ಅಂದು ವಿಶ್ವಕಪ್​ ಫೈನಲ್​ನಲ್ಲಿ ಬಿಕ್ಕಳಿಸಿ ಅತ್ತಿದ್ದ ಸ್ಟೋಕ್ಸ್ ಇಂದು ಇಂಗ್ಲೆಂಡ್ ಕ್ರಿಕೆಟ್ ಕಿಂಗ್

ICC World cup 2019 Final: ಒಂದೊಂದೇ ರನ್​ಗಳನ್ನು ಕಲೆಹಾಕುತ್ತಾ ವಿಂಡೀಸ್ ಕೊನೆಯ ಓವರ್​ನಲ್ಲಿ 19 ರನ್​ಗಳ ಗುರಿ ಪಡೆಯಿತು. ಅತ್ತ ಇಂಗ್ಲೆಂಡ್ ಅಭಿಮಾನಿಗಳು ವಿಶ್ವ ಚಾಂಪಿಯನ್ ಆಗುವ ಸಂಭ್ರಮದಲ್ಲಿದ್ದರು. ಇದೇ ಆತ್ಮ ವಿಶ್ವಾದಲ್ಲಿದ್ದ ನಾಯಕ ಇಯಾನ್ ಮೋರ್ಗನ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಕೈಗೆ ಚೆಂಡು ನೀಡಿದರು.

zahir | news18
Updated:July 15, 2019, 5:37 PM IST
ಅಂದು ವಿಶ್ವಕಪ್​ ಫೈನಲ್​ನಲ್ಲಿ ಬಿಕ್ಕಳಿಸಿ ಅತ್ತಿದ್ದ ಸ್ಟೋಕ್ಸ್ ಇಂದು ಇಂಗ್ಲೆಂಡ್ ಕ್ರಿಕೆಟ್ ಕಿಂಗ್
Ben stokes
  • News18
  • Last Updated: July 15, 2019, 5:37 PM IST
  • Share this:
ಅದು ಏಪ್ರಿಲ್ 3, 2016. ಕೊಲ್ಕತ್ತಾದಲ್ಲಿ ನಡೆದ ವಿಶ್ವಕಪ್​ ಟಿ20 ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್​ ಇಂಡೀಸ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಜೋ ರೂಟ್ ಅವರ ಭರ್ಜರಿ 54(36) ರನ್​ಗಳ ನೆರವಿನಿಂದ 155 ರನ್​ ಬಾರಿಸಿತ್ತು.

ಈ ಸವಾಲನ್ನು ಬೆನ್ನತ್ತಿದ್ದ ವಿಂಡೀಸ್ ಆರಂಭ ಉತ್ತಮವಾಗಿರಲಿಲ್ಲ. 5 ರನ್​ ಆಗುವಷ್ಟರಲ್ಲಿ ಆರಂಭಿಕರಾದ ಕ್ರಿಸ್ ಗೇಲ್ ಹಾಗೂ ಚಾರ್ಲ್ಸ್​ ಡಕೌಟ್​ಗೆ ಮರಳಿದ್ದರು. ಇನ್ನು ಮೂರನೇ ಓವರ್​​ನಲ್ಲಿ ಸಿಮನ್ಸ್ ಶೂನ್ಯಕ್ಕೆ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಸ್ಯಾಮುವೆಲ್ಸ್ ಹಾಗೂ ಬ್ರಾವೊ ಅರ್ಧಶತಕದ ಜೊತೆಯಾಟದೊಂದಿಗೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಆದರೆ ತಂಡದ ಮೊತ್ತ 86 ಆಗಿದ್ದ ವೇಳೆ ರಶೀದ್ ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಬ್ರಾವೊ ಕೂಡ ಪೆವಿಲಿಯನ್​ನತ್ತ ಮುಖ ಮಾಡಿದರು. ಇದರ ಬೆನ್ನಲ್ಲೇ ಆಂಡ್ರೆ ರಸೆಲ್ ಹಾಗೂ 6ನೇ ವಿಕೆಟ್ ಆಗಿ ಡಾರೆನ್ ಸಮಿ ಬಂದ ವೇಗದಲ್ಲೇ ಮರಳಿದರು. ಒಂದೆಡೆ ಅನುಭವಿ ಆಟಗಾರ ಸ್ಯಾಮುವೆಲ್ಸ್ ಇದ್ದರೂ ಪಂದ್ಯದ ಗತಿ ಬದಲಾಗಲಿದೆ ಎಂಬ ಭಾವನೆ ಪಂದ್ಯ ವೀಕ್ಷಿಸುತ್ತಿದ್ದ ಯಾರಲ್ಲೂ ಇರಲಿಲ್ಲ.

ಒಂದೊಂದೇ ರನ್​ಗಳನ್ನು ಕಲೆಹಾಕುತ್ತಾ ವಿಂಡೀಸ್ ಕೊನೆಯ ಓವರ್​ನಲ್ಲಿ 19 ರನ್​ಗಳ ಗುರಿ ಪಡೆಯಿತು. ಅತ್ತ ಇಂಗ್ಲೆಂಡ್ ಅಭಿಮಾನಿಗಳು ವಿಶ್ವ ಚಾಂಪಿಯನ್ ಆಗುವ ಸಂಭ್ರಮದಲ್ಲಿದ್ದರು. ಇದೇ ಆತ್ಮ ವಿಶ್ವಾದಲ್ಲಿದ್ದ ನಾಯಕ ಇಯಾನ್ ಮೋರ್ಗನ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಕೈಗೆ ಚೆಂಡು ನೀಡಿದರು.

ಮೊದಲ ಎರಡು ಓವರ್​ಗಳಲ್ಲಿ ಕೇವಲ 17 ರನ್​ ನಿಡಿದ ಸ್ಟೋಕ್ಸ್ ಜಾದು ನಡೆಯಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆಗಷ್ಟೇ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಕಾರ್ಲೋಸ್ ಬ್ರಾಥ್​ವೈಟ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕಳೆಗಾಗಿಸಿದರು. ಸ್ಟೋಕ್ಸ್​ ಅವರ ನಾಲ್ಕೂ ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಈ ಮೂಲಕ ಕೆರಿಬಿಯನ್ ಪಡೆ ರೋಚಕ ಫೈನಲ್​ನಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಅತ್ತ ಕೊನೆಯ ಓವರ್ ಮಾಡಿದ ಬೆನ್​ ಸ್ಟೋಕ್ಸ್ ಪಿಚ್​ನಲ್ಲಿ ಕುಸಿದು ಕೂತಿದ್ದರು. ಇಂಗ್ಲೆಂಡ್ ಕೈಗೆ ಬಂದಂತಹ ಗೆಲುವನ್ನು ಸ್ಟೋಕ್ಸ್ ವಿಂಡೀಸ್​ಗೆ ನೀಡಿದ್ದರು. ಅಳುತ್ತಾ ಕೂತಿದ್ದ ಆಲ್​ರೌಂಡರನ್ನು ಇತರೆ ಆಟಗಾರರು ಸಮಾಧಾನ ಪಡಿಸಿ ಪೆವಿಲಿಯನ್​ಗೆ ಕರೆದುಕೊಂಡು ಹೋದರು.

ಮರುದಿನದ ಪತ್ರಿಕೆ, ಮಾಧ್ಯಮಗಳಲ್ಲಿ ಸ್ಟೋಕ್ಸ್ ಅಕ್ಷರಶಃ ಇಂಗ್ಲೆಂಡ್ ಪಾಲಿನ ವಿಲನ್ ಆಗಿ ಚಿತ್ರಿತಗೊಂಡಿದ್ದರು. ಆದರೆ ಅಂದಿನ ಸೋಲಿನ ಸಂದರ್ಭದಲ್ಲೇ ಇಂಗ್ಲೆಂಡ್ ಆಲ್​ರೌಂಡರ್ ದೃಢ ನಿರ್ಧಾರ ತೆಗೆದುಕೊಂಡಿದ್ದರೇನೊ...ಯಾರೆಲ್ಲಾ ಟೀಕೆ, ಆಕ್ರೋಶ ವ್ಯಕ್ತಪಡಿಸಿದ್ದರೋ ಅವರಿಗೆಲ್ಲಾ ಉತ್ತರ ನೀಡಿದ್ದಾರೆ. ಸ್ಟೋಕ್ಸ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಈಗ ಇಂಗ್ಲೆಂಡ್ ತಂಡ ಚೊಚ್ಚಲ ಬಾರಿ ಏಕದಿನ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.ಭಾನುವಾರ ಲಾರ್ಡ್ಸ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಬೆನ್​ ಸ್ಟೋಕ್ಸ್ ಇದೀಗ ಆಂಗ್ಲರ ಪಾಲಿನ ಹೀರೋ ಆಗಿದ್ದಾರೆ. ಕಿವೀಸ್ ನೀಡಿದ 241 ರನ್​ಗಳ ಸವಾಲು ಬೆನ್ನತ್ತಿದ್ದ ಇಂಗ್ಲೆಂಡ್ ಆರಂಭಿಕ ಕುಸಿತ ಕಂಡಿತು. 86 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜಾಸ್ ಬಟ್ಲರ್ ಜೊತೆಗೂಡಿ ಆಸರೆಯಾದ ಸ್ಟೋಕ್ಸ್ ಕೊನೆಯ ಎಸೆತದವರೆಗೂ ಅಜೇಯರಾಗಿ ಉಳಿದರು.

98 ಎಸೆತಗಳನ್ನು ಎದುರಿಸಿ ಸ್ಟೋಕ್ಸ್ 84 ರನ್​ ಬಾರಿಸುವ ಮೂಲಕ ಫೈನಲ್​ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಳ್ಳುವಂತೆ ಮಾಡಿದ್ದರು. ಹಾಗೆಯೇ ಸೂಪರ್ ಓವರ್​ನಲ್ಲೂ ಸೂಪರ್ ಆಟವಾಡಿ ಕ್ರಿಕೆಟ್ ಜನಕರು ಚೊಚ್ಚಲ ಬಾರಿ ವಿಶ್ವಕಪ್ ಕಿರೀಟ ಧರಿಸುವಂತೆ ಮಾಡಿದರು.ಅಂದು ಖಳನಾಗಿ ಚಿತ್ರಿಸಿದ ಮಾಧ್ಯಮಗಳು ಇಂದು ಬೆನ್​ ಸ್ಟೋಕ್ಸ್​ರನ್ನು ಇಂಗ್ಲೆಂಡ್ ಕ್ರಿಕೆಟ್ ಅಂಗಳದ ಕಿಂಗ್ ಎಂಬಂತೆ ವರ್ಣಿಸಿದೆ. ಅಂದು ಹೀಯಾಳಿಸಿದ ಬೀದಿಗಳು ಇಂದು ಸ್ಟೋಕ್ಸ್ ಆಗಮನಕ್ಕಾಗಿ ರಂಗೇರಿ ನಿಲ್ಲುತ್ತಿದೆ. ಒಟ್ಟಿನಲ್ಲಿ ಛಲವೊಂದಿದ್ದರೆ ಎಲ್ಲಿ ಕಳೆದುಕೊಂಡನೋ ಅಲ್ಲಿಯೇ ಮರಳಿ ಪಡೆಯಬಹುದು ಎಂಬುದಕ್ಕೆ ತಾಜಾ ಉದಾರಣೆಯಾಗಿ ಇಂದು ಬೆನ್​ ಸ್ಟೋಕ್ಸ್ ನಿಂತಿದ್ದಾರೆ.

First published:July 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ