ಪುಣೆಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದ ವೇಳೆ ನಡೆದ ಘಟನೆಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 103 ರನ್ಗಳ ಜೊತೆಯಾಟವಾಡಿದರು. 56 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 67 ರನ್ ಬಾರಿಸಿ ಶಿಖರ್ ಧವನ್ ಮಿಂಚಿದರು. ಇನ್ನು ರೋಹಿತ್ ಶರ್ಮಾ 37 ರನ್ಗಳಿಸಿದರೆ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ 6ನೇ ವಿಕೆಟ್ಗೆ 99 ರನ್ಗಳನ್ನು ಪೇರಿಸಿದರು. 62 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 78 ರನ್ಗಳಿಸಿದ್ದ ಪಂತ್, ಸ್ಯಾಮ್ ಕರ್ರನ್ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಮುಖ ಮಾಡಿದರು.
ಮತ್ತೊಂದು ಬದಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಇದಾಗಿ ಕೆಲ ಹೊತ್ತಿನಲ್ಲೇ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 64 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಪಾಂಡ್ಯ, ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆದರು. ಕೃನಾಲ್ ಪಾಂಡ್ಯ ಜೊತೆಗೂಡಿ 8ನೇ ವಿಕೆಟ್ಗೆ 45 ರನ್ಗಳ ಜೊತೆಯಾಟವಾಡಿದ ಶಾರ್ದುಲ್ ಠಾಕೂರ್ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಇದಾಗ್ಯೂ 48.2 ಓವರ್ನಲ್ಲಿ ಟೀಮ್ ಇಂಡಿಯಾ 329 ರನ್ಗೆ ಸರ್ವಪತನ ಕಂಡಿತು.
330 ರನ್ಗಳ ಗುರಿ ಪಡೆದ ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾಗಿದ್ದರು. ತಂಡದ ಮೊತ್ತ 30 ಆಗುವಷ್ಟರಲ್ಲಿ ಜೇಸನ್ ರಾಯ್ ಹಾಗೂ ಜಾನಿ ಬೈರ್ಸ್ಟೋವ್ಗೆ ಭುವಿ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಬೆನ್ ಸ್ಟೋಕ್ಸ್ ನೀಡಿದ ಸುಲಭ ಕ್ಯಾಚ್ನ್ನು ಹಾರ್ದಿಕ್ ಪಾಂಡ್ಯ ಕೈಚೆಲ್ಲಿದ್ದರು.
ಪಾಂಡ್ಯ ಕೈಯಿಂದ ಚೆಂಡು ನೆಲಕ್ಕೆ ಬೀಳುತ್ತಿದ್ದಂತೆ ಸ್ಟೋಕ್ಸ್ ನಿರಾಳರಾದರು. ಆದರೆ ಅತ್ತ ರೋಹಿತ್ ಶರ್ಮಾ ತಲೆ ಮೇಲೆ ಕೈ ಹೊತ್ತು ಕೂತರೆ, ಇತ್ತ ವಿರಾಟ್ ಕೊಹ್ಲಿಯ ಕೋಪ ನೆತ್ತಿಗೇರಿತು. ಆ ಬಳಿಕ ಸಿಕ್ಕ ಜೀವದಾನವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ಬೆನ್ ಸ್ಟೋಕ್ಸ್ 35 ರನ್ಗಳಿಸಿ ಶಿಖರ್ ಧವನ್ಗೆ ಕ್ಯಾಚ್ ನೀಡಿದರು. ಬೌಂಡರಿ ಲೈನ್ನಲ್ಲಿದ್ದ ಧವನ್ ಕ್ಯಾಚ್ ಹಿಡಿದು ತೊಡೆ ತಟ್ಟುತ್ತಿದ್ದಂತೆ ಇತ್ತ ಹಾರ್ದಿಕ್ ಪಾಂಡ್ಯ ದೀರ್ಘದಂಡ ನಮಸ್ಕಾರ ಹಾಕಿ ಧನ್ಯವಾದ ತಿಳಿಸಿದರು.
ಹಾರ್ದಿಕ್ ಪಾಂಡ್ಯ ಅವರ ನಮಸ್ಕಾರ ಮತ್ತು ದೀರ್ಘದಂಡವನ್ನು ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರು ನಗೆಗಡಲಲ್ಲಿ ತೇಲಿದರು. ಅದರಲ್ಲೂ ಬೆನ್ ಸ್ಟೋಕ್ಸ್ ಕ್ಯಾಚ್ ಬಿಟ್ಟಾಗ ಸಿಟ್ಟುಗೊಂಡಿದ್ದ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ನಮಸ್ಕಾರ ನೋಡಿ ನಕ್ಕರು. ಇನ್ನು ಪಾಂಡ್ಯ ಈ ರೀತಿಯಾಗಿ ದೀರ್ಘದಂಡ ಹಾಕಿ ಶಿಖರ್ಗೆ ಧನ್ಯವಾದ ತಿಳಿಸಲು ಕಾರಣ, ತಾವು ಬಿಟ್ಟ ಕ್ಯಾಚ್.
View this post on Instagram
ಒಂದು ವೇಳೆ ಬೆನ್ ಸ್ಟೋಕ್ಸ್ ಬೇಗನೆ ಔಟ್ ಆಗದಿದ್ರೆ, ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಡುತ್ತಿದ್ದರು. ಅದರಲ್ಲೂ 2ನೇ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಸ್ಟೋಕ್ಸ್ 10 ಸಿಕ್ಸರ್ಗಳೊಂದಿಗೆ 99 ರನ್ ಬಾರಿಸಿದ್ದರು. ಹೀಗಾಗಿ ಇಂದು ಕೂಡ ಸ್ಟೋಕ್ಸ್ ಅಬ್ಬರಿಸಿ ಭಾರತ ಸೋತರೆ ಅದು ಕ್ಯಾಚ್ ಬಿಟ್ಟ ನನ್ನ ಮೇಲೆ ಬರುತ್ತೆ ಎಂದು ಹಾರ್ದಿಕ್ಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಬೆನ್ ಸ್ಟೋಕ್ಸ್ ವಿಕೆಟ್ ಸಿಗುತ್ತಿದ್ದಂತೆ ದೀರ್ಘದಂಡ ನಮಸ್ಕಾರದೊಂದಿಗೆ ಎಲ್ಲರ ಗಮನ ಸೆಳೆದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ