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದಿದ್ದರು. ಇವರು ಅನೇಕ ಪಂದ್ಯಗಳನ್ನ ಲಂಕಾಗೆ ಗೆಲ್ಲಿಸಿಕೊಟ್ಟಿದ್ದಾರೆ. ಬ್ಯಾಟಿಂಗ್ನಲ್ಲೂ ಇವರು ಸೈ ಎನಿಸಿದ್ದಾರೆ. ಈ ಅಪ್ರತಿಮ ಆಲ್ರೌಂಡರ್ ಆಗಮನವು ರಾಯಲ್ ಚಾಲೆಂಜರ್ಸ್ ಪಡೆಯ ಚೊಚ್ಚಲ ಪ್ರಶಸ್ತಿ ಕನಸು ಈಡೇರಲು ಎಡೆ ಮಾಡಿಕೊಡುವ ನಿರೀಕ್ಷೆ ಇದೆ.
ಹಸರಂಗ ಜೊತೆಗೆ ಆರ್ಸಿಬಿ ಸೇರಿಕೊಳ್ಳುತ್ತಿರುವ ಲಂಕಾದ ಇನ್ನೊಬ್ಬ ಆಟಗಾರ ಚಮೀರಾ ಕೂಡ ಅಪ್ರತಿಮ ಬೌಲರ್. ವೇಗದ ಬೌಲರ್ ಫಿನ್ ಅಲೆನ್ ಅವರ ಸ್ಥಾನವನ್ನು ತುಂಬಲೆಂದು ಚಮೀರಾ ಅವರನ್ನ ಆಯ್ಕೆ ಮಾಡಲಾಗಿದೆ. ಲೈನ್ ಅಂಡ್ ಲೆಂತ್ ಇವರ ಪ್ರಮುಖ ಶಕ್ತಿ. ವಿಕೆಟ್ ತೆಗೆಯಬಲ್ಲ ಬೌಲರ್ ಆಗಿದ್ದಾರೆ.
ಇದನ್ನೂ ಓದಿ: AFC Cup- ಎಎಫ್ಸಿ ಕಪ್ನಿಂದ ಬೆಂಗಳೂರು ಔಟ್; ಕ್ವಾರ್ಟರ್ಫೈನಲ್ ಅಂಚಿನಲ್ಲಿ ಮೋಹನ್ ಬಗಾನ್
ಇನ್ನು, ಆಸ್ಟ್ರೇಲಿಯಾದ ಟಿಮ್ ಡೇವಿಡ್ ಉತ್ತಮ ಬ್ಯಾಟ್ಸ್ಮನ್. ತಮ್ಮ ದೇಶದ ಬಿಗ್ ಬ್ಯಾಷ್ ಲೀಗ್ನಲ್ಲಿ ಸಾಕಷ್ಟು ಮಿಂಚಿದ್ಧಾರೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ 45 ರನ್ ಸರಾಸರಿಯಲ್ಲಿ 166.66 ಸ್ಟ್ರೇಕ್ ರೇಟ್ನಲ್ಲಿ ಅವರು ರನ್ ಗಳಿಸಿ ಸೈ ಎನಿಸಿದ್ದಾರೆ. ಎಬಿ ಡೀವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಕೈಲೆ ಜೇಮೀಸನ್, ಡೇನಿಯಲ್ ಕ್ರಿಸ್ಟಿಯನ್ ಮೊದಲಾದ ವಿದೇಶೀ ದೈತ್ಯರ ಸಾಲಿನಲ್ಲಿರುವ ಟಿಮ್ ಡೇವಿಡ್ ಅವರಿಂದ ಈಗ ಆರ್ಸಿಬಿಗೆ ಇನ್ನೂ ಹೆಚ್ಚು ಆಪ್ಷನ್ಗಳು ಸಿಕ್ಕಂತಾಗುತ್ತದೆ.
ಭಾರತದಲ್ಲಿ ನಡೆಯುತ್ತಿದ್ದ ಈ ಬಾರಿಯ ಐಪಿಎಲ್ ಟೂರ್ನಿ ಕೋವಿಡ್ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ದುಬೈನಲ್ಲಿ ಸೆಪ್ಟೆಂಬರ್ ಮೂರನೇ ವಾರದಂದು ಟೂರ್ನಿ ಪುನಾರಂಭವಾಗಲಿದೆ. ಸೆಪ್ಟೆಂಬರ್ 20ರಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಎದುರುಗೊಳ್ಳಲಿದೆ. ಸೆ. 24 ಚೆನ್ನೈ ಸೂಪರ್ ಕಿಂಗ್ಸ್, ಸೆ. 26 ರಾಜಸ್ಥಾನ್ ರಾಯಲ್ಸ್, ಅ. 3 ಪಂಜಾಬ್ ಕಿಂಗ್ಸ್, ಅ. 6 ಹೈದರಾಬಾದ್ ಸನ್ ರೈಸರ್ಸ್, ಅ. 8 ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ಬೆಂಗಳೂರು ಆಡಲಿದೆ. ಈವರೆಗೆ ಏಳು ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಪಡೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಹಿಂದಿನ ಬಹುತೇಕ ಋತುಗಳಿಗಿಂತ ಈ ಬಾರಿ ಆರ್ಸಿಬಿ ಬಲಿಷ್ಠವಾಗಿ ತೋರುತ್ತಿದೆ. ಇದೂವರೆಗೂ ನನಸಾಗದ ಪ್ರಶಸ್ತಿಯ ಕನಸು ಈ ಬಾರಿ ಈಡೇರುವ ಸಾಧ್ಯತೆಯಂತೂ ತುಸು ದಟ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ