ರಾಜಕೋಟ್: ಭಾರತ ಕಿರಿಯರ ತಂಡದ ಮಾಜಿ ಕ್ಯಾಪ್ಟನ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಅನುಭವಿ ಆಟಗಾರರ ಪೈಕಿ ಒಬ್ಬರೆನಿದ್ದ ಅವಿ ಬರೋಟ್ (Avi Barot dies of Cardiac Arrest) ನಿಧನರಾಗಿದ್ದಾರೆ. 29 ವರ್ಷ ಪ್ರಾಯದವರಾಗಿದ್ದ ಅವಿ ಬರೋಟ್ ಈ ಸಣ್ಣ ವಯಸ್ಸಿಗೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಪಂದ್ಯವನ್ನ (IPL 2021 final match CSK vs KKR) ಮನೆಯಲ್ಲಿ ವೀಕ್ಷಿಸುತ್ತಿದ್ದ ವೇಳೆಯಲ್ಲೇ ಕಾರ್ಡಿಯಾಕ್ ಅರೆಸ್ಟ್ ಆಗಿ ಅವರು ಇಹಲೋಕ ತ್ಯಜಿಸಿರುವುದು ತಿಳಿದುಬಂದಿದೆ. ಅವರು ತಾಯಿ ಹಾಗೂ ಪತ್ನಿಯನ್ನ ಅಗಲಿದ್ಧಾರೆ.
ಅವಿ ಬರೋಟ್ ಶುಕ್ರವಾರ ಮೃತಪಟ್ಟಿರುವುದಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಹೇಳಿಕೆ ನೀಡಿದೆ. “ಸೌರಾಷ್ಟ್ರದ ಪ್ರಮುಖ ಕ್ರಿಕೆಟ್ ಆಟಗಾರರಾಗಿದ್ದ ಅವಿ ಬರೋಟ್ ಅವರ ಅಕಾಲಿಕ ಮರಣದಿಂದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರಿಗೂ ಆಘಾತವಾಗಿದೆ. ಅಕ್ಟೋಬರ್ 15 ಸಂಜೆ ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ಸ್ವರ್ಗಸ್ಥರಾದರು” ಎಂದು ಕ್ರಿಕೆಟ್ ಸಂಸ್ಥೆ ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಂತಾಪ ವ್ಯಕ್ತಪಡಿಸಿದೆ.
ಅಪರೂಪದ ಕ್ರಿಕೆಟಿಗ:
29 ವರ್ಷದ ಅವಿ ಬರೋಟ್ ವಿಕೆಟ್ ಕೀಪರ್, ಬ್ಯಾಟರ್ ಮತ್ತು ಬೌಲರ್ ಈ ಮೂರು ವಿದ್ಯೆಗಳನ್ನ ಬಲ್ಲವರಾಗಿದ್ದ ಅಪರೂಪದ ಕ್ರಿಕೆಟಿಗ. ಬಲಗೈ ಬ್ಯಾಟರ್ ಮತ್ತು ಆಫ್ ಸ್ಪಿನ್ ಮಾಡಬಲ್ಲವರಾಗಿದ್ದ ಅವರು ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. 2011ರಲ್ಲಿ ಭಾರತ ಕಿರಿಯರ ತಂಡದ ನಾಯಕರಾಗಿದ್ದರು. ಬಳಿಕ ಸೌರಾಷ್ಟ್ರ ಮತ್ತು ಹರಿಯಾಣ ತಂಡಗಳನ್ನೂ ಅವರು ಪ್ರತಿನಿಧಿಸಿದ್ದರು. ಒಟ್ಟು 38 ಪ್ರಥಮ ದರ್ಜೆ ಪಂದ್ಯಗಳು, 38 ಲಿಸ್ಟ್ ಎ ಪಂದ್ಯಗಳು ಹಾಗೂ 20 ದೇಶೀಯ ಟಿ20 ಪಂದ್ಯಗಳಲ್ಲಿ ಆಡಿದ್ದರು.
ಅವಿ ಬರೋಟ್ ಗಳಿಸಿದ ರನ್ಗಳು:
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 38 ಪಂದ್ಯಗಳಿಂದ 1,547 ರನ್ಗಳು, ಲಿಸ್ಟ್ ಕ್ರಿಕೆಟ್ನಲ್ಲಿ 38 ಪಂದ್ಯಗಳಿಂದ 1030 ರನ್ಗಳು, ಹಾಗೂ ದೇಶೀಯ ಟಿ20 ಕ್ರಿಕೆಟ್ನಲ್ಲಿ 20 ಪಂದ್ಯಗಳಿಂದ 717 ರನ್ ಗಳಿಸಿದ ಉಜ್ವಲ ಪ್ರತಿಭೆ ಎನಿಸಿದ್ದರು. ಸೌರಾಷ್ಟ್ರ ಪರ ಅವರು 21 ರಣಜಿ ಪಂದ್ಯ, 17 ಲಿಸ್ಟ್ ಎ ಪಂದ್ಯ ಹಾಗೂ 11 ಟಿ20 ಪಂದ್ಯಗಳನ್ನ ಆಡಿದ್ದರು. ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ ತಂಡದಲ್ಲಿ ಅವರೂ ಇದ್ದದ್ದು ವಿಶೇಷ. ಇದೇ ವರ್ಷ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಗೋವಾ ವಿರುದ್ಧದ ಪಂದ್ಯವೊಂದರಲ್ಲಿ ಅವಿ ಬರೋಟ್ ಕೇವಲ 53 ಬಾಲ್ನಲ್ಲಿ 122 ರನ್ ಗಳಿಸಿ ಗಮನ ಸೆಳೆದಿದ್ದರು. ಐದು ದಿನಗಳ ಹಿಂದಷ್ಟೇ ಅವರು ರಿಲಾಯನ್ಸ್ ಜಿ-1 ಟಿ20 ಟೂರ್ನಿಯ ಫೈನಲ್ನಲ್ಲಿಯೂ ಅವರು 43 ಬಾಲ್ನಲ್ಲಿ 72 ರನ್ ಚಚ್ಚಿ ಸೌರಾಷ್ಟ್ರ ಚಾಂಪಿಯನ್ ಆಗುವಂತೆ ಮಾಡಿದ್ದರು.
ಇದನ್ನೂ ಓದಿ: CSK Champions- ಕೆಕೆಆರ್ ನಿರಾಸೆ; ಚೆನ್ನೈ ಸೂಪರ್ ಕಿಂಗ್ಸ್ 4ನೇ ಬಾರಿ ಐಪಿಎಲ್ ಚಾಂಪಿಯನ್
ರಣಜಿ ಕ್ರಿಕೆಟ್ನಲ್ಲಿ ಒಂದು ಶತಕ ಹಾಗೂ ಟಿ20 ಕ್ರಿಕೆಟ್ನಲ್ಲಿ ಒಂದು ಶತಕ ಭಾರಿಸಿದ್ದರು. ಟಿ20 ಕ್ರಿಕೆಟ್ನಲ್ಲಿ ಅದ್ವಿತೀಯ ಪ್ರದರ್ಶನ ನೀಡಿರುವ ಅವರು ಅದರಲ್ಲಿ 37.73 ರನ್ ಸರಾಸರಿ ಹೊಂದಿದ್ದಾರೆ. ಸ್ಟ್ರೈಕ್ ರೇಟ್ ಕೂಡ 146.62 ಇದೆ. ಈ ವರ್ಷ ಗೋವಾ ವಿರುದ್ಧ ಅವರು ಆಡಿದ ಆಟ ಎಲ್ಲಾ ಐಪಿಎಲ್ ತಂಡಗಳ ಮ್ಯಾನೇಜ್ಮೆಂಟ್ ಕಣ್ಣಿಗೆ ಬಿದ್ದಿತ್ತು. ಮುಂದಿನ ಋತುವಿನ ಐಪಿಎಲ್ಗಾಗಿ ನಡೆಯುವ ಆಟಗಾರರ ಹರಾಜಿನಲ್ಲಿ ಅವರು ಯಾವುದಾದರೂ ತಂಡದ ಪಾಲಾಗುವ ಸಾಧ್ಯತೆಯೂ ಇತ್ತು ಎಂದು ಅವರ ಆಪ್ತ ವಲಯ ಅಭಿಪ್ರಾಯಪಟ್ಟಿದ್ದಾರೆ.
ಜಯ್ ಶಾ ಸಂತಾಪ:
ಬಿಸಿಸಿಐ ಕಾರ್ಯದರ್ಶಿ ಸೇರಿದಂತೆ ಹಲವರು ಅವಿ ಬರೋಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತ ಅಂಡರ್-19, ಸೌರಾಷ್ಟ್ರ ಮತ್ತು ಹರಿಯಾಣ ತಂಡಗಳನ್ನ ಪ್ರತಿನಿಧಿಸಿದ್ದ ಅವಿ ಬರೋಟ್ ಉದಯೋನ್ಮುಖ ಪ್ರತಿಭೆಯಾಗಿದ್ದರು. ಅವರು ಇಷ್ಟು ಬೇಗನೇ ನಮ್ಮನ್ನ ಅಗಲಿದ್ದು ಆಘಾತ ನೀಡಿದೆ. ಅರ ಕುಟುಂಬ ಮತ್ತು ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಜಯ್ ಶಾ ಪ್ರಾರ್ಥಿಸಿದ್ದಾರೆ.
Extremely shocked and saddened to learn of the untimely demise of Avi Barot. A bright young cricketer, who represented India U19, Saurashtra and Haryana has left us all too early. Condolences to his family and friends in this hour of grief. 🙏🏽
— Jay Shah (@JayShah) October 16, 2021
“ಅವಿ ಬರೋಟ್ ಒಬ್ಬ ಅದ್ಭುತ ಸಹ-ಆಟಗಾರರಾಗಿದ್ದರು. ಅವರ ಕ್ರಿಕೆಟ್ ಪ್ರತಿಭೆ ಅದ್ಭುತವಾದುದು. ಇತ್ತೀಚಿನ ದೇಶೀಯ ಪಂದ್ಯಗಳಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು… ಅವಿ ಬರೋಟ್ ಒಳ್ಳೆಯ ವ್ಯಕ್ತಿತ್ವದವರಾಗಿದ್ದರು. ಅವರ ನಿಧನದಿಂದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರಿಗೂ ಶಾಕ್ ಆಗಿದೆ” ಎಂದು ಜಯ್ ಶಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ