HOME » NEWS » Sports » CRICKET GAUTAM GAMBHIR ON INDIAS 2011 WORLD CUP WIN ZP

Gautam Gambhir: ಒಂದು ಸಿಕ್ಸ್​ನಿಂದ ನಾವು ವಿಶ್ವಕಪ್ ಗೆದ್ದಿಲ್ಲ: ಪರೋಕ್ಷವಾಗಿ ಚಾಟಿ ಬೀಸಿದ ಗೌತಮ್ ಗಂಭೀರ್..!

ಇನ್ನು ಕೋಚ್ ಗ್ಯಾರಿ ಕರ್ಸ್ಟನ್ ಅವರು ಕೂಡ ಕಷ್ಟಪಟ್ಟು ಕೆಲಸ ಮಾಡಿದ್ದರು. ಅವರು ಅಭ್ಯಾಸದ ವೇಳೆ ಗಂಟೆಗಳ ಕಾಲ ಚೆಂಡೆಸೆಯುವ ಕೆಲಸ ಮಾಡುತ್ತಿದ್ದರು. ಕೋಚ್ ತಂಡವು ತಂಡದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಮಾತ್ರ ಇದೆಲ್ಲಾ ಸಾಧ್ಯ.

news18-kannada
Updated:April 2, 2021, 6:23 PM IST
Gautam Gambhir: ಒಂದು ಸಿಕ್ಸ್​ನಿಂದ ನಾವು ವಿಶ್ವಕಪ್ ಗೆದ್ದಿಲ್ಲ: ಪರೋಕ್ಷವಾಗಿ ಚಾಟಿ ಬೀಸಿದ ಗೌತಮ್ ಗಂಭೀರ್..!
gambhir-dhoni
  • Share this:
'ಏಪ್ರಿಲ್ 02, 2011'...10 ವರ್ಷಗಳ ಹಿಂದೆ ಇದೇ ದಿನ ಟೀಮ್ ಇಂಡಿಯಾ ಎರಡನೇ ಬಾರಿ ವಿಶ್ವಕಪ್​ಗೆ ಕಿರೀಟವನ್ನು ತನ್ನದಾಗಿಸಿಕೊಂಡಿತ್ತು. ಅದು ಕೂಡ ಬರೋಬ್ಬರಿ 28 ವರ್ಷಗಳ ಬಳಿಕ ಎಂಬುದು ವಿಶೇಷ. ಟೀಂ ಇಂಡಿಯಾ ಈ ಸಾಧನೆ ಮಾಡಿ ಇಂದಿಗೆ ಒಂದು ದಶಕ ತುಂಬಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಭಾರತ, ಫೈನಲ್​​ನಲ್ಲಿ ಶ್ರೀಲಂಕಾವನ್ನು ಎದುರಿಸಿತ್ತು. ಫೈನಲ್ ಕಾದಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡವು, ಮಹೇಲ ಜಯವರ್ದನೆ ಅವರ ಅಮೊಘ ಶತಕದ ನೆರವಿನಿಂದ 50 ಓವರ್​​​​ಗೆ 6 ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿತು.

ವಾಂಖೆಡೆ ಕ್ರೀಡಾಂಗಣದಲ್ಲಿ 275 ರನ್​ ದೊಡ್ಡ ಸವಾಲೇ ಆಗಿತ್ತು. ಈ ಕಠಿಣ ಗುರಿ ಬೆನ್ನಟ್ಟಿದ ಭಾರತ ಮೊದಲ ಓವರ್​ನಲ್ಲಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ 18 ರನ್​ ಬಾರಿಸಿ ಸಚಿನ್ ಕೂಡ ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. 35 ರನ್​ಗಳಿಸಿ ಕೊಹ್ಲಿ ವಿಕೆಟ್ ಒಪ್ಪಿಸುವುದರೊಂದಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿದರು. ಗೌತಮ್ ಗಂಭೀರ್ ಜೊತೆಗೂಡಿ ಅಮೋಘ ಜೊತೆಯಾಟವಾಡಿದರು. ತಂಡವನ್ನು ಗೆಲುವಿತ್ತ ಕೊಂಡೊಯ್ಯುವ ವೇಳೆ ಗಂಭೀರ್ (97) ಶತಕದ ಅಂಚಿನಲ್ಲಿ ಎಡವಿದರು.

ಇದಾಗ್ಯೂ ಯುವರಾಜ್ ಸಿಂಗ್ (21) ಜೊತೆ ಧೋನಿ ಅಜೇಯ 91 ರನ್​ಗಳೊಂದಿಗೆ ಭರ್ಜರಿ ಸಿಕ್ಸ್​ ಸಿಡಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟರು. ಭಾರತ 6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಎರಡನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯಿತು. ಈ ಸ್ಮರಣೀಯ ಗೆಲುವಿನ ಬಗ್ಗೆ ಮಾತನಾಡಿದ ವಿಶ್ವಕಪ್ ವಿಜೇತ ತಂಡದ ಆಟಗಾರ ಗೌತಮ್ ಗಂಭೀರ್ ಭಾರತ ವರ್ಲ್ಡ್​ಕಪ್ ಗೆದ್ದಿರುವುದು ಕೊನೆಯ ಸಿಕ್ಸರ್​ನಿಂದಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಈ ಹಿಂದೆ ವೆಬ್​ಸೈಟ್​ವೊಂದು ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಸಿಡಿಸಿದ ವಿನ್ನಿಂಗ್ ಸಿಕ್ಸ್ ಕುರಿತು ಅತಿರಂಜಿತವಾಗಿ ವರ್ಣಿಸಿ, ನಾಯಕನ ಸಿಕ್ಸರ್​ ಮೂಲಕ ಭಾರತ ವಿಶ್ವಕಪ್ ಗೆದ್ದಿದೆ ಎಂದು ಬರೆದುಕೊಂಡಿತ್ತು. ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್ ನಾವು ವಿಶ್ವಕಪ್​ ಗೆಲ್ಲಲು ಪ್ರತಿಯೊಬ್ಬರ ಆಟಗಾರರ ಕೊಡುಗೆ ಕೂಡ ಇದೆ. ಇಲ್ಲಿ ಕೆಲವರನ್ನು ಮಾತ್ರ ಹೈಲೆಟ್ ಮಾಡಲಾಗಿದೆ. ಆದರೆ ಇತರೆ ಆಟಗಾರರ ಕೊಡುಗೆಯನ್ನು ಮರೆತಿದ್ದೇನೆ ಎಂದಿದ್ದಾರೆ.

ವಿಶ್ವಕಪ್​ ಫೈನಲ್‌ಗೆ ಜಹೀರ್ ಖಾನ್ ನೀಡಿದ ಕೊಡುಗೆಯನ್ನು ನೀವು ಮರೆಯಬಹುದೇ? ಎಂದು ಪ್ರಶ್ನಿಸಿದ ಗೌತಮ್ ಗಂಭೀರ್, ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ ಮಿಂಚಿದ್ದರು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಶತಕ ಸಿಡಿಸಿದ್ದರು. ಇದಾಗ್ಯೂ ನಾವು ಮತ್ತೆ ಮತ್ತೆ ಏಕೆ ಕೇವಲ ಒಂದು ಸಿಕ್ಸ್​ನ ಮಾತ್ರ ನೆನಪಿಸಿಕೊಳ್ಳುತ್ತೇವೆ? ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

ಒಂದು ಸಿಕ್ಸರ್ ನಮಗೆ ವಿಶ್ವಕಪ್ ತಂದುಕೊಡುವುದಾದರೆ, ಯುವರಾಜ್ ಸಿಂಗ್ ಭಾರತಕ್ಕೆ ಕನಿಷ್ಠ 6 ವಿಶ್ವಕಪ್​ಗಳನ್ನಾದರೂ ಗೆದ್ದು ಕೊಡಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ 2007 ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಹೊಡೆದವರು ಯುವಿ. ಇಲ್ಲಿ ಯುವರಾಜ್ ಬಗ್ಗೆ ಯಾರೂ ಮಾತನಾಡುವುದಿಲ್ಲ. 2011 ರ ವಿಶ್ವಕಪ್‌ನಲ್ಲಿ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಯುವರಾಜ್ ಸಿಂಗ್. ಆದರೆ ನಾವು ಕೇವಲ ಕೊನೆಯ ಸಿಕ್ಸ್​ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ ಎಂದು ಗಂಭೀರ್ ಆಕ್ರೋಶ ವ್ಯಕ್ತಪಡಿಸಿದರು.

'ನನ್ನ ದೃಷ್ಟಿಯಲ್ಲಿ 2011 ರ ವಿಶ್ವಕಪ್‌ನಲ್ಲಿ 14 ವೀರರಿದ್ದರು'. ಮುನಾಫ್ ಪಟೇಲ್ ಇಡೀ ಟೂರ್ನಿಯಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ಅದಕ್ಕಾಗಿ ಅವರಿಗೆ ಅದರ ಕ್ರೆಡಿಟ್ ಸಿಗಲೇ ಇಲ್ಲ. ಅದೇ ರೀತಿ ಆಶಿಶ್ ನೆಹ್ರಾ ಕೂಡ ನಿಖರವಾಗಿ ಬೌಲಿಂಗ್ ಮಾಡಿದರು. ವಿಶೇಷವಾಗಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಇದಲ್ಲದೆ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧ ನಿರ್ಣಾಯಕ ಇನ್ನಿಂಗ್ಸ್ ಆಡಿದ ಸುರೇಶ್ ರೈನಾ.. ಹೀಗೆ ಎಲ್ಲಾ ಆಟಗಾರರ ಕೊಡುಗೆ ಅಮೂಲ್ಯವಾದುದು ಎಂದು ಗಂಭೀರ್ ಸ್ಮರಿಸಿದರು.
Youtube Video

ಇನ್ನು ಕೋಚ್ ಗ್ಯಾರಿ ಕರ್ಸ್ಟನ್ ಅವರು ಕೂಡ ಕಷ್ಟಪಟ್ಟು ಕೆಲಸ ಮಾಡಿದ್ದರು. ಅವರು ಅಭ್ಯಾಸದ ವೇಳೆ ಗಂಟೆಗಳ ಕಾಲ ಚೆಂಡೆಸೆಯುವ ಕೆಲಸ ಮಾಡುತ್ತಿದ್ದರು. ಕೋಚ್ ತಂಡವು ತಂಡದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಮಾತ್ರ ಇದೆಲ್ಲಾ ಸಾಧ್ಯ. ಗ್ಯಾರಿ ಅದೆಲ್ಲವನ್ನೂ ಹೊಂದಿದ್ದರು ಎಂದು ಗಂಭೀರ್ ಕೋಚ್​ಗೂ ಭಾರತದ ವಿಶ್ವಕಪ್ ಗೆಲುವಿನ ಕ್ರೆಡಿಟ್ ನೀಡಿದರು.
Published by: zahir
First published: April 2, 2021, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories