ಪಾಕಿಸ್ತಾನದ ಎಡಗೈ ಬ್ಯಾಟ್ಸ್ಮನ್ ಫಖರ್ ಝಮಾನ್ ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 193 ರನ್ ಬಾರಿಸುವ ಮೂಲಕ ಚೇಸಿಂಗ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ನೀಡಿದ 342 ರನ್ಗಳನ್ನು ಬೆನ್ನತಿದ ಪಾಕಿಸ್ತಾನಕ್ಕೆ ಫಖರ್ ಉತ್ತಮ ಆರಂಭ ಒದಗಿಸಿದ್ದರು.
ಆರಂಭದಲ್ಲಿ ತುಸು ಎಚ್ಚರಿಕೆಯ ಆಟವಾಡಿದ ಫಖರ್ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಈ ಮೂಲಕ 10 ಸಿಕ್ಸರ್ ಹಾಗೂ 18 ಬೌಂಡರಿಗಳನ್ನೊಳಗೊಂಡ ಸಿಡಿಲಬ್ಬರದ 193 ರನ್ ಸಿಡಿಸಿದರು. ಈ ಭರ್ಜರಿ ಇನಿಂಗ್ಸ್ನೊಂದಿಗೆ ಶೇನ್ ವಾಟ್ಸನ್ ಹೆಸರಿನಲ್ಲಿದ್ದ ಸೆಕೆಂಡ್ ಇನಿಂಗ್ಸ್ನ ಅತ್ಯಧಿಕ ಮೊತ್ತದ ದಾಖಲೆ ಫಖರ್ ಪಾಲಾಯಿತು. 2011ರಲ್ಲಿ ವಾಟ್ಸನ್ ಬಾಂಗ್ಲಾದೇಶದ ವಿರುದ್ಧ 185 ಬಾರಿಸಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿತ್ತು.
ಇದೀಗ 155 ಎಸೆತಗಳಲ್ಲಿ 193 ರನ್ ಬಾರಿಸುವ ಮೂಲಕ ಫಖರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಪಾಕಿಸ್ತಾನ ಸೋಲನುಭವಿಸಿತು. ಫಖರ್ ಝಮಾನ್ ಹೊರತಾಗಿ ಬಾಬರ್ ಅಜಂ 31 ರನ್ಗಳಿಸಿದ್ದು ಬಿಟ್ಟರೆ, ಉಳಿದ ಯಾವೊಬ್ಬ ಬ್ಯಾಟ್ಸ್ಮನ್ಗಳು 20ಕ್ಕಿಂತ ಹೆಚ್ಚು ರನ್ ಬಾರಿಸಿರಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ 17 ರನ್ಗಳ ರೋಚಕ ಜಯ ಸಾಧಿಸಿತು.
ಇನ್ನು ದಕ್ಷಿಣ ಆಫ್ರಿಕಾ, ನಾಯಕ ತೆಂಬಾ ಬವೂಮಾ, ಡಿ ಕಾಕ್, ರಸ್ಸಿ ವ್ಯಾನ್ ಡೆರ್ ಡುಸ್ಸೆಲ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕಗಳ ನೆರವಿನೊಂದಿಗೆ 50 ಓವರ್‌ಗಳಲ್ಲಿ 341 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ವಿರೋಚಿತವಾಗಿ ಬೆನ್ನತ್ತಿದ ಫಖರ್ ಝಮಾನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ