ಎಜಾಜ್ ಸಾಧನೆ ಹಿಂದೆ ಮಾಜಿ ಕರ್ನಾಟಕ ಕ್ರಿಕೆಟಿಗ; ಸ್ನೇಹ, ಗುರು-ಶಿಷ್ಯರಂತಿದೆ ಅವರಿಬ್ಬರ ಸಂಬಂಧ

Ajaz Patel-Barrington Rowland: 15 ವರ್ಷಗಳ ಹಿಂದೆ ಕರ್ನಾಟಕದ ಅತ್ಯುತ್ತಮ ಬ್ಯಾಟುಗಾರ ಎನಿಸಿದ್ದ ಬ್ಯಾರಿಂಗ್ಟನ್ ರೋಲ್ಯಾಂಡ್ ನ್ಯೂಜಿಲೆಂಡ್​ಗೆ ಹೋಗಿ ಅಲ್ಲಿ ಎಜಾಜ್ ಪಟೇಲ್ ಅವರಂಥ ಯುವ ಪ್ರತಿಭೆಗಳನ್ನ ನೀರೆರದು ಪೋಷಿಸುವ ಕೆಲಸ ಮಾಡುತ್ತಿದ್ದಾರೆ.

ಎಜಾಜ್ ಪಟೇಲ್ ಮತ್ತು ಬ್ಯಾರಿಂಗ್ಟನ್ ರೋಲ್ಯಾಂಡ್

ಎಜಾಜ್ ಪಟೇಲ್ ಮತ್ತು ಬ್ಯಾರಿಂಗ್ಟನ್ ರೋಲ್ಯಾಂಡ್

 • Share this:
  ಬೆಂಗಳೂರು: ಎಜಾಜ್ ಪಟೇಲ್ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಆಗಿದ್ದಾರೆ. ರಾತ್ರೋರಾತ್ರಿ ಅವರು ನ್ಯೂಜಿಲೆಂಡ್ ತಂಡದ ನೂತನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇವರ ಈ ಸಾಧನೆ ಹಿಂದೆ ಕರ್ನಾಟಕದ ಮಾಜಿ ಆಟಗಾರರೊಬ್ಬರು ಇದ್ದಾರೆ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ. ಎರಡು ದಶಕದ ಹಿಂದೆ ಕರ್ನಾಟಕ ಕ್ರಿಕೆಟ್ ಅನ್ನ ಕಂಡಿದ್ದವರಾಗಿದ್ದರೆ ನೀವು ಬ್ಯಾರಿಂಗ್ಟನ್ ರೋಲೆಂಡ್ (Rowland Barrington) ಹೆಸರು ಕೇಳಿರಬಹುದು. ಬಹಳ ಅಪ್ರತಿಮ ಬ್ಯಾಟುಗಾರರಾಗಿದ್ದವರು. ಭಾರತದ ಅಂಡರ್-19 ತಂಡದಲ್ಲೂ ಆಡಿದವರು. ಭವಿಷ್ಯದಲ್ಲಿ ರಾಹುಲ್ ದ್ರಾವಿಡ್ ಅವರಂತೆ ಮಿಂಚಬಲ್ಲವರೆಂದು ನಿರೀಕ್ಷೆ ಹುಟ್ಟಿಸಿದವರು. ಆ ನಿರೀಕ್ಷೆಗೆ ತಕ್ಕಂತಹ ಆಟವನ್ನೂ ಆಡುತ್ತಿದ್ದವರು. ಆದರೆ, 13 ವರ್ಷಗಳ ಹಿಂದೆ ದಿಢೀರ್ ನ್ಯೂಜಿಲೆಂಡ್​ಗೆ ತೆರಳಿ ಭಾರತೀಯ ಕ್ರಿಕೆಟ್​ನಿಂದ ಕಣ್ಮರೆಯಾಗಿಬಿಟ್ಟರು. ಈಗ ಈ ಶ್ರೇಷ್ಠ ಬ್ಯಾಟುಗಾರನೇ ಎಜಾಜ್ ಪಟೇಲ್ ಯಶಸ್ಸಿನ ಹಿಂದೆ ನಿಂತಿದ್ದಾರೆ ಎಂಬ ಸಂಗತಿ ಕರ್ನಾಟಕಕ್ಕೆ ಹೆಮ್ಮೆ ಮೂಡಿಸುವಂಥದ್ದಾಗಿದೆ.

  ರೋಲ್ಯಾಂಡ್ ಬ್ಯಾರಿಂಗ್ಟನ್ 2008ರಲ್ಲಿ ನ್ಯೂಜಿಲೆಂಡ್​ಗೆ ಹೋಗಿ ಅಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಈಗ ಅವರು ಪ್ಲೇಯರ್ ಹಾಗೂ ಕೋಚಿಂಗ್ ಎರಡೂ ಜವಾಬ್ದಾರಿಗಳನ್ನ ಏಕಕಾಲದಲ್ಲಿ ನಿರ್ವಹಿಸುತ್ತಿದ್ದಾರೆ. ಎಜಾಜ್ ಪಟೇಲ್ ಸೇರಿದಂತೆ ಅನೇಕ ಪ್ರತಿಭೆಗಳಿಗೆ ಅವರು ಮಾರ್ಗದರ್ಶಕರಾಗಿದ್ದಾರೆ. ನ್ಯೂಜಿಲೆಂಡ್​ನ ಮತ್ತೊಬ್ಬ ಪ್ರತಿಭೆ ಜೀತ್ ರಾವಲ್ ಅವರು ಪ್ರವರ್ಧಮಾನಕ್ಕೆ ಬರಲು ಬ್ಯಾರಿಂಗ್ಟನ್ ಕಾರಣರಾಗಿದ್ದಾರೆ. ಹಾಗೆಯೇ, ನ್ಯೂಜಿಲೆಂಡ್​ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಚೆನ್ನ ಸಂಜಾತ ಲೆಗ್ ಸ್ಪಿನ್ನರ್ 19 ವರ್ಷದ ಆದಿತ್ಯ ಅಶೋಕ್ ಅವರಿಗೂ ಬ್ಯಾರಿಂಗ್ಟನ್ ಗುರುವಿನಂತೆ ನಿಂತಿದ್ಧಾರೆ.

  ಎಜಾಜ್ ಪಟೇಲ್ ಆಪ್ತ ಸಂಬಂಧ:

  2008ರಲ್ಲಿ ರೋಲ್ಯಾಂಡ್ ಬ್ಯಾರಿಂಗ್ಟನ್ ಅವರು ಬೆಂಗಳೂರಿನಿಂದ ನ್ಯೂಜಿಲೆಂಡ್​ಗೆ ಹೋದಾಗ ಆಕ್ಲೆಂಡ್​ನ ಸಬರ್ಬ್ಸ್ ನ್ಯೂ ಲಿನ್ ಕ್ರಿಕೆಟ್ ಕ್ಲಬ್ ಸೇರಿಕೊಂಡರು. ಅಲ್ಲಿ ಎಜಾಜ್ ಪಟೇಲ್ ಅದಾಗಲೇ ಆಡುತ್ತಿದ್ದರು. ಆಗಿನಿಂದ ಇಬ್ಬರ ಮಧ್ಯೆ ಸ್ನೇಹ ಬೆಳೆದು ಗಾಢವಾಯಿತು. ಎಜಾಜ್ ಅವರಿಗೆ ಬಹಳಷ್ಟು ಉಪಯುಕ್ತ ಸಲಹೆಗಳನ್ನ ಬ್ಯಾರಿಂಗ್ಟನ್ ನೀಡಿದ್ದಾರೆ. ಅದೆಲ್ಲವೂ ಕಾನಪುರ್ ಟೆಸ್ಟ್​ನಲ್ಲಿ ಎಜಾಜ್​ಗೆ ವರದಾನವಾಗಿ ಪರಿಣಮಿಸಿದೆ.

  “ಭಾರತದಲ್ಲಿ ಬ್ಯಾಟುಗಾರರು ಸ್ಪಿನ್ ಬೌಲಿಂಗ್ ಹೇಗೆ ಆಡುತ್ತಾರೆ ಇತ್ಯಾದಿ ಸಂಗತಿಯನ್ನ ಬ್ಯಾರಿ ನನಗೆ ತಿಳಿಸಿಕೊಟ್ಟಿದ್ದರು. ನಾನು ಸ್ಪಿನ್ ಬೌಲಿಂಗ್ ಆರಂಭಿಸಿದಾಗ ಅವರು ಕೋಚ್ ಆಗಿದ್ದರು. ಭಾರತ ಪ್ರವಾಸಕ್ಕೆ ಬರುವ ಮುನ್ನ ಅವರ ಜೊತೆ ಕೆಲ ಸಮಯ ಕಳೆದಿದ್ದೆ. ಸಾಕಷ್ಟು ವಿಚಾರ ವಿನಿಮಯ ಮಾಡಿಕೊಳ್ಳುತ್ತಿರುತ್ತೇವೆ. ಅವರು ಬಹಳ ಒಳ್ಳೆಯ ಸ್ನೇಹಿತರು” ಎಂದು ಕರ್ನಾಟಕದ ಮಾಜಿ ಆಟಗಾರನ ಬಗ್ಗೆ ಎಜಾಜ್ ಪಟೇಲ್ ಹೇಳುತ್ತಾರೆ.

  ಇದನ್ನೂ ಓದಿ: ‘ತಂಡಕ್ಕೆ ಈ ಗುಣ ಇರಬೇಕು’- ಕ್ಯಾಪ್ಟನ್ಸಿ ಬಗ್ಗೆ ರೋಹಿತ್ ಶರ್ಮಾದ್ದು ವಿಭಿನ್ನ ದೃಷ್ಟಿಕೋನ

  ಎಜಾಜ್ ಮನೆಯ ಬಿರಿಯಾನಿ:

  ಎಜಾಜ್ ಪಟೇಲ್ ಮತ್ತು ಬ್ಯಾರಿಂಗ್ಟನ್ ರೋಲ್ಯಾಂಡ್ ನಡುವಿನ ಸ್ನೇಹ ಕೇವಲ ಕ್ರಿಕೆಟ್ ಮೈದಾನಕ್ಕೆ ಸೀಮಿತವಾಗಿರಲಿಲ್ಲ. ಎಜಾಜ್ ಮತ್ತವರ ಕುಟುಂಬದ ಜೊತೆಯೂ ಬ್ಯಾರಿಂಗ್ಟನ್ ಒಡನಾಟ ಇತ್ತು. ಎಜಾಜ್ ತಂದೆ ಜೊತೆಗೂ ಅವರು ಆಪ್ತರಾಗಿದ್ದರು. ಮುಸ್ಲಿಮ್ ಕುಟುಂಬದ ಎಜಾಜ್ ಮನೆಯ ಚಿಕನ್ ಬಿರ್ಯಾನಿ ಎಂದರೆ ರೋಲ್ಯಾಂಡ್​ಗೆ ಭಾರೀ ಪ್ರಿಯವಂತೆ. “ನೀವು ನನಗೆ ಚಿಕನ್ ಬಿರ್ಯಾನಿ ತರಲಿಲ್ಲ ಎಂದ್ರೆ ನಿಮ್ಮ ಮಗನಿಗೆ ಕೋಚಿಂಗ್ ಮಾಡುವುದಿಲ್ಲ” ಎಂದು ಎಜಾಜ್ ತಂದೆಯನ್ನ ಬ್ಯಾರಿಂಗ್ಟನ್ ತಮಾಷೆಗೆ ಛೇಡಿಸುತ್ತಿದ್ದರಂತೆ.

  ಒಳ್ಳೆಯ ಫಾಸ್ಟ್ ಬೌಲರ್ ಆಗಿದ್ದ ಎಜಾಜ್:

  ಎಜಾಜ್ ಪಟೇಲ್ ಮೊದಲು ವೇಗದ ಬೌಲರ್ ಆಗಿದ್ದವರು. ಸ್ಪಿನ್ ಬೌಲಿಂಗ್ ಗೊತ್ತಿರಲಿಲ್ಲ. ಕೆಲ ವರ್ಷಗಳ ಹಿಂದಷ್ಟೇ ಸ್ಪಿನ್ ಬೌಲಿಂಗ್ ಶುರು ಮಾಡಿದರು. ಅವರು ವೇಗದ ಬೌಲರ್ ಆಗಿದ್ದಾಗ ಎರಡೂ ಕಡೆಗೂ ಸ್ವಿಂಗ್ ಮಾಡಬಲ್ಲವರಾಗಿದ್ದರಂತೆ. 120 ಕಿಮೀ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರು ಅಂಡರ್-19 ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ್ದರಂತೆ. ಆ ಟೂರ್ನಿಯಲ್ಲಿ ಟಿಮ್ ಸೌದಿ ಕೂಡ ಇದ್ದರು ಎಂದು ಬ್ಯಾರಿಂಗ್ಟನ್ ಹೇಳುತ್ತಾರೆ.

  ಫಾಸ್ ಬೌಲಿಂಗ್​ನಿಂದ ಸ್ಪಿನ್​ಗೆ ಬದಲಾದದ್ದು:

  “ಎಜಾಜ್ ಅವರು ಹೆಚ್ಚು ಎತ್ತರವಿಲ್ಲದ ಆಳು. ಫಾಸ್ಟ್ ಬೌಲರ್​ಗೆ ಎತ್ತರದ ದೇಹ ಇದ್ದರೆ ಹೆಚ್ಚು ಅನುಕೂಲ. ಆದರೂ ಎಜಾಜ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರು. ಆದರೆ, ಫಾಸ್ಟ್ ಬೌಲಿಂಗ್ ಅನ್ನು ಅವರು ಮುಂದುವರಿಸಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯಲು ಆಗುತ್ತಿರಲಿಲ್ಲ.

  ಇದನ್ನೂ ಓದಿ: ರೆಬೆಲ್ ಕೊಹ್ಲಿ; ಬೇಡ ಅಂದ್ರೂ ಟಿ20 ಕ್ಯಾಪ್ಟನ್ಸಿ ಬಿಟ್ರು; ಬಿಡಿ ಎಂದ್ರೂ ಓಡಿಐ ಕ್ಯಾಪ್ಟನ್ಸಿ ಬಿಡಲಿಲ್ಲವಂತೆ

  “ಎಜಾಜ್ ಅವರು ಕ್ರಿಕೆಟ್ ಆಟದ ವಿಚಾರದಲ್ಲ ಕುಶಾಗ್ರಮತಿ. ನಮ್ಮ ಆಗಿನ ಕ್ಲಬ್​ನಲ್ಲಿ ಎಡಗೈ ಸ್ಪಿನ್ನರ್ ಇರಲಿಲ್ಲ. ಎಜಾಜ್ ಅವರಲ್ಲಿ ಅಡಗಿರುವ ಪ್ರತಿಭೆಯನ್ನ ನನ್ನ ಅನುಭವದಲ್ಲಿ ಗುರುತಿಸಬಲ್ಲವನಾಗಿದ್ದೆ. ಅವರನ್ನ ಸ್ಪಿನ್ ಬೌಲಿಂಗ್​ಗೆ ಸೆಳೆಯಲು ಯೋಚಿಸಿದೆ. ಅವರ ಜೊತೆ ಮತ್ತು ಅವರ ತಂದೆಯ ಜೊತೆ ಮಾತನಾಡಿ ಒಪ್ಪಿಸಿದೆ. ಮಾಜಿ ಆಟಗಾರ ದೀಪಕ್ ಪಟೇಲ್ ಅವರು ಸ್ಪಿನ್ ಬೌಲಿಂಗ್ ಕಲೆಯನ್ನ ಹೇಳಿಕೊಟ್ಟರು. ನಮ್ಮ ಕ್ಲಬ್​ಗೆ ಎಜಾಜ್ ಸ್ಪಿನ್ನರ್ ಆಗಿ ಬದಲಾದರು. ಮೊದಲಿಗೆ ನಾನು ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್ ಎರಡನ್ನೂ ಮಾಡಲು ತಿಳಿಸಿದೆ. ಇಲ್ಲದಿದ್ದರೆ ಅವರ ವಿಶ್ವಾಸ ಕುಂಠಿಗೊಳ್ಳುವ ಅಪಾಯ ಇತ್ತು. ಐದು ಓವರ್ ಫಾಸ್ಟ್ ಬೌಲಿಂಗ್ ಮಾಡುವುದು, ಇನ್ನುಳಿದ ಓವರ್ ಸ್ಪಿನ್ ಬೌಲಿಂಗ್ ಮಾಡುವುದು ಎಂದು ನಿರ್ಧರಿಸಿದೆವು. ಕೆಲ ತಿಂಗಳು ಎಜಾಜ್ ಅವರಿಗೆ ಸ್ಪಿನ್ ಬೌಲಿಂಗ್ ಕಷ್ಟ ಆಯಿತು. ಆದರೆ, ಪರಿಶ್ರಮ ಮತ್ತು ಅಭ್ಯಾಸದ ಬಳಿಕ ಅವರು ಸ್ಪಿನ್​ಗೆ ಹೊಂದಿಕೊಂಡರು. ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಆರಂಭಿಸಿದರು” ಎಂದು ಕರ್ನಾಟಕದ ಮಾಜಿ ಆಟಗಾರ ತಿಳಿಸುತ್ತಾರೆ.

  ಎಜಾಜ್ ಅವರದ್ದು ದ್ರಾವಿಡ್ ಸ್ವಭಾವ:

  ಎಜಾಜ್ ಪಟೇಲ್ ಬಹಳ ಸರಳ ಹಾಗು ಸ್ನೇಹಶೀಲ ವ್ಯಕ್ತಿತ್ವದವರು. ಅವರೊಂದಿಗೆ ಯಾರು ಬೇಕಾದರೂ ಸಂವಾದ ಮಾಡಬಹುದು. ಯಾವುದೇ ಹಮ್ಮು ಬಿಮ್ಮು ಇಲ್ಲದ ವ್ಯಕ್ತಿತ್ವ ಅವರದ್ದು. ಮೈದಾನದಲ್ಲಿ ಎಳೆಯ ಹುಡುಗರ ಜೊತೆ ಸುಲಭವಾಗಿ ಬೆರೆಯುತ್ತಿದ್ದರು. ಅವರನ್ನ ಭೇಟಿ ಮಾಡಿದ ಯಾರೇ ಆದರೂ ಅವರ ಬಗ್ಗೆ ಹೆಮ್ಮೆ ಪಡುತ್ತಾರೆ. ಈ ವಿಚಾರದಲ್ಲಿ ಅವರ ಸ್ವಭಾವನ್ನು ರಾಹುಲ್ ದ್ರಾವಿಡ್​ಗೆ ಹೋಲಿಸಬಹುದು. ದ್ರಾವಿಡ್ ಕೂಡ ಯಾರೇ ಬಂದು ಮಾತನಾಡಿಸಿದರೂ ಸುಲಭವಾಗಿ ಮಾತಿಗೆ ಸಿಗುತ್ತಾರೆ. ಎಲ್ಲರನ್ನೂ ಉತ್ತೇಜಿಸುತ್ತಾರೆ. ಅಂತೆಯೇ ಎಜಾಜ್ ಪಟೇಲ್ ಅವರ ಸ್ವಭಾವ ಎಂದು 41 ವರ್ಷದ ರೋಲೆಂಡ್ ಬ್ಯಾರಿಂಗ್ಟನ್ ಹೆಮ್ಮೆಯಿಂದ ಹೇಳುತ್ತಾರೆ.

  (ಮಾಹಿತಿ: ಜಿ ಕೃಷ್ಣನ್, CNN-News18)
  Published by:Vijayasarthy SN
  First published: